ಧಾರವಾಡ: ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಡಿ ಜೈಲು ಪಾಲಾಗಿದ್ದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರು ಆರು ವರ್ಷಗಳ ಬಳಿಕ ಇದೀಗ ಧಾರವಾಡ (Dharwad) ಜಿಲ್ಲಾ ಪ್ರವೇಶ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಅಲ್ಲಿಂದ ನೇರವಾಗಿ ಧಾರವಾಡದ ಪ್ರಸಿದ್ಧ ಮುರುಘಾಮಠಕ್ಕೆ ಬಂದ ಶಾಸಕ ವಿನಯ್ ಅವರನ್ನು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು. ಮುರುಘೇಂದ್ರ ಮಹಾಶಿವಯೋಗಿಗಳ ಹಾಗೂ ಮೃತ್ಯುಂಜಯಪ್ಪಗಳ ಗದ್ದುಗೆಗೆ ಶಾಸಕ ವಿನಯ್ ಪೂಜೆ ಸಲ್ಲಿಸಿದರು. ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಪೂಜೆಯಲ್ಲಿ ಭಾಗಿಯಾಗಿದ್ದರು.
ಯಾವುದೇ ಜಯಘೋಷಣೆಗಳನ್ನು ಹಾಕಬಾರದು ಹಾಗೂ ಮೆರವಣಿಗೆ ಮಾಡಬಾರದು ಎಂಬ ಷರತ್ತನ್ನು ನ್ಯಾಯಾಲಯ ವಿನಯ್ ಕುಲಕರ್ಣಿ ಅವರಿಗೆ ವಿಧಿಸಿದ್ದರಿಂದ ಅವರ ಬೆಂಬಲಿಗರು ಮುರುಘಾಮಠದಲ್ಲಿ ಅವರನ್ನು ಯಾವುದೇ ಆಡಂಬರವಿಲ್ಲದೇ ಸರಳವಾಗಿ ಸ್ವಾಗತಿಸಿದರು. ನಂತರ ಶಿವಗಿರಿಯಲ್ಲಿರುವ ತಮ್ಮ ಮನೆಗೆ ಆಗಮಿಸಿದ ವಿನಯ್ ಅವರನ್ನು ಬೆಂಬಲಿಗರು ಸಂತಸದಿಂದ ಬರಮಾಡಿಕೊಂಡರು. ಇದನ್ನೂ ಓದಿ: ಅಮೆರಿಕದಿಂದ ಜಾವೆಲಿನ್ ಖರೀದಿ – ಭಾರತದಲ್ಲಿ ಜಂಟಿ ಕ್ಷಿಪಣಿ ಉತ್ಪಾದನೆ!
ರಕ್ಷಾ ಬಂಧನದ ದಿನವೇ ವಿನಯ್ ಅವರು ಧಾರವಾಡಕ್ಕೆ ಬಂದಿದ್ದರಿಂದ ಅನೇಕರು ವಿನಯ್ ಅವರಿಗೆ ರಾಕಿ ಕಟ್ಟಿದರು. ಈ ವೇಳೆ ಮಾತನಾಡಿದ ಶಾಸಕ ವಿನಯ್ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಕ್ಷೇತ್ರ ಅಭಿವೃದ್ಧಿ ಕುರಿತು ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಅವರಿಗೆ ಸುಪ್ರೀಂ ಕೋರ್ಟ್ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿತ್ತು. ಬಳಿಕ ಏಪ್ರಿಲ್ 17 ರಂದು ಶಿಕ್ಷೆ ಪ್ರಕಟಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಶಿಕ್ಷೆಗೆ ತಡೆಯಾಜ್ಞೆ ಜೊತೆಗೆ ಧಾರವಾಡ ಪ್ರವೇಶಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದರಿಂದ ಸುದೀರ್ಘ 6 ವರ್ಷಗಳ ಬಳಿಕ ತಮ್ಮ ಕ್ಷೇತ್ರಕ್ಕೆ ವಿನಯ್ ಕುಲಕರ್ಣಿ ಆಗಮಿಸಿದ್ದಾರೆ. ಇದನ್ನೂ ಓದಿ: ನೈಸ್ ವಿರುದ್ಧ ಜೆಡಿಎಸ್ ಜಾಗೃತಿ ಅಭಿಯಾನ – Nothing Nice ವೆಬ್‌ಸೈಟ್ ಬಿಡುಗಡೆ ಮಾಡಿದ ನಿಖಿಲ್
