ಬಾಲಿವುಡ್‌ನ ಟೈಗರ್ ಬೇಬಿ ಫಿಲಂಸ್ (Tiger Baby Films) ಪ್ರೊಡಕ್ಷನ್ ಹೌಸ್‌ನಲ್ಲಿ ದೊಡ್ಡ ಕಳ್ಳತನವಾಗಿದೆ. ಬೆಲೆಬಾಳುವ ವಸ್ತುಗಳನ್ನ ಕಳುವು (Theft) ಮಾಡೋದು ಸಾಮಾನ್ಯ. ಆದರೆ ಇಲ್ಲಿ ಪ್ರೊಡಕ್ಷನ್ ಕಂಪನಿಗೆ ಸೇರಿದ ಡೇಟಾ ಒಳಗೊಂಡ ಹಾರ್ಡ್‌ಡಿಸ್ಕ್‌ಗಳನ್ನು ಕಳುವು ಮಾಡಲಾಗಿದೆ.
ಜೋಯಾ ಅಖ್ತರ್ ಒಡೆತನ (Zoya Akhtar) ಹಾಗೂ ರೀಮಾ ಕಗ್ಟಿ ಸಹಭಾಗಿತ್ವದ ಚಿತ್ರ ನಿರ್ಮಾಣ ಸಂಸ್ಥೆಗೆ ಸಂಬಂಧಿಸಿದ 119 ಹಾರ್ಡ್‌ಡ್ರೈವ್‌ಗಳನ್ನು ನಾಪತ್ತೆಯಾಗಿದ್ದಾಗಿ ದೂರು ದಾಖಲಾಗಿತ್ತು. ಇದು 13 ಲಕ್ಷ ರೂ. ಬೆಲೆ ಬಾಳುವ ಡೇಟಾ ಆಗಿದ್ದು, ಕದ್ದ ದುಷ್ಕರ್ಮಿಗಳು 15.20 ಲಕ್ಷಕ್ಕೆ ಮಾರಾಟ ಮಾಡಿರುವ ವಿಚಾರವೂ ಬೆಳಕಿದೆ ಬಂದಿದೆ.
ಕಳೆದ ಮೇ 21ರಂದು ಪ್ರೊಡಕ್ಷನ್ ಹೌಸ್‌ನಲ್ಲಿ ಹಾರ್ಡ್‌ಡಿಸ್ಕ್‌ಗಳು ಕಳ್ಳತನವಾದ ಬಳಿಕ ಕೂಡಲೇ ಜೋಯಾ ಅಖ್ತರ್ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನ ಶೀಘ್ರದಲ್ಲೇ ಪತ್ತೆ ಹಚ್ಚಿದ್ದ ಪೊಲೀಸರು ಹಲವರನ್ನ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ಓರ್ವ ಮೆಹಝ್ಬೀನ್ ಶೇಕ್ ಎಂಬಾತ ಪ್ರೊಡಕ್ಷನ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಅಸಿಸ್ಟಂಟ್ ಆಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಉದ್ದೇಶ ಕೇವಲ ಹಣ ಮಾಡೋದಾಗಿತ್ತೇ..? ಅಥವಾ ಇನ್ನೇನಾದ್ರೂ ಕುತಂತ್ರವಿತ್ತೇ ಅನ್ನೋ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಮುಂಬೈ ಪೊಲೀಸರು.
ಹಾರ್ಡ್ಡಿಸ್ಕ್ನಲ್ಲಿ ಪ್ರೊಡಕ್ಷನ್ ಆಗುತ್ತಿದ್ದ ಚಿತ್ರಗಳ ಮಾಹಿತಿ, ಶೂಟಿಂಗ್ ವಿಶುವಲ್ಸ್, ಆರ್ಟಿಸ್ಟ್ ಡೇಟಾ, ಪ್ರೊಡಕ್ಷನ್ ಕಂಪನಿ ಲೆಕ್ಕಾಚಾರಕ್ಕೆ ಸಂಬಂಧಿಸಿದ ನಾನಾ ರೀತಿಯ ಮಾಹಿತಿಗಳಿದ್ದವು ಎನ್ನಲಾಗುತ್ತಿದೆ.
