ಮ್ಯಾಂಚೆಸ್ಟರ್: ಇಲ್ಲಿ ನಡೆದ ನಡೆದ ಮಹಿಳಾ T20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ದ.ಆಫ್ರಿಕಾ ತಂಡ 6 ವಿಕೆಟ್‌ಗಳ ಜಯಗಳಿಸಿದೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ 2 ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡಕ್ಕೆ ಈ ಮೂಲಕ ಕೊಂಚ ಹಿನ್ನಡೆಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತ್ತು. ಗುರಿಯನ್ನು ಬೆನ್ನಟ್ಟಿದ ದ.ಆಫ್ರಿಕಾ ತಂಡ 19.1 ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಜಯ ದಾಖಲಿಸಿತು.
ಭಾರತದ ಪರ ಶಫಾಲಿ ವರ್ಮಾ 15 ಎಸೆತಗಳಲ್ಲಿ 31 ರನ್, ದೀಪ್ತಿ ಶರ್ಮಾ 21 ಎಸೆತಗಳಲ್ಲಿ 29 ರನ್, ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 22 ಎಸೆತಗಳಲ್ಲಿ 24 ರನ್ ಕಲೆಹಾಕಿದರು.
ಸೌತ್ ಆಫ್ರಿಕಾ ಪರ ಮರಿಜಾನ್ನೆ ಕಪ್ಪ್ 45 ಎಸೆತಗಳಲ್ಲಿ 81 ರನ್ ಕಲೆಹಾಕಿ ಔಟಾಗದೆ ಉಳಿದರು. ಉಳಿದಂತೆ ತಾಜ್ಮಿನ್ ಬ್ರಿಟ್ಸ್ 36 ಎಸೆತಗಳಲ್ಲಿ 40 ರನ್, ನಾಯಕಿ ಲಾರಾ ವೋಲ್ವಾರ್ಡ್ 21 ಎಸೆತಗಳಲ್ಲಿ 20 ರನ್ ಕಲೆಹಾಕಿದರು.
