ಖಾಲಿ ಕೊಡ ಹಿಡಿದು ಬಿಸಿಲನ್ನೂ ಲೆಕ್ಕಿಸದೇ ಕಿಲೋಮೀಟರ್‌ಗಟ್ಟಲೆ ನಡೆಯುವ.. ಗುಟುಕು ನೀರಿಗಾಗಿ ಮಹಿಳೆಯರು ಹೊಡೆದಾಡಿಕೊಳ್ಳುವ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ. ನೀರು ಜೀವಕೋಟಿಗೆ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ. ಅದಕ್ಕಾಗಿ ಸಂಘರ್ಷಗಳೇ ನಡೆದಿರುವುದನ್ನು ಚರಿತ್ರೆಯಲ್ಲಿ ಗಮನಿಸಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ತಲೆತಲಾಂತರದಿಂದ ಹೆಣ್ಣುಮಕ್ಕಳ ಮೇಲೆಯೇ ಇದೆ. ನೀರಿನ ವಿಚಾರಕ್ಕೆ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಆಧುನಿಕ ಜಗತ್ತಿಗೆ ನೀರಿನ ಬಿಕ್ಕಟ್ಟು (Water Crisis) ದೊಡ್ಡ ಸಮಸ್ಯೆಯಾಗಿದೆ. ಹವಾಮಾನ ಬದಲಾವಣೆ, ಪರಿಸರ ನಾಶ, ಜನಸಂಖ್ಯಾ ಬೆಳವಣಿಗೆ ಮತ್ತು ದುರುಪಯೋಗ ನಿರ್ವಹಣೆಯಿಂದ ಜಾಗತಿಕ ನೀರಿನ ಬಿಕ್ಕಟ್ಟು ಹೆಚ್ಚಾಗಿದೆ. ಇದು ಮನುಷ್ಯ ಜೀವನ ಮತ್ತು ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರಿದ್ದು, ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ತೀವ್ರಗೊಳಿಸುತ್ತಿದೆ. ಹೌದು, ನೀರಿನ ಬವಣೆ ಹೆಚ್ಚಿದಷ್ಟೂ, ಲಿಂಗ ಅಸಮಾನತೆ ಹೆಚ್ಚುತ್ತಿದೆ. ನೀರಿನ ಬಿಕ್ಕಟ್ಟಿಗೂ, ಗಂಡು-ಹೆಣ್ಣಿನ ಸಮಾನತೆಗೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಹೆಣ್ಣು & ನೈಸರ್ಗಿಕ ಸಂಪನ್ಮೂಲ
ನಮ್ಮ ಪೊರೆಯುತ್ತಿರುವ ಸೃಷ್ಟಿಗೂ ಮತ್ತು ಹೆಣ್ಣಿಗೂ ಬಿಡಿಸಲಾಗದ ನಂಟಿದೆ. ಭೂಮಿ ಹಾಗೂ ಹೆಣ್ಣಿನ ಮೂಲ ಗುಣ ‘ಪಾಲನೆ’. ಈ ಧರೆ ಸಕಲ ಜೀವರಾಶಿಗಳ ಪೊರೆಯುತ್ತದೆ. ಹಾಗೆಯೇ, ಹೆಣ್ಣು ತನ್ನ ಕರುಳ ಬಳ್ಳಿ ಮತ್ತು ಕುಟುಂಬದ ಪಾಲನೆ ಮಾಡುತ್ತಾಳೆ. ಸಮಾಜದಲ್ಲಿ ಗುರುತರ ಜವಾಬ್ದಾರಿ ಇರುವ ಮಹಿಳೆಯರು ಮನೆಯ ಉಳಿವು ಮತ್ತು ಜೀವನೋಪಾಯಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಮೇಲೆಯೇ ಹೆಚ್ಚು ಅವಲಂಬಿತರಾಗುತ್ತಾರೆ. ಆದರೆ, ಅವರಿಗೆ ಭೂಮಿ, ಸಾಲ, ಮನೆಯ ಒಳಗೂ ಮತ್ತು ಹೊರಗೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಡಿಮೆ ಇರುತ್ತದೆ. ಈ ಭೂಮಿಯ ಮೇಲೆ ಏನೇ ಸಮಸ್ಯೆ ಎದುರಾದರೂ ಅದರ ಹೊಡೆತವನ್ನು ಮೊದಲು ತಿನ್ನುವವಳು ಹೆಣ್ಣು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ- ದೊಡ್ಡವರ ವಿರುದ್ಧ ಶೀಘ್ರವೇ ಎಫ್‌ಐಆರ್ ಸಾಧ್ಯತೆ

ಬವಣೆಯಲ್ಲಿ ಬೇಯುತ್ತಿರೋ ಹೆಣ್ಣು
