ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆರ್‌ಸಿಬಿ (RCB) ಹಾಗೂ ಎಸ್‌ಆರ್‌ಹೆಚ್ (SRH) ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಟ್ರಾವಿಸ್ ಹೆಡ್ (Travis Head) ಕಿರಿಕ್ ಮಾಡಿಕೊಂಡಿದ್ದಾರೆ.
ಮ್ಯಾಚ್ ವೇಳೆ ಹೆಡ್ ನಡೆಗೆ ಅಸಮಾಧಾನಗೊಂಡಿರುವ ಕೊಹ್ಲಿ, ಪಂದ್ಯದ ಕೊನೆಯಲ್ಲಿ ಎಸ್‌ಆರ್‌ಹೆಚ್ ಬ್ಯಾಟರ್ ಕೈ ಚಾಚಿದ್ರೂ ಹ್ಯಾಂಡ್‌ಶೇಕ್ ಮಾಡಲು ಕೊಹ್ಲಿ ನಿರಾಕರಿಸಿದ ಪ್ರಸಂಗ ನಡೆಯಿತು.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಎಸ್‌ಆರ್‌ಹೆಚ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 45 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, ರಾಸಿಕ್ ಸಲಾಂ ಅವರು ಎಸೆದ 4ನೇ ಒವರ್‌ನ ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ ಬೌಲ್ಡ್ ಆಗಿ ಹೊರ ನಡೆದರು. ಈ ವೇಳೆ ಕೊಹ್ಲಿ ಬಹಳ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು.
ಅದಾದ ಬಳಿಕ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಆರ್‌ಸಿಬಿ ಚೇಸ್ ಮಾಡುವಾಗಲೂ ಉಭಯ ಆಟಗಾರರ ನಡುವೆ ಮಾತು ಮತ್ತು ಸನ್ನೆಗಳ ಮೂಲಕ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ, ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದಾಗಿ ಹೆಡ್ ಜೊತೆ ಕೊಹ್ಲಿ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪಂದ್ಯ ಮುಗಿದ ಮೇಲೆ ಹ್ಯಾಂಡ್‌ಶೇಕ್ ಸಮಯದಲ್ಲಿ ವಿರಾಟ್ ಕೊಹ್ಲಿ ಎಸ್‌ಆರ್‌ಹೆಚ್ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಕೈ ಕುಲುಕಿದರು. ಬಳಿಕ ಟ್ರಾವಿಸ್ ಹೆಡ್ ತಮ್ಮ ಕೈ ಚಾಚಿ ಕೊಹ್ಲಿಯವರೊಂದಿಗೆ ಹ್ಯಾಂಡ್ ಶೇಕ್ ಮಾಡಲು ಮುಂದಾದರು. ಆದರೆ, ಕೊಹ್ಲಿ ಮಾತ್ರ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿ ಮುಂದೆ ಬಂದು ಇಶಾನ್ ಕಿಶನ್, ಸಕೀಬ್ ಹುಸೇನ್ ಸೇರಿದಂತೆ ಇನ್ನಿತರ ಹೈದರಾಬಾದ್ ತಂಡದ ಆಟಗಾರರ ಜೊತೆ ಹಸ್ತಲಾಘವ ಮಾಡಿದರು.
ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಎದುರು ಎಸ್‌ಆರ್‌ಹೆಚ್ 55 ರನ್‌ಗಳ ಅಂತರದಲ್ಲಿ ಜಯ ದಾಖಲಿಸಿತ್ತು. ಇದರ ಹೊರತಾಗಿಯೂ, ಆರ್‌ಸಿಬಿ ತಂಡದ ರನ್‌ರೇಟ್ ಉತ್ತಮವಾಗಿದ್ದ ಕಾರಣ ಅಗ್ರ ಸ್ಥಾನದಲ್ಲೇ ಉಳಿದುಕೊಂಡಿತು. ಈ ಮೂಲಕ ಕ್ವಾಲಿಫೈಯರ್-1ಕ್ಕೆ ಲಗ್ಗೆ ಇಟ್ಟಿದೆ. ಇತ್ತ ಹೈದರಾಬಾದ್ ತಂಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
