ಲಕ್ನೋ: ಉತ್ತರ ಪ್ರದೇಶದ ವೃದ್ಧ ಮಹಿಳೆಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Govt) ನೇತೃತ್ವದ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ.
ಮಂಗಳವಾರ (ಇಂದು) ಯೋಗಿ ಆದಿತ್ಯನಾಥ್ (Yogi Adityanath) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 60 ವರ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ಮಹಿಳೆಯರಿಗೆ ಜೀವಿತಾವಧಿವರೆಗೆ ಉಚಿತ ಬಸ್ (Free Lifetime Bus) ಸೇವೆ ಕಲ್ಪಿಸುವ ʻಲೋಕಮಾತಾ ಅಹಲ್ಯಾಬಾಯಿ ಮಾತೃಶಕ್ತಿ ಯೋಜನೆʼಗೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ 24 ಪ್ರಮುಖ ಪ್ರಸ್ತಾಪಗಳಿಗೂ ಅನುಮೋದನೆ ನೀಡಲಾಗಿದೆ.

ʻಲೋಕಮಾತಾ ಅಹಲ್ಯಾಬಾಯಿ ಮಾತೃಶಕ್ತಿ ಯೋಜನೆʼ ಅಡಿಯಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ನಿರ್ವಹಿಸುವ ಎಲ್ಲಾ ಬಸ್‌ಗಳಲ್ಲಿ 60 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಮಹಿಳೆಯರು (UP Women) ಜೀವಿತಾವಧಿ ವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದು ಉತ್ತರ ಪ್ರದೇಶದ ಮಹಿಳೆಯರಿಗೆ ಮಾತ್ರ ಅನ್ವಯ ಆಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸಾರಿಗೆ ಸಚಿವ ದಯಾಶಂಕರ್ ಸಿಂಗ್, ರಾಜ್ಯದ 1 ಕೋಟಿಗೂ ಹೆಚ್ಚು ಮಹಿಳೆಯರು ಈ ಉಚಿತ ಬಸ್ ಸೇವೆ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಮಹಿಳೆಯರು ಪ್ರಯಾಣಿಸುವಾಗ ವೋಟರ್ ಐಡಿ, ಆಧಾರ್ ಕಾರ್ಡ್‌ನಂತಹ ಯಾವುದಾದರೂ ಮಾನ್ಯ ಗುರುತಿನ ದಾಖಲೆಗಳನ್ನು ತೋರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಗಂಗಾ ಎಕ್ಸ್‌ಪ್ರೆಸ್‌ವೇ ವಿಸ್ತರಣೆಗೆ ಅನುಮೋದನೆ
ಇನ್ನೂ ಗಂಗಾ ಎಕ್ಸ್‌ಪ್ರೆಸ್‌ವೇಯ ವಿಸ್ತರಣೆಗೆ ಸಂಪುಟ ಅನುಮೋದನೆ ನೀಡಿದ್ದು, ಉತ್ತರಾಖಂಡದ ಹರಿದ್ವಾರದವರೆಗೆ ಅದರ ವಿಸ್ತರಣೆಗೆ ದಾರಿ ಮಾಡಿಕೊಡುತ್ತದೆ. ಅಂದಾಜು 10,761 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಬಿಜ್ನೋರ್ ಮತ್ತು ಹರಿದ್ವಾರ ನಡುವಿನ ಸಂಪರ್ಕ ಗಮನಾರ್ಹ ಸುಧಾರಣೆ ಕಾಣಲಿದೆ.
