ಭುವನೇಶ್ವರ: ಇಂಡಿಗೋ ವಿಮಾನ (IndiGo Flight) ರದ್ದಾಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳಾ ಪ್ರಯಾಣಿಕರೊಬ್ಬರು ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ಜೊತೆ ಜಗಳ ಮಾಡಿದ ಘಟನೆ ಭುವನೇಶ್ವರ ಏರ್‌ಪೋರ್ಟ್‌ನಲ್ಲಿ (Bhubaneswar Airport) ನಡೆದಿದೆ. ಮಹಿಳೆ ಕಿರುಚಾಡಿ ಗಲಾಟೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಲಗೇಜ್ ಬೆಲ್ಟ್ ಮೇಲೇರಿ ಸಿಬ್ಬಂದಿಯ ಟೇಬಲ್ ಮೇಲಿದ್ದ ಕಾಗದಗಳು ಮತ್ತು ದಾಖಲೆಗಳನ್ನು ಎಸೆದು ಕೂಗಾಡಿರಿವುದು ಸೆರೆಯಾಗಿದೆ. ಸಿಬ್ಬಂದಿ ಹಾಗೂ ಕೆಲವು ಪ್ರಯಾಣಿಕರು ಅವಳನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ಮಹಿಳೆ ತೀವ್ರ ಅಸಮಾಧಾನಗೊಂಡಿದ್ದು ವಾಗ್ವಾದ ಮುಂದುವರಿಸಿದ್ದರು. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾ ದಿನವೇ ದೆಹಲಿ ಹೈಕೋರ್ಟ್, ಏರ್‌ಪೋರ್ಟ್ ಸೇರಿ 5 ಸ್ಥಳಗಳಿಗೆ ಬಾಂಬ್ ಬೆದರಿಕೆ
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಸಿಐಎಸ್‌ಎಫ್ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಭದ್ರತಾ ಸಿಬ್ಬಂದಿ ಆಕೆಗೆ, ನೀವು ವಿಮಾನ ನಿಲ್ದಾಣದ ಆಸ್ತಿಗೆ ಹಾನಿ ಮಾಡುತ್ತಿದ್ದೀರಿ. ಮತ್ತೆ ಅಲ್ಲಿಗೆ ಹೋಗಬೇಡಿ ಎಂದು ಮನವರಿಕೆ ಮಾಡಿದರು. ಇದೇ ಮಹಿಳೆಗೆ ನೀರು ಕೊಟ್ಟು ಪ್ರಯಾಣಿಕರು ಸಮಾಧಾನ ಮಾಡಿದ್ದಾರೆ.
ಈ ಸಮಯದಲ್ಲಿ ಪ್ರಯಾಣಿಕರೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ಭದ್ರತಾ ಸಿಬ್ಬಂದಿಗೆ ವಿವರಿಸುತ್ತಾ, “ಇಂಕಾ ಬಚ್ಚಾ ಬಿಮಾರ್ ಹೈ” (ಆಕೆಯ ಮಗು ಅಸ್ವಸ್ಥವಾಗಿದೆ) ಎಂದಿದ್ದಾರೆ.
ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ನಡೆದಿದ್ದೇನು?
ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ರದ್ದಾಗಿತ್ತು. ಹಲವಾರು ಗಂಟೆಗಳ ಕಾಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾದಿದ್ದರು. ಕೆಲವರು ರದ್ದತಿಯ ಬಗ್ಗೆ ತಮಗೆ ಸರಿಯಾದ ಸಮಯದಲ್ಲಿ ತಿಳಿಸಿಲ್ಲ ಎಂದು ಆರೋಪಿಸಿದ್ದಾರೆ. ಇದರ ನಡುವೆ ಮಹಿಳೆ ಇಂಡಿಗೋ ವಿಮಾನದ ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿದ್ದಾರೆ.
ಮಹಿಳೆ ವರ್ತನೆಗೆ ವಿರೋಧ
ಮಹಿಳೆಯ ನಡವಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ವಿಮಾನ ರದ್ದತಿ ಅಥವಾ ಕಾರ್ಯಾಚರಣೆಯ ಅಡಚಣೆಗಳಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಜವಾಬ್ದಾರರಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
CISF ಕಠಿಣ ಕ್ರಮ ಕೈಗೊಳ್ಳಬೇಕು. ಅಂತಹ ನಡವಳಿಕೆ ತೋರುವ ಪ್ರಯಾಣಿಕರನ್ನು ವಿಮಾನ ಪ್ರಯಾಣದಿಂದ ನಿಷೇಧಿಸಬೇಕು ಎಂದು ಮತ್ತೊಬ್ಬರು ವಿಡಿಯೋಕ್ಕೆ ಕಾಮೆಂಟ್ ಮಾಡಿದ್ದಾರೆ. ಇಂಡಿಗೋ ಸಂಸ್ಥೆ ಈ ಘಟನೆ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಇದನ್ನೂ ಓದಿ: ಎಲ್ಲಾ ಪೈಲಟ್‌ಗಳಿಗೆ ಡೋಪ್ ಟೆಸ್ಟ್ | ಫುಕೆಟ್ – ದೆಹಲಿ ವಿಮಾನ ಪೈಲಟ್ ಗಾಂಜಾ ಸೇವನೆ ದೃಢಪಟ್ಟ ಬೆನ್ನಲ್ಲೇ ಏರ್ ಇಂಡಿಯಾ ನಿರ್ಧಾರ
