ನಮ್ಮ ದೈನಂದಿನ ಊಟದ ತಟ್ಟೆಯಲ್ಲಿ ಹೊಟ್ಟೆ ತುಂಬಿಸುವ ಆಹಾರವೇನೋ ಇರುತ್ತದೆ, ಆದರೆ ದೇಹಕ್ಕೆ ಬೇಕಾದ ಅತ್ಯಗತ್ಯ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಕಾಡುವ ‘ಹಿಡನ್ ಹಂಗರ್’ (ಅಗೋಚರ ಹಸಿವು) ಇಂದಿನ ದಿನಗಳಲ್ಲಿ ಸದ್ದಿಲ್ಲದೆ ಆರೋಗ್ಯವನ್ನು ಕಸಿಯುತ್ತಿದೆ. ಇಂತಹ ಗುಪ್ತ ಅಪೌಷ್ಟಿಕತೆಗೆ ಸಹಕಾರ ನೀಡಿರುವ ಅದ್ಭುತ ಉತ್ತರವೇ ಈ ನೇರಳೆ ಆಲೂಗಡ್ಡೆ.
ಸಾಮಾನ್ಯ ಆಲೂಗಡ್ಡೆಗಿಂತ ಭಿನ್ನವಾಗಿ, ಇದರ ಆಕರ್ಷಕ ನೇರಳೆ ಬಣ್ಣಕ್ಕೆ ಕಾರಣವಾಗಿರುವ ‘ಆಂಥೋಸಯಾನಿನ್’ ಎಂಬ ಶಕ್ತಿಯುತ ಆ್ಯಂಟಿಆಕ್ಸಿಡೆಂಟ್, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಜೀವಕೋಶಗಳನ್ನು ಸಂರಕ್ಷಿಸುತ್ತದೆ. ಕೇವಲ ಕಾರ್ಬೋಹೈಡ್ರೆಟ್ಗೆ ಸೀಮಿತವಾಗದೆ, ಕಬ್ಬಿಣಾಂಶ, ಸತು, ವಿಟಮಿನ್ ‘ಸಿ’ ಹಾಗೂ ನಾರಿನಂಶದ ಸಮೃದ್ಧ ಗಣಿಯಾಗಿರುವ ಈ ತರಕಾರಿ, ಆಧುನಿಕ ಜಗತ್ತಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಸೂಪರ್ಫುಡ್ ಆಗಿ ಹೊರಹೊಮ್ಮುತ್ತಿದೆ.
ಕೇವಲ ಆಕರ್ಷಕ ಬಣ್ಣಕ್ಕಷ್ಟೇ ಸೀಮಿತವಾಗದ ಈ ನೇರಳೆ ಆಲೂಗಡ್ಡೆ, ಆಧುನಿಕ ಕೃಷಿ ಮತ್ತು ಪೌಷ್ಟಿಕತಾ ಕ್ರಾಂತಿಯ ಹೊಸ ಸಂಕೇತವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಹೆಚ್ಚುತ್ತಿರುವ ರಕ್ತಹೀನತೆ ಹಾಗೂ ಸತುವಿನ ಕೊರತೆಯಂತಹ ಅಪೌಷ್ಟಿಕತಾ ಸಮಸ್ಯೆಗಳಿಗೆ ಇದು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಅಧಿಕ ನಾರಿನಂಶ ಮತ್ತು ರಕ್ತಸಕ್ಕರೆ ಏರಿಕೆ ಸೂಚ್ಯಂಕ, ಮಧುಮೇಹಿಗಳಿಗೂ ಹಾಗೂ ತೂಕ ನಿಯಂತ್ರಣದಲ್ಲಿಡಲು ಬಯಸುವವರಿಗೂ ಇದು ಉತ್ತಮ ಆಯ್ಕೆಯನ್ನಾಗಿಸಿದೆ.
