ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ಮಧ್ಯೆ ಅರ್ಹ ಮಹಿಳೆಯರಿಗೆ 50,000 ರೂ.ಗಳ ಆರ್ಥಿಕ ನೆರವು ನೀಡಲು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ‘ಸ್ತ್ರೀ ಸಮ್ಮಾನ್-ಸಮೃದ್ಧಿ ಯೋಜನೆ’ಯ ಅಡಿಯಲ್ಲಿ 40,000 ರೂ.ಗಳನ್ನ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ಬಿಜೆಪಿ ಸರ್ಕಾರವು 10,000 ರೂ. ಹೆಚ್ಚುವರಿ ಮೊತ್ತವನ್ನು ಸೇರಿಸಿ 50,000 ರೂ. ನೀಡಲು ಚಿಂತನೆ ನಡೆಸಿದೆ.
ಕೆಲ ದಿನಗಳ ಹಿಂದೆಯೇ ಸಿಎಂ ಯೋಗಿ ಆದಿತ್ಯನಾಥ್ ಅವರು ಮಹಿಳೆಯರಿಗೆ ಆರ್ಥಿಕ ನೆರವು ಯೋಜನೆ ಬಗ್ಗೆ ಮಾತನಾಡಿದ್ದರು. ಆದ್ರೆ ನಿಖರವಾದ ಮೊತ್ತ ಮತ್ತು ಫಲಾನುಭವಿಗಳಿಗೆ ಹಣ ತಲುಪಿಸುವ ವಿಧಾನದ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಅಂದು ʻʻಇಲ್ಲಿ ಉಪಸ್ಥಿತರಿರುವ ಮಹಿಳೆಯರಿಗೆ ನಾನು ಭರವಸೆ ನೀಡುತ್ತೇನೆ. ನಮ್ಮ ಡಬಲ್ ಇಂಜಿನ್ ಸರ್ಕಾರವು ನಿಮ್ಮ ಆರ್ಥಿಕ ಸ್ವಾವಲಂಬನೆಗಾಗಿ ಆಕರ್ಷಕ ಪ್ಯಾಕೇಜ್ ತರಲಿದೆʼʼ ಎಂದಷ್ಟೇ ಹೇಳಿದ್ದರು.
ಅದರಂತೆ ಈಗ ರಾಜ್ಯ ಸರ್ಕಾರವು ಅರ್ಹ ಮಹಿಳೆಯರಿಗೆ 50,000 ರೂ.ವರೆಗಿನ ಆರ್ಥಿಕ ನೆರವು ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ. ಮುಖ್ಯಮಂತ್ರಿಗಳೇ ಖುದ್ದು ಈ ವಿಷಯದ ಬಗ್ಗೆ ಗಮನ ಹರಿಸುತ್ತಿದ್ದು, ಈ ಪ್ರಸ್ತಾವನೆಯು ಅತ್ಯುನ್ನತ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಈ ಯೋಜನೆ ಜಾರಿಯಾದರೆ, ಬಿಜೆಪಿಗೆ ಇದು ರಾಜಕೀಯವಾಗಿ ಮತ್ತು ಚುನಾವಣಾ ದೃಷ್ಟಿಯಿಂದ ದೊಡ್ಡ ಲಾಭವಾಗಲಿದೆ. ಏಕೆಂದರೆ, ಮಹಿಳಾ ಕಲ್ಯಾಣ ಮತ್ತು ನೇರ ಆರ್ಥಿಕ ನೆರವು ನೀಡುವುದು ಈಗ ವಿವಿಧ ರಾಜ್ಯಗಳಲ್ಲಿ ಚುನಾವಣಾ ತಂತ್ರಗಳ ಪ್ರಮುಖ ಭಾಗವಾಗಿದೆ.
ಆದ್ರೆ ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು, ಇದರ ಹಿಂದೆ ಬಲವಾದ ರಾಜಕೀಯ ಉದ್ದೇಶವಿದೆ. ಸದ್ಯಕ್ಕೆ ಇದರ ಕಾರ್ಯಸಾಧ್ಯತೆ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈ ಯೋಜನೆಯನ್ನ ಜಾರಿಗೊಳಿಸುವುದಾದ್ರೆ, ಅದನ್ನ ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಆಯ್ಕೆಗಳೇನು?
* ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಈ ನೆರವನ್ನು ಒಮ್ಮೆಲೇ ತಲುಪಿಸುವುದು.
* ಈಗಾಗಲೇ ಜಾರಿಯಲ್ಲಿರುವ ‘ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ’, ‘ನಿರಾಶ್ರಿತ ಮಹಿಳಾ ಪಿಂಚಣಿ ಯೋಜನೆ’ ಅಥವಾ ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ ಯಂತಹ ಮಹಿಳಾ-ಕೇಂದ್ರಿತ ಸರ್ಕಾರಿ ಕಲ್ಯಾಣ ಯೋಜನೆಗಳ ಮೂಲಕ ಈ ಆರ್ಥಿಕ ನೆರವು ತಲುಪಿಸುವುದು. ಈ ಎರಡು ಆಯ್ಕೆಗಳು ಸರ್ಕಾರದ ಮುಂದಿವೆ.

