– ಫಲಾನುಭವಿಗಳ ಆಧಾರ್ ಜೊತೆ ವೋಟರ್ ಐಡಿ ಲಿಂಕ್ ಕಡ್ಡಾಯ
ಬೆಂಗಳೂರು: ಗ್ಯಾರಂಟಿ ಪರಿಷ್ಕರಣೆಗೆ (Congress Guarantee) ಮುಂದಾಗಿರುವ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಆಧಾರ್ ಜೊತೆಗೆ ವೋಟರ್ ಐಡಿ (Voter ID) ಇದ್ರೆ ಮಾತ್ರ ಗ್ಯಾರಂಟಿ ನೀಡಲು ಸರ್ಕಾರ ತೀರ್ಮಾನಿಸಿದೆ.
ಗ್ಯಾರಂಟಿ ಪರಿಷ್ಕರಣೆ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಗ್ಯಾರಂಟಿ ಪರಿಷ್ಕರಣೆಗೆ ತೀರ್ಮಾನಿಸಲಾಗಿದೆ. ಫಲಾನುಭವಿಗಳ ರೀ-ವೇರಿಫಿಕೇಶನ್ ನಡೆಯಲಿದ್ದು, ಫಲಾನುಭವಿಗಳು ಹೊಸ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ. ಮರು ಪರಿಶೀಲನೆಗೆ ನಿಯೋಜಿತ ಅಧಿಕಾರಿಗಳು ಹೊಸ ಮರುಪರಿಶೀಲನಾ ಅರ್ಜಿ ತಗೆದುಕೊಂಡು ಹೋಗಿ ಮನೆ ಮನೆಗೆ ಭೇಟಿ ನೀಡ್ತಾರೆ. ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿಯ ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಲು ಸರ್ಕಾರ ಚಿಂತಿಸಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಲು ಮುಂದಾಗಿದ್ದು, ಆಧಾರ್ ಜೊತೆಗೆ ವೋಟರ್ ಐಡಿ ಲಿಂಕ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಫಲಾನುಭವಿಗಳ ರೇಷನ್ ಕಾರ್ಡ್ ಸಹ ಕೇಳಲಿದೆ. ಇದನ್ನೂ ಓದಿ: ಗ್ಯಾರಂಟಿ ಫಲಾನುಭವಿಗಳಿಗೆ ಗುಡ್ ನ್ಯೂಸ್ – ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವಂತಿಲ್ಲ
ಎಸ್‌ಐಆರ್ ಪ್ರಕ್ರಿಯೆ ಬಳಿಕ ಮತದಾನದ ಹಕ್ಕು ಕಳೆದುಕೊಂಡವರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ಇರಲ್ಲ. ವೋಟರ್ ಐಡಿ, ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರಷ್ಟೆ ಗ್ಯಾರಂಟಿ ಸೌಲಭ್ಯ ಸಿಗಲಿದೆ. ವೋಟರ್ ಐಡಿ ಮೂಲಕ ರಾಜ್ಯದವರಿಗಷ್ಟೇ ಗ್ಯಾರಂಟಿ ಯೋಜನೆಯ ಲಾಭ ನೀಡಲು ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಗ್ಯಾರಂಟಿ ಪರಿಷ್ಕರಣೆ ಜೊತೆಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಶಿಫಾರಸು ಮಾಡಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ 5,173 ಕೋಟಿ ಮೊತ್ತ ಕೊರತೆಯಾಗ್ತಿದೆ. ಕೊರತೆ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಸಾರಿಗೆ ನಿಗಮಗಳು ಕೇಳಿವೆ. ಇದನ್ನೂ ಓದಿ: ಕರಾವಳಿ & ಮಲೆನಾಡು ಪ್ರವಾಸೋದ್ಯಮ ಬ್ರಾಂಡ್ ಅಂಬಾಸಿಡರ್ ಆಗಿ ರಿಷಬ್ ಶೆಟ್ಟಿ ನೇಮಕ