ಸರ್ಕಾರದ ಉಪಕ್ರಮಗಳು:
ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ICAR) ಹಾಗೂ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ (CPRI, ಶಿಮ್ಲಾ) ಜೈವಿಕವಾಗಿ ಪೋಷಕಾಂಶ ಸಮೃದ್ಧವಾಗಿರುವ ಆಲೂಗಡ್ಡೆ ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿವೆ. ಕೇಂದ್ರ ಸರ್ಕಾರದ ‘ಪೋಷಣ್ ಅಭಿಯಾನ’ (POSHAN Abhiyaan) ಅಡಿಯಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಜೈವಿಕ ಬಲವರ್ಧಿತ ತರಕಾರಿಗಳು ಮತ್ತು ಧಾನ್ಯಗಳನ್ನು ಉತ್ತೇಜಿಸಲಾಗುತ್ತಿದ್ದು, ನೇರಳೆ ಆಲೂಗಡ್ಡೆಯನ್ನು ಈ ನಿಟ್ಟಿನಲ್ಲಿ ಭವಿಷ್ಯದ ಪ್ರಮುಖ ಆಹಾರ ಬೆಳೆಯಾಗಿ ಗುರುತಿಸಲಾಗಿದೆ.
ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಸ್ಥಳೀಯ ನೇರಳೆ ಮತ್ತು ಕೆಂಪು ಆಲೂಗಡ್ಡೆ ತಳಿಗಳ ವಾಣಿಜ್ಯ ಬೇಸಾಯಕ್ಕೆ ಕೃಷಿ ಇಲಾಖೆಗಳು ಉತ್ತೇಜನ ನೀಡುತ್ತಿವೆ. ಇದು ಅಪೌಷ್ಟಿಕತೆ ನಿವಾರಣೆಯ ಜೊತೆಗೆ ರೈತರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ತಂದುಕೊಡಲು ಸಹಕಾರಿಯಾಗಿದೆ.
ನೇರಳೆ ಆಲೂಗಡ್ಡೆ ಬೆಳೆಯುವುದು ಹೇಗೆ?
ಸಾಮಾನ್ಯ ಆಲೂಗಡ್ಡೆ ಬೆಳೆಯುವ ವಿಧಾನವನ್ನೇ ಬಹುತೇಕ ಹೋಲುವ ಈ ಬೆಳೆಗೆ ನಿರ್ದಿಷ್ಟ ಮಣ್ಣು ಮತ್ತು ಹವಾಗುಣ ಅತ್ಯಗತ್ಯ.
ತಂಪಾದ ಹವಾಗುಣ (15°C ನಿಂದ 22°C) ಬೆಳವಣಿಗೆಗೆ ಅತ್ಯಂತ ಸೂಕ್ತ. ನೀರು ಸರಾಗವಾಗಿ ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಬೇಕು. ಮಣ್ಣಿನ ಪಿ.ಎಚ್ (pH) ಮಟ್ಟ 5.2 ರಿಂದ 6.5 ರ ನಡುವೆ ಇರಬೇಕು. ಮೊಳಕೆಯೊಡೆದಿರುವ ಆರೋಗ್ಯಕರ ನೇರಳೆ ಗೆಡ್ಡೆಗಳನ್ನು ಬಿತ್ತನೆಗೆ ಬಳಸಲಾಗುತ್ತದೆ. ದೊಡ್ಡ ಗೆಡ್ಡೆಗಳಾದರೆ 2-3 ಮೊಳಕೆಗಳಿರುವಂತೆ ತುಂಡು ಮಾಡಿ, ಬೂದಿ ಅಥವಾ ಶಿಲೀಂಧ್ರನಾಶಕ ಲೇಪಿಸಿ 1-2 ದಿನ ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ 45–60 ಸೆಂ.ಮೀ ಹಾಗೂ ಗಿಡದಿಂದ ಗಿಡಕ್ಕೆ 20–25 ಸೆಂ.ಮೀ ಅಂತರದಲ್ಲಿ 5–8 ಸೆಂ.ಮೀ ಆಳಕ್ಕೆ ನಾಟಿ ಮಾಡಲಾಗುತ್ತದೆ.
