ಲಂಡನ್: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್(Keir Starmer) ಅವರು ನಾಳೆ(ಜೂನ್ 22) ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಯುಕೆ ಮಾಧ್ಯಮಗಳು (UK Media) ವರದಿ ಮಾಡಿವೆ.
ಆಡಳಿತಾರೂಢ ಲೇಬರ್ ಪಕ್ಷದೊಳಗೆ ಅವರ ನಾಯಕತ್ವದ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಂಡಿದೆ. ಪಕ್ಷದ ಒಳಗಿನ ತೀವ್ರ ರಾಜಕೀಯ ಒತ್ತಡದಿಂದಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷವು ಭಾರಿ ಸೋಲನ್ನು ಅನುಭವಿಸಿತ್ತು. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲೇ ಮತದಾರರು ಲೇಬರ್ ಪಕ್ಷವನ್ನು ಕೈಬಿಟ್ಟಿದ್ದರಿಂದ, ಸ್ಟಾರ್ಮರ್ ನಾಯಕತ್ವದ ಮೇಲೆ ಸಂಸದರಿಗೆ ನಂಬಿಕೆ ಕಡಿಮೆಯಾಗಿದೆ
ಸರ್ಕಾರದ ರಕ್ಷಣಾ ವೆಚ್ಚದ ನಿರ್ಧಾರಗಳನ್ನು ವಿರೋಧಿಸಿ ರಕ್ಷಣಾ ಸಚಿವ ಜಾನ್ ಹೀಲಿ ಸೇರಿದಂತೆ ಹಲವು ಪ್ರಮುಖ ಸಚಿವರು ಮತ್ತು ಅಧಿಕಾರಿಗಳು ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಪ್ರಮುಖ ಭರವಸೆಗಳಿಂದ ಸ್ಟಾರ್ಮರ್ ಸರ್ಕಾರ ಹಿಂದೆ ಸರಿದಿದೆ ಎಂಬ ಟೀಕೆಯೂ ಇವರ ಮೇಲಿದೆ.
ಅಮೆರಿಕಕ್ಕೆ ಬ್ರಿಟನ್ ರಾಯಭಾರಿಯಾಗಿ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿದ ವಿಷಯದಲ್ಲಿ ಸ್ಟಾರ್ಮರ್ ಭಾರಿ ಟೀಕೆಗೆ ಒಳಗಾಗಿದ್ದರು. ವಿವಾದಿತ ವ್ಯಕ್ತಿ ಜೆಫ್ರಿ ಎಪ್ಸ್ಟೀನ್ ಜೊತೆ ಮ್ಯಾಂಡೆಲ್ಸನ್ ನಿಕಟ ಸಂಬಂಧ ಹೊಂದಿದ್ದರು. ಭದ್ರತಾ ಸಂಸ್ಥೆಗಳು ಇವರ ನೇಮಕಾತಿಗೆ ಒಪ್ಪಿಗೆ ನೀಡದಿದ್ದರೂ, ಸ್ಟಾರ್ಮರ್ ಸರ್ಕಾರ ಅದನ್ನು ನಿರ್ಲಕ್ಷಿಸಿ ನೇಮಕ ಮಾಡಿತ್ತು ಎಂಬ ವಿಷಯ ಬಯಲಿಗೆ ಬಂದಿದೆ.
ಸ್ಟಾರ್ಮರ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ದಿನಾಂಕ ಮತ್ತು ಮುಂದಿನ ಪ್ರಧಾನಿ ಆಯ್ಕೆಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಲಿದ್ದಾರೆ. ಸ್ಟಾರ್ಮರ್ ಅವರ ಸ್ಥಾನಕ್ಕೆ ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಮತ್ತು ಲೇಬರ್ ಪಕ್ಷದ ಹಿರಿಯ ನಾಯಕ ಆಂಡಿ ಬರ್ನ್‌ಹ್ಯಾಮ್ ಅವರು ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅವರು ಇತ್ತೀಚಿನ ಉಪಚುನಾವಣೆಯಲ್ಲಿ ದೊಡ್ಡ ಜಯ ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.
ಕೀರ್ ಸ್ಟಾರ್ಮರ್ ಅವರು 2024 ರ ಜುಲೈನಲ್ಲಿ ಭಾರಿ ಬಹುಮತದೊಂದಿಗೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಕೇವಲ ಎರಡು ವರ್ಷಗಳಲ್ಲೇ ಅವರು ತಮ್ಮದೇ ಪಕ್ಷದ ನಾಯಕರ ಬೆಂಬಲ ಕಳೆದುಕೊಂಡು ಅಧಿಕಾರ ಬಿಡಬೇಕಾಗಿ ಬಂದಿದೆ.
2010 ರಿಂದ 6 ಮಂದಿ ಪ್ರಧಾನಿಗಳು ಬ್ರಿಟನ್ ಮುನ್ನಡೆಸಿದ್ದಾರೆ. ಡೇವಿಡ್ ಕ್ಯಾಮರೂನ್ (2010 – 2016), ಥೆರೆಸಾ ಮೇ (2016 – 2019),ಬೋರಿಸ್ ಜಾನ್ಸನ್ (2019 – 2022), ಲಿಜ್ ಟ್ರಸ್ (2022), ರಿಷಿ ಸುನಕ್ (2022 – 2024) ಪ್ರಧಾನಿ ಪಟ್ಟ ಅಲಂಕರಿಸಿದ್ದರು. 2024 ರಿಂದ ಕೀರ್ ಸ್ಟಾರ್ಮರ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
