ಹುಬ್ಬಳ್ಳಿ: ವಿಮಾನ (Flight) ಪ್ರಯಾಣಿಕರಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿದ್ದು, ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) CCPA ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಗಳು ಗ್ರಾಹಕರಿಗೆ ವಿಮಾನಯಾನ ಸಂಸ್ಥೆಗಳು ಈ ವಿಧಿಸುವುದಕ್ಕಿಂತ ದುಪ್ಪಟ್ಟು ಶುಲ್ಕ ಸುಲಿಗೆ ಮಾಡುತ್ತಿರುವುದನ್ನು ಗ್ರಾಹಕರೊಬ್ಬರು ಬಯಲಿಗೆಳೆದಿದ್ದು, ಇದನ್ನು ಗಮನಿಸಿದ ಸಚಿವರು ತನಿಖೆ ನಡೆಸಿ ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (CCPA) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಾಳೆ ಪದ್ಮ ಪ್ರಶಸ್ತಿ ಪ್ರದಾನ – ರಾಜ್ಯದ 8 ಮಂದಿ ಸೇರಿ 131 ಸಾಧಕರಿಗೆ ರಾಷ್ಟ್ರಪತಿಗಳಿಂದ ಗೌರವ
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ವಿಮಾನ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಅಥವಾ ರದ್ದುಪಡಿಸುವಾಗ ವಿಮಾನಯಾನ ಸಂಸ್ಥೆಗಳು ವಿಧಿಸುತ್ತಿದ್ದ ಶುಲ್ಕಕ್ಕಿಂತ 15 ಪಟ್ಟು ಹೆಚ್ಚಿನ ಶುಲ್ಕ ಹೇರುತ್ತಿರುವುದು ಕಂಡುಬಂದಿದೆ. ಹೀಗಾಗಿ ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವರು CCPA ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಟಿಕೆಟ್ ಬುಕಿಂಗ್ ಮತ್ತು ರದ್ದತಿ ವೇಳೆ ಮಿತಿ ಮೀರಿ ಅತಿಯಾದ ಶುಲ್ಕ ವಿಧಿಸುತ್ತಿವೆಯೇ? ಎಂಬುದನ್ನು ತನಿಖೆ ನಡೆಸಿ ಮತ್ತು ವ್ಯಾಪಕವಾಗಿ ಅಂತಹ ಪದ್ಧತಿ ಕಂಡುಬಂದರೆ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಚಿವರ ನಿರ್ದೇಶನಕ್ಕೆ ಕಾರಣ: ತೆಜಿಂದರ್ ಪಾಲ್ ಸಿಂಗ್ ಬಗ್ಗಾ ಎಂಬುವರು ಆಗೋಡಾ ಆನ್‌ಲೈನ್ ವೇದಿಕೆ ಮೂಲಕ ಮುಂಬೈ ಟಿಕೆಟ್ ಬುಕ್ ಮಾಡುವಾಗ ಆಕಸ್ಮಿಕವಾಗಿ ಮುಂಬೈ ಬದಲು “ನವಿ ಮುಂಬೈ” ಆಯ್ಕೆ ಮಾಡಿದ್ದರು. ಇದನ್ನು ರದ್ದು ಪಡಿಸಲು ಆಗೋಡಾ ಬರೋಬ್ಬರಿ 4,764 ರೂ. ರದ್ದತಿ ಶುಲ್ಕ (Flight Cancellation Fees) ಮತ್ತು ಕೇವಲ 1,571 ರೂ. ಮರುಪಾವತಿ ತೋರಿಸಿದೆ. ಹೀಗಾಗಿ ಈ ಗ್ರಾಹಕರು ಬಳಿಕ ಅಕಾಸಾ ಏರ್‌ನಲ್ಲಿ ನೇರವಾಗಿ ರದ್ದತಿ ಶುಲ್ಕದ ಪರಿಶೀಲನೆ ನಡೆಸಿದ್ದಾರೆ. ಆಗ ಕೇವಲ 299 ರೂ. ರದ್ದತಿ ಶುಲ್ಕ ವಿಧಿಸಿ 6,076 ರೂ. ಮರುಪಾವತಿ ತೋರಿಸಿದೆ. ಆದರೆ ಅಗೋಡಾ 15 ಪಟ್ಟು ಹೆಚ್ಚಿನ ಅಂದರೆ 4,764 ರೂ. ರದ್ದತಿ ಶುಲ್ಕ ಸುಲಿಗೆ ಮಾಡಿರುವುದು ಬಯಲಾಗಿದೆ.
ಹೀಗಾಗಿ ತೆಜಿಂದರ್ ಪಾಲ್ ಸಿಂಗ್ ಬಗ್ಗಾ, ವಿಮಾನಯಾನ ಸಂಸ್ಥೆ ಕೇವಲ 299 ರೂ. ಕಡಿತಗೊಳಿಸುತ್ತಿದ್ದರೆ, ಅಗೋಡಾ ಏಕೆ 4,764 ರೂ. ವಿಧಿಸುತ್ತಿದೆ? ಯಾವುದಕ್ಕೆ ಈ ಹೆಚ್ಚುವರಿ ಶುಲ್ಕ? ಇದು ಸಂಪೂರ್ಣ ಅನೈತಿಕವೆಂದು ಗ್ರಾಹಕ ಇಲಾಖೆ ಗಮನ ಸೆಳೆದಿದ್ದರು. ಇದನ್ನೂ ಓದಿ: ಅಕ್ರಮ ದಾಸ್ತಾನು ಮಾಡಿದ್ದ 600 ಬ್ಯಾಗ್ ಯೂರಿಯಾ ರಸಗೊಬ್ಬರ ಜಪ್ತಿ