ಮಣ್ಣಿನಲ್ಲಿ ತೇವಾಂಶ ಸದಾ ಇರಬೇಕು, ಆದರೆ ನೀರು ನಿಲ್ಲಬಾರದು. ಹನಿ ನೀರಾವರಿ ಪದ್ಧತಿ ಅತ್ಯಂತ ಪರಿಣಾಮಕಾರಿ. ಸಾವಯವ ಗೊಬ್ಬರ, ಪೊಟ್ಯಾಶ್ ಮತ್ತು ರಂಜಕಾಂಶ ಗೆಡ್ಡೆಯ ಗಾತ್ರ ಮತ್ತು ನೇರಳೆ ಬಣ್ಣ ಹೆಚ್ಚಿಸಲು ನೆರವಾಗುತ್ತವೆ.
ಎಲ್ಲಿ ಬೆಳೆಯಲಾಗುತ್ತದೆ?
ಹಿಮಾಚಲ ಪ್ರದೇಶ (ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ಇರುವ ಕುಫ್ರಿ/ಶಿಮ್ಲಾ ಭಾಗ), ಉತ್ತರಾಖಂಡ ಹಾಗೂ ಜಮ್ಮು-ಕಾಶ್ಮೀರ, ಮಣಿಪುರ, ಮೇಘಾಲಯ, ಸಿಕ್ಕಿಂ ಮತ್ತು ಅಸ್ಸಾಂ. ಈಶಾನ್ಯ ಭಾಗದ ಬುಡಕಟ್ಟು ಸಮುದಾಯಗಳು ಸಾಂಪ್ರದಾಯಿಕವಾಗಿಯೇ ಕಡು ಕೆಂಪು ಮತ್ತು ನೇರಳೆ ಆಲೂಗಡ್ಡೆಗಳನ್ನು ತಮ್ಮ ಹಿತ್ತಲಿನಲ್ಲಿ ಬೆಳೆಯುತ್ತಾ ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಕರ್ನಾಟಕದ ತಂಪಾದ ಬಯಲು ಪ್ರದೇಶಗಳಲ್ಲೂ (ಉದಾಹರಣೆಗೆ ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಲ್ಲಿ ಆಯ್ದ ರೈತರು) ಸಾವಯವ ಹಾಗೂ ಒಪ್ಪಂದ ಕೃಷಿ ಮೂಲಕ ಇದನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ:
ನೇರಳೆ ಆಲೂಗಡ್ಡೆಯ ಮೂಲ ನೆಲೆ ದಕ್ಷಿಣ ಅಮೆರಿಕದ ಆಂಡಿಸ್ ಪರ್ವತ ಶ್ರೇಣಿ. ಇಲ್ಲಿ ನೂರಾರು ಪ್ರಾಚೀನ ನೇರಳೆ/ಕಪ್ಪು ಆಲೂಗಡ್ಡೆ ತಳಿಗಳನ್ನು ಇಂದಿಗೂ ಸಂರಕ್ಷಿಸಿ ಬೆಳೆಯಲಾಗುತ್ತದೆ. ಯುಕೆ, ಫ್ರಾನ್ಸ್, ಅಮೆರಿಕ ಮತ್ತು ಕೆನಡಾಗಳಲ್ಲಿ ಆರೋಗ್ಯಕರ ಸೂಪರ್ಫುಡ್ ಆಗಿ ಇದಕ್ಕೆ ಭಾರೀ ಬೇಡಿಕೆಯಿದ್ದು, ವಾಣಿಜ್ಯ ದೃಷ್ಟಿಯಿಂದ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ನೇರಳೆ ಆಲೂಗಡ್ಡೆ ಸೇವನೆಯಿಂದಾಗುವ ಲಾಭಗಳು:
ನೇರಳೆ ಆಲೂಗಡ್ಡೆಯ ಆಕರ್ಷಕ ಬಣ್ಣಕ್ಕೆ ಕಾರಣವಾಗಿರುವ ಆಂಥೋಸಯಾನಿನ್ (Anthocyanin) ಮತ್ತು ಇತರ ನೈಸರ್ಗಿಕ ಸಂಯುಕ್ತಗಳು ದೇಹದ ಮೇಲೆ ಪ್ರಭಾವಶಾಲಿ ವೈದ್ಯಕೀಯ ಪ್ರಯೋಜನಗಳನ್ನು ಬೀರುತ್ತವೆ.
