– ಬಾಳೆಹೊನ್ನೂರು ಬಳಿ ಕ್ರೇನ್ ಮುಳುಗಡೆ
ಚಿಕ್ಕಮಗಳೂರು: ಮೂರು ದಶಕಗಳ ಬಳಿಕ ಮಳೆ (Rain) ಇಲ್ಲದೆ ಭದ್ರಾ ನದಿಯ (Bhadra River) ತಳ ಕಂಡು ಆತಂಕಕ್ಕೀಡಾಗಿದ್ದ ಮಲೆನಾಡಿಗರ ಮೇಲೆ ವರುಣದೇವ ಕೃಪೆ ತೋರಿದ್ದಾನೆ. ಮಳೆಯಿಂದಾಗಿ 24 ಗಂಟೆಯಲ್ಲೇ ಭದ್ರಾ ನದಿಗೆ ಭಾರೀ ಪ್ರಮಾಣದ ಮಳೆ ನೀರು ಹರಿದು ಬಂದಿದೆ.
ಮಳೆಯಿಂದ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆ ಇಲ್ಲದೆ ಮರುಳುಗಾಡಿನಂತಾಗಿದ್ದ ಭದ್ರಾ ನದಿಯ ಒಡಲಲ್ಲಿ ಭಾನುವಾರ ಸಂಜೆ ವಾಲಿವಾಲ್ ಆಡಿದ್ದ ಯುವಕರು ಇಂದು ಆ ಜಾಗದಲ್ಲಿ ಕಾಲಿಡೋದಕ್ಕೂ ಭಯಪಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಎನ್.ಆರ್.ಪುರ (NR Pura) ತಾಲೂಕಿನ ಬಾಳೆಹೊನ್ನೂರು ಸಮೀಪ ಭದ್ರಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕೆಲಸಕ್ಕೆ ಬಂದಿದ್ದ ಕ್ರೇನ್ ಕೂಡ ಭದ್ರೆಯ ಒಡಲಲ್ಲಿ ಮುಳುಗಿ ಹೋಗಿದೆ. ಇದನ್ನೂ ಓದಿ: ಕೈಕೊಟ್ಟ ಮುಂಗಾರು – 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ಮುಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ ತುಂಗಾಭದ್ರಾ ನದಿಗಳ ನೀರಿನ ಪ್ರಮಾಣ ಸಂಪೂರ್ಣ ಕುಸಿದಿತ್ತು. ಆದರೆ, ಕಳಸ ತಾಲೂಕಿನ ಕುದುರೆಮುಖ ಘಟ್ಟ ಪ್ರದೇಶ ಹಾಗೂ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಮಲೆನಾಡಿನ ಜೀವನದಿ ತುಂಗಾಭದ್ರಾ ಮೈದುಂಬಿ ಹರಿಯುತ್ತಿದೆ.
ಮಲೆನಾಡಲ್ಲಿ ಭಾರೀ ಪ್ರಮಾಣದಲ್ಲಿ ಅಲ್ಲದಿದ್ದರೂ ಸೋಮವಾರ ಮಧ್ಯಾಹ್ನದಿಂದ ಸಾಧಾರಣ ಮಳೆಯಾಗುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಇಂತಹ ಸಾಧಾರಣ ಮಳೆಯೇ ಅತ್ಯಂತ ಸೂಕ್ತವಾಗಿದ್ದು, ಮಳೆ ಹೀಗೆಯೇ ಮುಂದುವರೆಯಲಿ ಎಂದು ಮಲೆನಾಡಿಗರು ವರುಣದೇವನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಈ ವರ್ಷ ಮೊದಲ ಬಾರಿಗೆ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆ
