ಉಡುಪಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ (Suvarna River) ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ನಡೆದಿದೆ.
ಮೃತರನ್ನು ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ರಜೆ ಇದ್ದ ಹಿನ್ನೆಲೆ ಐವರು ಸ್ನೇಹಿತರು ಮಂಗಿಲಾರು ಮೂಲಕ ಸುಮಾರು ಎರಡು ಕಿ.ಮೀ. ದುರ್ಗಮ ದಾರಿ ಕ್ರಮಿಸಿ ನದಿಗೆ ತೆರಳಿದ್ದರು. ಈ ವೇಳೆ ಆಳವಾದ ನೀರಿಗೆ ತೆರಳಿದ ಭರತ್ ಹಾಗೂ ಹರ್ಷನ್ ಮುಳುಗಿದ್ದಾರೆ. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಹಗರಣ – 14 ದಿನ ಇಡಿ ಕಸ್ಟಡಿಗೆ ಬಸವರಾಜ್ ಕನ್ನಾಳೆ

ವಾಹನ ಸಂಚಾರಕ್ಕೆ ದಾರಿ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಕಿ.ಮೀ. ನಡೆದು ಘಟನಾ ಸ್ಥಳಕ್ಕೆ ತೆರಳಿ, ಸ್ಥಳೀಯರ ಸಹಕಾರದೊಂದಿಗೆ ಮೂರು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿದರು. ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಇದನ್ನೂ ಓದಿ: ದ್ರಾವಿಡರ ಶಿವ ಬಡವ, ಆರ್ಯರ ರಾಮ ಶ್ರೀಮಂತ: ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
ಭರತ್ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದು, ಸ್ವಂತ ಮನೆ ನಿರ್ಮಾಣದ ಕನಸು ಕಂಡಿದ್ದರು. ಮನೆಯ ಕಾಮಗಾರಿ ಸ್ಲಾಬ್ ಹಂತ ತಲುಪಿದ್ದು, ಶೀಘ್ರವೇ ಗೃಹ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯ ಕ್ರೂರ ಆಟಕ್ಕೆ ಯುವಕ ಬಲಿಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಹಾಸ್ಟೆಲ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಥಿ ನೇಣಿಗೆ ಶರಣು