ಬ್ಲೂಬೆರ್ರಿ ಮತ್ತು ಕಪ್ಪು ದ್ರಾಕ್ಷಿಯಲ್ಲಿರುವಷ್ಟೇ ಪ್ರಮಾಣದ ಆಂಥೋಸಯಾನಿನ್ ಇದರಲ್ಲಿದ್ದು, ಸಾಮಾನ್ಯ ಬಿಳಿ ಆಲೂಗಡ್ಡೆಗಿಂತ ಸುಮಾರು 2 ರಿಂದ 3 ಪಟ್ಟು ಹೆಚ್ಚು ಆ್ಯಂಟಿಆಕ್ಸಿಡೆಂಟ್ ಶಕ್ತಿಯನ್ನು ಹೊಂದಿದೆ.
ಮಧುಮೇಹ ನಿಯಂತ್ರಣ:
ಸಾಮಾನ್ಯ ಬಿಳಿ ಆಲೂಗಡ್ಡೆ ತಿಂದ ತಕ್ಷಣ ರಕ್ತದಲ್ಲಿ ಗ್ಲೂಕೋಸ್ ಮಟ್ಟ ವೇಗವಾಗಿ ಏರುತ್ತದೆ. ಆದರೆ ನೇರಳೆ ಆಲೂಗಡ್ಡೆಯಲ್ಲಿರುವ ಸೇವನೆಯಿಂದ ರಕ್ತಕ್ಕೆ ಸಕ್ಕರೆ ನಿಧಾನವಾಗಿ ಬಿಡುಗಡೆಯಾಗುತ್ತದೆ. ಇದರಲ್ಲಿರುವ ನಾರಿನಂಶ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಜೀವಕೋಶಗಳು ಇನ್ಸುಲಿನ್ಗೆ ಸರಿಯಾಗಿ ಸ್ಪಂದಿಸುವಂತೆ (Insulin Sensitivity) ಪ್ರೇರೇಪಿಸುತ್ತವೆ, ಇದು ಟೈಪ್-2 ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ರಕ್ತದೊತ್ತಡ ಮತ್ತು ಹೃದಯದ ಆರೋಗ್ಯ: ಆಂಥೋಸಯಾನಿನ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ (Nitric Oxide) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತ ಸರಾಗವಾಗಿ ಹರಿಯುವಂತೆ ಮಾಡಿ ಅಧಿಕ ರಕ್ತದೊತ್ತಡವನ್ನು (Hypertension) ನೈಸರ್ಗಿಕವಾಗಿ ಇಳಿಸುತ್ತದೆ. ಸೋಡಿಯಂನ ಅಡ್ಡಪರಿಣಾಮವನ್ನು ಕಡಿಮೆ ಮಾಡಿ ರಕ್ತದೊತ್ತಡ ಸಮತೋಲನದಲ್ಲಿಡಲು ಬೇಕಾದ ಪೊಟ್ಯಾಶಿಯಂ ಇದರಲ್ಲಿ ಯಥೇಚ್ಛವಾಗಿದೆ. ರಕ್ತನಾಳಗಳಲ್ಲಿ ‘ಕೆಟ್ಟ ಕೊಲೆಸ್ಟ್ರಾಲ್’ (LDL) ಆಕ್ಸಿಡೀಕರಣಗೊಂಡು ಹೆಪ್ಪುಗಟ್ಟುವುದನ್ನು (Plaque build-up) ತಡೆದು, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಗ್ಗಿಸುತ್ತದೆ.
