– ಮಹಿಳೆಯರ ರಕ್ಷಣೆಗಾಗಿಯೇ ಪರ್ದಾ ಪದ್ಧತಿ
– ಕುರಾನ್ ಉಲ್ಲೇಖಿಸಿ ವಾದಕ್ಕೆ ಸಮರ್ಥನೆ
ತಿರುವನಂತಪುರಂ: ಮಹಿಳೆಯರು(Women) ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್(Kanthapuram A P Aboobacker) ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪವಿತ್ರ ಕುರಾನ್(Quran) ಪ್ರಕಾರ ಮಹಿಳೆಯರು ಮನೆಗಳಲ್ಲೇ ಇರಬೇಕು. ಮಹಿಳೆಯರ ಘನತೆಯನ್ನು ಗೌರವಿಸಲು ಮತ್ತು ರಕ್ಷಿಸಲು ಇಸ್ಲಾಂನಲ್ಲಿ ಪರ್ದಾ ಪದ್ಧತಿಯನ್ನು ಸೂಚಿಸಲಾಗಿದೆ. ಮಹಿಳೆಯರನ್ನು ಸಾರ್ವಜನಿಕ ಕ್ಷೇತ್ರಕ್ಕೆ ತರುವುದು ಭಾರೀ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು.
ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಮಹಿಳೆಯರನ್ನು ಚಿನ್ನದ ಆಭರಣಗಳಿಗೆ ಹೋಲಿಸಿದ ಅವರು, ಚಿನ್ನದ ಅಂಗಡಿಯಲ್ಲಿ ಚಿನ್ನದ ಸರವನ್ನು ಕಪಾಟು, ಬಾಕ್ಸ್ ಮತ್ತು ಕಾಗದದಲ್ಲಿ ಭದ್ರವಾಗಿ ಇಡಲಾಗುತ್ತದೆ. ಅದೇ ರಸ್ತೆಯಲ್ಲಿ ಬಿದ್ದಿರುವ ರುಬ್ಬುವ ಕಲ್ಲಿನ ಮೇಲೆ ಎಲ್ಲರೂ ಕಾಲಿಟ್ಟು ಹೋಗುತ್ತಾರೆ. ಚಿನ್ನದ ಸರವನ್ನು ಹಾಗೆ ರಸ್ತೆಯಲ್ಲಿಟ್ಟರೆ ಜನರು ಮುಟ್ಟಿ ಅದರ ಸೌಂದರ್ಯ ಮತ್ತು ಮೌಲ್ಯ ಹಾಳಾಗುತ್ತದೆ. ಹಾಗೆಯೇ ಚಿನ್ನದ ಸರದ ಮೌಲ್ಯ ಉಳಿಯಬೇಕಾದರೆ ಅದನ್ನು ಸುರಕ್ಷಿತವಾಗಿ ಬಾಕ್ಸ್‌ನಲ್ಲಿ ಇಡಬೇಕಾಗುತ್ತದೆ ಎಂದು ವಿಚಿತ್ರ ಹೋಲಿಕೆ ನೀಡಿದರು.
ಮಹಿಳೆಯರು ತಮ್ಮ ಮನೆಗಳ ಒಳಗೇ ಇರಬೇಕು. ಅವರು ಸಾರ್ವಜನಿಕ ಕ್ಷೇತ್ರವನ್ನು ಪ್ರವೇಶಿಸಬಾರದು ಎಂದು ಪವಿತ್ರ ಕುರಾನ್ ಹೇಳುತ್ತದೆ. ಈ ನಿರ್ಬಂಧವು ಮಹಿಳೆಯರನ್ನು ಕೀಳಾಗಿ ಕಾಣುವುದಕ್ಕಾಗಿ ಅಲ್ಲ, ಬದಲಿಗೆ ಅವರನ್ನು ಗೌರವಿಸಲು ಮತ್ತು ರಕ್ಷಿಸಲು ಎಂದು ಅವರು ತಿಳಿಸಿದರು. ಮಹಿಳೆಯರನ್ನು ಸಾರ್ವಜನಿಕ ಸ್ಥಳಗಳಿಗೆ ತರುವುದು ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ ಅವರು, ಇದೇ ಕಾರಣಕ್ಕಾಗಿ ಇಸ್ಲಾಂ ಪರ್ದಾ ಪದ್ಧತಿಯನ್ನು ಸೂಚಿಸಿದೆ ಎಂದರು.
ಕೆಲ ದಿನಗಳ ಹಿಂದಷ್ಟೇ ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆಯು ಮಹಿಳೆಯರು ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳಬಾರದು ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದನ್ನು ಸಮರ್ಥಿಸಿಕೊಂಡ ಮುಸ್ಲಿಯಾರ್, ಕಳೆದ 100 ವರ್ಷಗಳಿಂದ ಧಾರ್ಮಿಕ ವಿದ್ವಾಂಸರು ಇದನ್ನೇ ಬೋಧಿಸುತ್ತಿದ್ದಾರೆ. ಇಸ್ಲಾಂ ಧರ್ಮವು ಹೆಣ್ಣು ಭ್ರೂಣಹತ್ಯೆಯನ್ನು ತಡೆದು, ಆಸ್ತಿ ಹಕ್ಕು ನೀಡಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದೆ. ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿರುವ ನಮಗೆ ಇದನ್ನು ಹೇಳುವ ಹಕ್ಕಿದೆ, ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಕಾಂತಪುರಂ ಅಬೂಬಕರ್ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಪಿಐ(ಎಂ) ಹಿರಿಯ ನಾಯಕಿ ಪಿ.ಕೆ. ಶ್ರೀಮತಿ ಸೇರಿದಂತೆ ಹಲವು ಮಹಿಳಾ ಮುಖಂಡರು ಇದನ್ನು ಸ್ತ್ರೀವಿರೋಧಿ ಹೇಳಿಕೆ ಎಂದು ಖಂಡಿಸಿದ್ದು, ಬದಲಾಗುತ್ತಿರುವ ಸಮಾಜದಲ್ಲಿ ಇಂತಹ ಪುರಾತನ ಮತ್ತು ಕಟ್ಟುಪಾಡುಗಳ ಮನಸ್ಥಿತಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
