– ಭದ್ರತಾ ಲೋಪ ಬಟಾಬಯಲು
ಟೆಲ್‌ಅವಿವ್: ಫ್ಲೈದುಬೈ ವಿಮಾನ (Flydubai Flight) ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿರುವ ಹೊತ್ತಿನಲ್ಲೇ ಸರಣಿ ಭದ್ರತಾ ಲೋಪಗಳು ನಡೆದಿರುವ ಬಗ್ಗೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ.
ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯ ಕುರಿತು ಅಧಿಕೃತ ತನಿಖೆ ನಡೆಸುತ್ತಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ವಿಮಾನ ಹೊರಡುವುದಕ್ಕೂ ಮುನ್ನವೇ ಅದರ ಸಿಬ್ಬಂದಿ ಪಟ್ಟಿಯನ್ನ ಇಸ್ರೇಲ್ (Israel) ಜೊತೆಗೆ ಹಂಚಿಕೊಳ್ಳಲಾಗಿತ್ತು ಎನ್ನಲಾಗಿದೆ.
ಈ ಬೆಳವಣಿಗೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆತನ ಹಿನ್ನೆಲೆಯ ಕುರಿತು ಆತಂಕಗಳಿದ್ದರೂ ಒಮನ್‌ನ ಸಹ ಪೈಲಟ್ ಹಮ್ಮಾಮ್ ಅಲ್-ಹಮಾಮಿಗೆ ಇಸ್ರೇಲ್‌ಗೆ ತೆರಳುವ ವಿಮಾನದಲ್ಲಿ ಕಾರ್ಯನಿರ್ವಹಿಸಲು ಹೇಗೆ ಕ್ಲಿಯರೆನ್ಸ್ ನೀಡಲಾಯಿತು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಇನ್ನೂ ಇಸ್ರೇಲ್ ಶಿನ್ ಬೆಟ್ ಹೇಳುವಂತೆ, ಪ್ರಯಾಣಿಕರ ಪಟ್ಟಿಯನ್ನ ಪರಿಶೀಲಿಸುವ ಜವಾಬ್ದಾರಿ ಸಾರಿಗೆ ಸಚಿವಾಲಯಕ್ಕೆ ಸೇರಿದೆ. ಆದರೆ ಸಾರಿಗೆ ಸಚಿವಾಲಯವು ತಮಗೆ ಪ್ರಯಾಣಿಕರ ಪಟ್ಟಿ ಅಥವಾ ಯಾವುದೇ ಎಚ್ಚರಿಕೆ ಬಂದಿರಲಿಲ್ಲ ಎಂದು ಹೇಳಿದೆ.

ಇದೇ ವೇಳೆ, ಇಂತಹ ಮಾಹಿತಿಯನ್ನು ದೇಶಗಳ ನಡುವೆ ಹಂಚಿಕೊಳ್ಳುವುದು ವಿಮಾನಯಾನ ಕ್ಷೇತ್ರದಲ್ಲಿ ಸಾಮಾನ್ಯ ಭದ್ರತಾ ಕ್ರಮವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ ವಿವಿಧ ದೇಶಗಳ ನಡುವಿನ ಭದ್ರತಾ ಪರಿಶೀಲನೆಗಳಲ್ಲಿ ಕೆಲವು ಮಿತಿಗಳಿವೆ ಎಂಬುದನ್ನೂ ಅವರು ತಿಳಿಸಿದ್ದಾರೆ.
ಒಮನ್‌ನಲ್ಲಿ ಹಮಾವಿ ಹಾರಾಟ ನಿಷೇಧ
ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಮೇಲೆ ಕಾಕ್‌ಪಿಟ್‌ನಲ್ಲಿ ಕ್ರ್ಯಾಶ್ ಆಕ್ಸ್‌ನಿಂದ ದಾಳಿ ನಡೆಸಿದ ಆರೋಪ ಎದುರಿಸುತ್ತಿರುವ ಒಮನ್‌ನ ಸಹ ಪೈಲಟ್ ಹಮ್ಮಾಮ್ ಅಲ್-ಹಮ್ಮಾಮಿ, ಯಾವುದೇ ತಡೆಯಿಲ್ಲದೆ ದುಬೈ-ಟೆಲ್ ಅವೀವ್ ವಿಮಾನವನ್ನ ಏರಲು ಸಾಧ್ಯವಾಗಿತ್ತು.
ಒಮನ್ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ಇಸ್ರೇಲಿ ಪ್ರಯಾಣಿಕರನ್ನ ಹೊತ್ತೊಯ್ಯುವ ವಿಮಾನವನ್ನು ನಿರ್ವಹಿಸಲು ಅವರಿಗೆ ಅವಕಾಶ ನೀಡಲಾಗಿತ್ತು. ಅಧಿಕಾರಿಗಳ ಪ್ರಕಾರ, ಸಹಪೈಲಟ್‌ನನ್ನ ಆತನ ಸ್ವದೇಶ ಒಮನ್‌ನಲ್ಲೇ ವಿಮಾನ ಹಾರಾಟದಿಂದ ನಿರ್ಬಂಧಿಸಲಾಗಿತ್ತು. ಅವರಲ್ಲಿ ಉಗ್ರವಾದದ ಪರವಾದ ಆಲೋಚನೆಗಳಿವೆ ಎಂಬ ಆರೋಪಗಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು.
‘ಭಯೋತ್ಪಾದಕ ದಾಳಿ’: ಫ್ಲೈದುಬೈ ವಿಮಾನ ಪತನಗೊಳಿಸಲು ಯತ್ನ
ಒಮನ್‌ನ ಸಹ ಪೈಲಟ್ ಭಾರತೀಯ ಕ್ಯಾಪ್ಟನ್ ಮೇಲೆ ದಾಳಿ ನಡೆಸಿ ವಿಮಾನದ ನಿಯಂತ್ರಣವನ್ನ ತನ್ನ ವಶಕ್ಕೆ ಪಡೆಯಲು ಯತ್ನಿಸಿದ್ದಾನೆ ಎಂದು UAE ತಿಳಿಸಿದೆ. ಈ ಘಟನೆಯನ್ನು ಅಧಿಕಾರಿಗಳು ‘ಭಯೋತ್ಪಾದಕ ದಾಳಿ’ ಎಂದು ಬಣ್ಣಿಸಿದ್ದಾರೆ.