ಕೀಲುನೋವು (Arthritis) ಮತ್ತು ಆಟೋಇಮ್ಯೂನ್ ಸಮಸ್ಯೆಗಳಿಂದ ಬಳಲುವವರಲ್ಲಿ ಜೀವಕೋಶ ಮಟ್ಟದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಮೆರಿಕದ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ನೇರಳೆ ಆಲೂಗಡ್ಡೆಯಲ್ಲಿರುವ ಆಂಥೋಸಯಾನಿನ್ ಮತ್ತು ರೆಸಿಸ್ಟೆಂಟ್ ಸ್ಟಾರ್ಚ್ ಕರುಳಿನ ಕ್ಯಾನ್ಸರ್ (Colon Cancer) ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವಲ್ಲಿ ಸಹಕಾರಿ ಎಂದು ಕಂಡುಬಂದಿದೆ. ಆಂಥೋಸಯಾನಿನ್ಗಳು ಮೆದುಳಿನ ನರಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಿ ನೆನಪಿನ ಶಕ್ತಿಯನ್ನು ಕಾಪಾಡುತ್ತವೆ ಹಾಗೂ ಕಣ್ಣಿನ ರೆಟಿನಾ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತವೆ.

ನೇರಳೆ ಆಲೂಗಡ್ಡೆಗೆ ಬೆಳೆಯಲು ಸರ್ಕಾರ ಮುಂದಿನ ಕ್ರಮ?
ರೈತರಿಗೆ ಬೀಜ ಮತ್ತು ತರಬೇತಿ ನೀಡುವುದು: ಸಂಶೋಧಿಸಿದ ಉತ್ತಮ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ, ರೈತರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕು. ಇದನ್ನು ಹೇಗೆ ಬೆಳೆಯಬೇಕು, ರೋಗಗಳಿಂದ ಹೇಗೆ ಕಾಪಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಗಳು ರೈತರಿಗೆ ತರಬೇತಿ ನೀಡಬೇಕು.
ನೇರವಾಗಿ ಸರ್ಕಾರವೇ ಖರೀದಿಸುವುದು:ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಸಿಗುವಂತೆ ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಖರೀದಿಸಿದ ಆಲೂಗಡ್ಡೆಯನ್ನು ಶಾಲೆಗಳ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳು ಮತ್ತು ಪಡಿತರ ವ್ಯವಸ್ಥೆ ಮೂಲಕ ಮಕ್ಕಳಿಗೆ ಹಾಗೂ ಬಡ ಕುಟುಂಬಗಳಿಗೆ ವಿತರಿಸಬೇಕು. ತರಕಾರಿಗಳು ಕೊಳೆಯದಂತೆ ರಕ್ಷಿಸಲು ಗ್ರಾಮೀಣ ಮಟ್ಟದಲ್ಲಿ ಗೋದಾಮುಗಳು ಮತ್ತು ಉತ್ತಮ ಮಾರುಕಟ್ಟೆ ಸಂಪರ್ಕ ಕಲ್ಪಿಸಬೇಕು.
ಕೇವಲ ಒಂದೇ ಆಲೂಗಡ್ಡೆಯಿಂದ ಎಲ್ಲ ಅಪೌಷ್ಟಿಕತೆ ಹೋಗಲಾಡಿಸಲು ಸಾಧ್ಯವಿಲ್ಲ. ಇದರ ಜೊತೆಗೆ ಬೇಳೆಕಾಳುಗಳು, ಇತರೆ ಹಸಿರು ತರಕಾರಿಗಳು ಹಾಗೂ ಮೊಟ್ಟೆಗಳನ್ನೂ ಆಹಾರ ಪದ್ಧತಿಯಲ್ಲಿ ಸೇರಿಸುವುದು ಅಗತ್ಯ. ಕೇವಲ ಉತ್ತಮ ತಳಿ ಆವಿಷ್ಕಾರವಾದರೆ ಸಾಲದು. ಬೀಜದಿಂದ ಹೊಲಕ್ಕೆ, ಹೊಲದಿಂದ ಮಾರುಕಟ್ಟೆಗೆ, ಮಾರುಕಟ್ಟೆಯಿಂದ ಶಾಲಾ ಮಕ್ಕಳ ಊಟದ ತಟ್ಟೆಗೆ ತಲುಪಿಸುವ ಸಮಗ್ರ ಕೊಂಡಿಯನ್ನು ಸರ್ಕಾರ ಗಟ್ಟಿಗೊಳಿಸಬೇಕು.











