ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ರಾತ್ರಿ ಸುರಿದ ಧಾರಾಕಾರ ಮಳೆಗೆ(Rain) ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಸಿಟಿ(Electronic City) ಎಲಿವೇಟೆಡ್ ಫ್ಲೈಓವರ್(Flyover) ಮೇಲೆ ನದಿಯಂತೆ ಮಳೆ ನೀರು ನಿಂತು ಭಾರಿ ಅವಾಂತರ ಸೃಷ್ಟಿಯಾಗಿತ್ತು.
ರಾತ್ರಿ ಕಳೆದು ಬೆಳಗ್ಗೆಯಾದರೂ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಂತ ಪರಿಣಾಮ ಸುಮಾರು 7 ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಯಿತು.
ಸಿಲ್ಕ್ ಬೋರ್ಡ್ನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ 9 ಕಿ.ಮೀ ಉದ್ದದ ಈ ಎಲಿವೇಟೆಡ್ ರಸ್ತೆಯಲ್ಲಿ, ನಗರದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತೆರಳುವ ಮಾರ್ಗದಲ್ಲಿ ನೀರು ನಿಂತಿದ್ದರಿಂದ ಬೆಳಗಿನ ಪೀಕ್ ಅವರ್ನಲ್ಲಿ ಕಚೇರಿಗೆ ತೆರಳುವ ಉದ್ಯೋಗಿಗಳು ಹಾಗೂ ವಾಹನ ಸವಾರರಿಗೆ ಬಹಳ ಸಮಸ್ಯೆಯಾಯಿತು.
ಅವ್ಯವಸ್ಥೆಗೆ ಕಾರಣವೇನು?
ಫ್ಲೈಓವರ್ ಮೇಲಿನ ಮಳೆ ನೀರು ಹೊರಹೋಗುವ ಪೈಪ್ಗಳಲ್ಲಿ ಕಸಕಡ್ಡಿ ತುಂಬಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ಸಂಗ್ರಹವಾಗಿತ್ತು. ಫ್ಲೈಓವರ್ನ ಕೆಲ ಭಾಗಗಳು ತಗ್ಗಾಗಿದ್ದು, ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇವಲ 3 ಗಂಟೆಯಲ್ಲಿ 52.8 ಮಿ.ಮೀ ಭರ್ಜರಿ ಮಳೆ
ಸುಮಾರು 3 ರಿಂದ 4 ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಧಾವಿಸಿದವು. ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಪಂಪ್ಗಳ ಮೂಲಕ ರಸ್ತೆಯಲ್ಲಿದ್ದ ನೀರನ್ನು ರಸ್ತೆಯಿಂದ ತೆರವುಗೊಳಿಸಲಾಯಿತು. ನೀರು ಸಂಪೂರ್ಣವಾಗಿ ಖಾಲಿಯಾದ ನಂತರ ಹಂತ ಹಂತವಾಗಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