ಜಗತ್ತಿನಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದೆ. ಅದರ ಭೀಕರ ಪರಿಣಾಮವನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಜಾಗತಿಕವಾಗಿ, ಅಂದಾಜು 38 ಕೋಟಿ ಮಹಿಳೆಯರು ಈಗಾಗಲೇ ನೀರಿನ ಒತ್ತಡದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2050 ರ ವೇಳೆಗೆ ಈ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಮಧ್ಯ ಏಷ್ಯಾ ಅತ್ಯಂತ ಭೀಕರ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಜೀವನೋಪಾಯಕ್ಕೆ ನೀರು ಬೇಕು. ಅದನ್ನು ಹೊಂದಿಸುವ ಜವಾಬ್ದಾರಿ ಈ ಸಮಾಜದಲ್ಲಿ ಪುರುಷನಿಗಿಂತ ಹೆಣ್ಣಿನ ಮೇಲೆಯೇ ಹೆಚ್ಚು. ಬರಗಾಲದಂತಹ ಪರಿಸ್ಥಿತಿಯಲ್ಲಿ ಖಾಲಿ ಕೊಡ ಹಿಡಿದು ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ಅಲೆಯುವವರು ಮಹಿಳೆಯರೇ.
20,500ಕ್ಕೂ ಹೆಚ್ಚು ಮಹಿಳೆಯರು ಸಾವು
ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಮಾನವನ ಮೂಲಭೂತ ಹಕ್ಕು. ಇದು ಲಿಂಗ ಸಮಾನತೆಯ (Gender Equality) ಮೂಲಾಧಾರವಾಗಿದೆ. ಆದರೂ ಅಂತರಗಳು ಸ್ಪಷ್ಟವಾಗಿವೆ. 2019 ರಲ್ಲಿ, 52 UNECE ದೇಶಗಳಲ್ಲಿ 20,500 ಕ್ಕೂ ಹೆಚ್ಚು ಮಹಿಳೆಯರು ಅಸುರಕ್ಷಿತ ನೀರು, ನೈರ್ಮಲ್ಯ ಮತ್ತು ಅದಕ್ಕೆ ಸಂಬಂಧಿಸಿದ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಈ ರಾಷ್ಟ್ರಗಳ ಪೈಕಿ ಸುಮಾರು ಅರ್ಧದಷ್ಟು ದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಮರಣದ ಅಪಾಯಗಳನ್ನು ಎದುರಿಸಿದ್ದಾರೆ. ನೈರ್ಮಲ್ಯ ಸೌಲಭ್ಯಗಳು ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಿವೆ. ಉಜ್ಬೇಕಿಸ್ತಾನ, ಮೊಲ್ಡೊವಾ ಮತ್ತು ತಜಕಿಸ್ತಾನ್‌ನಲ್ಲಿ ಅಂದಾಜು 50 ಲಕ್ಷ ಮಹಿಳೆಯರಿಗೆ ಮನೆಯಲ್ಲಿ ಮೂಲಭೂತ ಕೈ ತೊಳೆಯುವ ಸೌಲಭ್ಯಗಳೇ ಇಲ್ಲ. ಈ ಅನೈರ್ಮಲ್ಯದಿಂದ ಮಹಿಳೆಯರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಸಾರ್ವಜನಿಕ ಜೀವನ ಸುಭೀಕ್ಷ, ಘನತೆಯಿಂದ ಇರಬೇಕಾದರೆ ನೀರು ಮತ್ತು ನೈರ್ಮಲ್ಯ ಅತ್ಯಗತ್ಯ. ಮುಟ್ಟಿನಿಂದಲೂ ಮಹಿಳೆಯರು ಮತ್ತು ಹುಡುಗಿಯರು ನಾನಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮುಟ್ಟಿನ ಸಂದರ್ಭಗಳಲ್ಲಿ ಸುರಕ್ಷಿತ ಮತ್ತು ಖಾಸಗಿ ಸೌಲಭ್ಯಗಳು ಸಿಗದೇ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುವುದು ಹೆಚ್ಚು.
1.8 ಶತಕೋಟಿ ಜನರಿಗೆ ಮನೆಯಲ್ಲಿ ಕುಡಿಯುವ ನೀರಿಲ್ಲ
ಪ್ರಪಂಚದಾದ್ಯಂತ, 1.8 ಶತಕೋಟಿ ಜನರಿಗೆ ಮನೆಯಲ್ಲಿ ಕುಡಿಯುವ ನೀರಿಲ್ಲ. ಹೆಚ್ಚಿನ ಮನೆಗಳಲ್ಲಿ ನೀರು ಸಂಗ್ರಹಿಸುವ ಜವಾಬ್ದಾರಿಯನ್ನು ಹೆಣ್ಣುಮಕ್ಕಳೇ ನಿರ್ವಹಿಸುತ್ತಾರೆ. ಪ್ರತಿದಿನ 25 ಕೋಟಿಯಷ್ಟು ಗಂಟೆಗಳನ್ನು ನೀರು ತರುವುದಕ್ಕಾಗಿಯೇ ಕಳೆಯುತ್ತಾರೆ. 15 ವರ್ಷದೊಳಗಿನ ಹುಡುಗಿಯರು ಈ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ಹುಡುಗರಿಗಿಂತ ಎರಡು ಪಟ್ಟು ಹೆಚ್ಚಿದೆ. ನೀರನ್ನು ತರುವುದು, ಸಂಗ್ರಹಿಸುವುದು ಮತ್ತು ವೇತನ ರಹಿತ ಆರೈಕೆ ಮನೆಕೆಲಸದ ಭಾಗವಾಗಿದೆ. ಇದು ಮಹಿಳೆಯರ ಶಿಕ್ಷಣ, ಸಂಬಳದ ಉದ್ಯೋಗ ಮತ್ತು ವಿಶ್ರಾಂತಿಯ ಸಮಯವನ್ನು ಸೀಮಿತಗೊಳಿಸುತ್ತದೆ. ಈ ಅದೃಶ್ಯ ಶ್ರಮವು ಜೀವನ ಪಥವನ್ನು ರೂಪಿಸುತ್ತದೆ. ಆಗಾಗ್ಗೆ ಮಹಿಳೆಯರು ಮತ್ತು ಹುಡುಗಿಯರು ನಿರ್ಬಂಧಿತ ಆಯ್ಕೆಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ.

ನೀರಿನ ಅಭದ್ರತೆಯೂ, ಸುರಕ್ಷತೆಯ ಸವಾಲುಗಳೂ
ನೀರಿನ ಮೂಲಗಳು ದೂರದಲ್ಲಿದ್ದಾಗ ಹೆಣ್ಣುಮಕ್ಕಳು ಹೆಚ್ಚು ದೂರ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಕಿರುಕುಳ, ಹಿಂಸೆ ಮತ್ತು ಗಾಯಗಳಿಗೆ ಹೆಚ್ಚು ತುತ್ತಾಗುತ್ತಾರೆ. ಸುರಕ್ಷಿತ ನೈರ್ಮಲ್ಯ ಸೌಲಭ್ಯಗಳ ಕೊರತೆ ಅವರ ಘನತೆ ಮತ್ತು ಭದ್ರತೆಯನ್ನು (ಗ್ರಾಮೀಣ ಭಾಗಗಳಲ್ಲಿ) ಮತ್ತಷ್ಟು ಹಾಳು ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ನೀರಿಗಾಗಿ ಜಗಳವಾಗಿ ಉದ್ವಿಗ್ನತೆ ಸೃಷ್ಟಿಯಾಗಬಹುದು. ಮಧ್ಯ ಏಷ್ಯಾದಲ್ಲಿ, ನೀರಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿವಾದಗಳು ಸ್ಥಳೀಯ ಸಂಘರ್ಷಗಳು ಮತ್ತು ಸ್ಥಳಾಂತರಕ್ಕೆ ಕಾರಣವಾಗಿವೆ. ಉಕ್ರೇನ್‌ನಲ್ಲಿ ನೀರಿನ ವ್ಯವಸ್ಥೆಗಳಿಗೆ ಹಾನಿಯಾಗಿದ್ದು, ಪರಿಸ್ಥಿತಿಯನ್ನು ಕಷ್ಟಕರವಾಗಿಸಿದೆ. ಇಂತಹ ಬೆಳವಣಿಗೆಗಳು ಆರೈಕೆದಾರರಾದ ಮಹಿಳೆಯರ ಮೇಲೆ ಅಸಮಾನ ಪರಿಣಾಮ ಬೀರುತ್ತದೆ. ಇದನ್ನೂ ಓದಿ: ಮುಂಗಾರು ಆರಂಭವಾದ್ರೂ ಮಳೆ ಸುಳಿವಿಲ್ಲ – ಕೆಲ ಜಿಲ್ಲೆಗಳ ಜೀವಜಲ ಖಾಲಿ ಖಾಲಿ
ಮಹಿಳೆಯರೇ ಪರಿಹಾರ
ಮನೆಗಳು ಮತ್ತು ಸಮುದಾಯಗಳಲ್ಲಿ ಮಹಿಳೆಯರು ಪ್ರತಿದಿನ ನೀರನ್ನು ನಿರ್ವಹಿಸುತ್ತಾರೆ. ಆದರೂ ಈ ಸಮಾಜ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಅವರಿಗೆ ಪ್ರಾತಿನಿಧ್ಯ ಕಡಿಮೆ. 2023 ರಲ್ಲಿ, 50 UNECE ದೇಶಗಳಲ್ಲಿ 14 ದೇಶಗಳು ನೀರಿನ ಆಡಳಿತದಲ್ಲಿ ಅತ್ಯಂತ ಕಡಿಮೆಯಿಂದ ಮಧ್ಯಮ ಲಿಂಗ ಏಕೀಕರಣವನ್ನು ವರದಿ ಮಾಡಿವೆ. ನೀರಿನ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆ ಶುಚಿಗೊಳಿಸುವುದು.. ಹೀಗೆ ಮನೆಯಲ್ಲಿ ಎಲ್ಲ ಕಾರ್ಯಗಳಲ್ಲೂ ಅಚ್ಚುಕಟ್ಟಾಗಿ ನೀರಿನ ಬಳಕೆ ಮಾಡುತ್ತಾರೆ. ಈಗಿನ ಕಾಲದಲ್ಲಿ ಎಲ್ಲ ಕಾರ್ಯಗಳಿಗೂ ಕೈ ಬದಲಿಗೆ ಯಂತ್ರಗಳನ್ನೇ ಬಳಸುವಂತಾಗಿದೆ. ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯುವುದರಿಂದ ನೀರಿನ ಬಳಕೆ ದುಪ್ಪಟ್ಟಾಗುತ್ತದೆ. ಆದರೆ, ಕೈಯಲ್ಲಿ ಬಟ್ಟೆ ಒಗೆಯುವುದರಿಂದ ಮಿತಬಳಕೆ ಇರುತ್ತದೆ. ಮಹಿಳೆಯರಂತೆ ಜಾಣ್ಮೆಯಿಂದ ನೀರನ್ನು ಬಳಸುವುದು ಪುರುಷರಿಂದ ಸಾಧ್ಯವಿಲ್ಲ.
ನೀರಿನ ಬಿಕ್ಕಟ್ಟು ನಿರ್ವಹಣೆ ಹೇಗೆ?
