Latest

ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

Published

on

Share this

–  ಪ್ರಕೃತಿ ಸಿಂಹ
ಪ್ರಿಲ್ 1 ರಿಂದ ದೇಶದಲ್ಲಿ ಬಿಎಸ್ 3 ಎಂಜಿನ್‍ವುಳ್ಳ ದ್ವಿಚಕ್ರ, ತ್ರಿಚಕ್ರ ಹಾಗೂ 4 ಚಕ್ರದ ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ನಿಷೇಧಿಸಲಾಗಿದೆ. ಬಿಎಸ್ 4 ಎಂಜಿನ್‍ವುಳ್ಳ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಬಿಎಸ್-3 ಎಂಜಿನ್‍ವುಳ್ಳ ವಾಹನಗಳನ್ನ ಸ್ಮಾರ್ಟ್ ಫೋನ್‍ಗಳ ಬೆಲೆಯಲ್ಲಿ ಆಫರ್ ನೀಡಿ ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಲಾಗಿತ್ತು. ಹಾಗಿದ್ರೆ ಏನಿದು ಬಿಎಸ್ ಮಾನದಂಡ? ಯಾವಾಗ ಜಾರಿಗಳಿಸಲಾಯ್ತು? ಎಲ್ಲದಕ್ಕೂ ಉತ್ತರ ಇಲ್ಲಿದೆ.

1. ಬಿಎಸ್- 3 ಅಂದ್ರೇನು?
ಬಿಎಸ್- 3 ಅಂದ್ರೆ ಭಾರತ್ ಸ್ಟೇಜ್ 3. ಭಾರತ್ ಸ್ಟೇಜ್ ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿದೆ.

2. ಯಾವಾಗ ಜಾರಿಗೊಳಿಸಲಾಯ್ತು?
ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್ 2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್ 3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್ 4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. ಇದೀಗ 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್ 4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

3. ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್‍ನಲ್ಲಿ ದೇಶದಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು.

4. ಮುಂದೆ ಬಿಎಸ್-5 ಮಾನದಂಡ ಬರುತ್ತಾ?
ಬಿಎಸ್ -5 ಮಾನದಂಡವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದ್ದು, 2020ರ ವೇಳೆಗೆ ದೇಶದಾದ್ಯಂತ ಬಿಎಸ್-6 ಮಾನದಂಡ ಜಾರಿಗೊಳಿಸಲು ಉದ್ದೇಶಿಸಿದೆ.

5. ಕಡಿಮೆ ಬೆಲೆಗೆ ಬಿಎಸ್-3 ವಾಹನಗಳ ಮಾರಾಟ ಮಾಡಿದ್ದು ಯಾಕೆ?
ಈಗಾಗಲೇ ನೋಂದಣಿಯಾಗಿರುವ ಬಿಎಸ್-3 ವಾಹನಗಳ ಮರುಮರಾಟ, ಮಾಲಿಕತ್ವ ಹಾಗೂ ವಿಳಾಸ ಬದಲಾವಣೆಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎಸ್ 3 ಎಂಜಿನ್ ಹೊಂದಿರುವ ವಾಹನಗಳ ಮೇಲೆ ಭಾರೀ ಡಿಸ್ಕೌಂಟ್ ನೀಡಿ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಲಾಗಿತ್ತು. ಈ ಬೈಕ್‍ಗಳನ್ನು 20, 25 ಸಾವಿರ ರೂ. ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು.

6. ಬಿಎಸ್- 3 ವಾಹನಗಳು ಎಷ್ಟಿವೆ?
ದೇಶದಾದ್ಯಂತ ವಿವಿಧ ಕಂಪೆನಿಗಳ ಒಟ್ಟು 8.2 ಲಕ್ಷ ಬಿಎಸ್ 3 ಎಂಜಿನ್‍ವುಳ್ಳ ವಾಹನಗಳ ದಾಸ್ತಾನು ಇದೆ. ಇವುಗಳಲ್ಲಿ 6.71 ಲಕ್ಷ ದ್ವಿಚಕ್ರ ವಾಹನಗಳು, 16 ಸಾವಿರ ಕಾರುಗಳು, 96 ಸಾವಿರ ಸರಕು ಸಾಗಣೆ ವಾಹನಗಳು ಹಾಗೂ 18 ಸಾವಿರ ಸರಕು ಸಾಗಣೆ ಆಟೋಗಳಿವೆ. ಈ ವಾಹನಗಳ ಒಟ್ಟು ಮೊತ್ತ 12 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.

7. ವಾಹನ ತಯಾರಕರು ಏನು ಮಾಡಬಹುದು?
ಬಿಎಸ್-4 ಮಾನದಂಡಕ್ಕೆ ಒಗ್ಗಿಕೊಳ್ಳಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರು ವಾಹನಗಳಲ್ಲಿ ಎವಾಪರೇಟಿವ್ ಎಮಿಷನ್ ಕಂಟ್ರೋಲ್ ಯೂನಿಟ್ ಅಳವಡಿಸಬೇಕು, ಇದರಿಂದಾಗಿ ನಿಲುಗಡೆ ಮಾಡಿದ ವೇಳೆಯಲ್ಲಿ ವಾಹನದಿಂದ ಇಂಧನ ಆವಿಯಾಗೋದು ಕಡಿಮೆಯಾಗುತ್ತದೆ. ಆದರೆ ಈ ರೀತಿ ಮಾಡಬೇಕಾದ್ರೆ ವಾಹನದ ವಿನ್ಯಾಸ ಕೂಡ ಬದಲಾಯಿಸಬೇಕು, ಇದು ತುಂಬಾ ಕಠಿಣವಾದ ಕೆಲಸ ಹಾಗೂ ದುಬಾರಿಯಾಗುತ್ತದೆ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ವಾಹನ ತಯಾರಕರಿಗೆ ಉಳಿದಿರೋ ಎರಡನೇ ಮಾರ್ಗವೆಂದರೆ ಬಿಎಸ್-3 ಮಾನದಂಡಕ್ಕೆ ಹೊಂದಿಕೆಯಾಗುವಂತಹ ರಾಷ್ಟ್ರಗಳಿಗೆ ಈ ವಾಹನಗಳನ್ನು ರಫ್ತು ಮಾಡಬೇಕಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement
Advertisement