ಮನೆಯಲ್ಲಿ ನೀರು ನಿರ್ವಹಣೆಗೆ ಹೆಣ್ಣುಮಕ್ಕಳನ್ನೇ ಹೆಚ್ಚು ಜವಾಬ್ದಾರರನ್ನಾಗಿ ಮಾಡುವುದುನ್ನು ತಪ್ಪಿಸಬೇಕು. ಮಹಿಳೆಯರಷ್ಟೇ ಜವಾಬ್ದಾರಿಯನ್ನು ಪುರುಷರಿಗೂ ಸಮಾನವಾಗಿ ವರ್ಗಾಯಿಸಬೇಕು. ಹೀಗೆ ಮಾಡುವುದರಿಂದ ನೀರು ನಿರ್ವಹಣೆ ಕುರಿತು ಗಂಡುಮಕ್ಕಳಿಗೂ ಅರಿವು ಉಂಟಾಗುತ್ತದೆ. ನೀರು ಸಂಗ್ರಹ ಕಷ್ಟ ಎಂಬುದು ಅರಿವಿಗೆ ಬಂದಾಗ, ಮಿತ ಬಳಕೆ ಬಗ್ಗೆ ಜಾಗೃತರಾಗಬಹುದು. ಅದು ಲಿಂಗ ಭೇದವಿಲ್ಲದೇ ಎರಡೂ ಕಡೆಯಿಂದ ಆಗಬೇಕು. ‘ನೀರಿನ ನಿರ್ವಹಣೆಯಲ್ಲಿ ಮಹಿಳೆಯರ ಕೊಡುಗೆ ಅಪಾರ. ಆದರೆ, ಮಹಿಳೆಯರನ್ನು ಪ್ರಾಥಮಿಕವಾಗಿ ಬದಲಾವಣೆಯ ಏಜೆಂಟ್‌ಗಳು ಅನ್ನೋದಕ್ಕಿಂತ ಬಲಿಪಶುಗಳನ್ನಾಗಿ ನೋಡುವುದೇ ಹೆಚ್ಚು’ ಎಂದು ನೆದರ್‌ಲ್ಯಾಂಡ್ಸ್ನ ಜೀವಶಾಸ್ತ್ರಜ್ಞ/ನೀತಿಶಾಸ್ತ್ರಜ್ಞ ಆಲಿಸ್ ಬೌಮನ್-ಡೆಂಟೆನರ್ ಹೇಳುತ್ತಾರೆ.
ಕಜಕಿಸ್ತಾನದಲ್ಲಿ ಬದಲಾವಣೆ ದಾರಿ
ನೀರಿನ ಬಿಕ್ಕಟ್ಟು ನಿರ್ವಹಣೆಗೆ ಕಜಕಿಸ್ತಾನದಲ್ಲಿ ಮಹಿಳೆಯರು ಹಲವಾರು ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಗ್ರಾಮೀಣ ನಾಯಕಿ ಸಬೋಹತ್ ಮಿರ್ಜೋಕುಲೋವಾ, ನೀರು ಉಳಿಸುವ ಅಭ್ಯಾಸಗಳನ್ನು ಉತ್ತೇಜಿಸಲು ಕೆಲಸ ಮಾಡುತ್ತಿದ್ದಾರೆ. ‘ನಾನು ಪ್ರತಿ ಮನೆಯಲ್ಲೂ ಹನಿ ನೀರಾವರಿಯನ್ನು ಪರಿಚಯಿಸಲು ಬಯಸುತ್ತೇನೆ. ನಾನು ಸಹಾಯ ಮಾಡಲು ಮತ್ತು ಅದರ ಪ್ರಯೋಜನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲು ಸಿದ್ಧಳಿದ್ದೇನೆ. ನೀರನ್ನು ಉಳಿಸಲು ಮತ್ತು ಮನೆಯಲ್ಲಿ ಅದರ ಬಳಕೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಪರಿಹಾರವಾಗಿದೆ’ ಎಂದು ತಿಳಿಸಿದ್ದಾರೆ. ಮನೆಯಲ್ಲಿ ಯಾಂತ್ರಿಕವಾದ ಕಾರ್ಯಗಳಿಗೆ ಹೆಚ್ಚು ಅವಲಂಬನೆ ಆಗುವುದನ್ನು ಕಡಿಮೆ ಮಾಡಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.
