ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿನ ಆಂತರಿಕ ಕಲಹ ಮತ್ತಷ್ಟು ತೀವ್ರಗೊಂಡಿದೆ. ಟಿಎಂಸಿಯ ಸಂಸದ ಕಲ್ಯಾಣ್ ಬ್ಯಾನರ್ಜಿಯವರು(Kalyan Banerjee) ತಮ್ಮ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ದೀದಿ ನಿಮಗೆ ಅಭಿಷೇಕ್(Abhishek Banerjee) ಬೇಕೋ ಅಥವಾ ನಾವು ಬೇಕೋ ಆಯ್ಕೆ ಮಾಡಿ ಎಂದಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಶಾಸಕರ ನಕಲಿ ಸಹಿ ಸಂಗ್ರಹ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಪರ ವಕೀಲರಾಗಿದ್ದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಕೈಬಿಟ್ಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಅವರು ಅಭಿಷೇಕ್ ಬ್ಯಾನರ್ಜಿಯ ಈ ನಡೆ ತೀರಾ ಅವಮಾನಕರ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ಕೋಲ್ಕತ್ತಾ ಹೈಕೋರ್ಟ್ ನಕಲಿ ಸಹಿ ಸಂಗ್ರಹ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಇಂದು ಸಂಜೆ 6 ಗಂಟೆಯೊಳಗೆ ಬಂಗಾಳದ ಸಿಐಡಿ ಮುಂದೆ ಹಾಜರಾಗುವಂತೆ ಸೂಚಿಸಿದೆ. ಇದರ ಹೊರತಾಗಿಯೂ ಅಭಿಷೇಕ್ ಅವರು ಕಲ್ಯಾಣ್ ಬ್ಯಾನರ್ಜಿಯವರನ್ನು ಬದಲಾಯಿಸಿದ್ದಾರೆ.
#WATCH | Kolkata, West Bengal: TMC MP and senior advocate Kalyan Banerjee says, “…I will not appear for Abhishek Banerjee in any case because I do not like his arrogant attitude. I have spent 45 years in this profession; all these people have worked with me as juniors. How can… pic.twitter.com/U7yBIXDdqP
— ANI (@ANI) June 11, 2026
ಕಲ್ಯಾಣ್ ಬ್ಯಾನರ್ಜಿ ಹೇಳಿದ್ದೇನು?
ತುರ್ತು ವಿಚಾರಣೆಯ ಹಿನ್ನೆಲೆ ರಾತ್ರಿಯಿಡೀ ತಯಾರಿ ನಡೆಸಿ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದೆ. ಆದರೆ ಇಂದು ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿದ್ದು, ಬೇರೊಬ್ಬ ವಕೀಲರು ಪ್ರಕರಣವನ್ನು ನಿಭಾಯಿಸುವ ಮಾಹಿತಿ ದೊರಕಿದೆ ಎಂದು ಕಲ್ಯಾಣ್ ಬ್ಯಾನರ್ಜಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬೇರೆಯವರಿಗೆ ಗೌರವ ನೀಡದಿರುವ ಅಭಿಷೇಕ್ ಬ್ಯಾನರ್ಜಿ ಸ್ವಭಾವ ಇನ್ನೂ ಕೂಡ ಬದಲಾಗಿಲ್ಲ. ಅವರು ಪ್ರತಿಯೊಬ್ಬರನ್ನೂ ತಮಗಿಂತ ಕೀಳು ಎಂದು ಭಾವಿಸುತ್ತಾರೆ. ಆದರೆ ನಾವು ಈ ವೃತ್ತಿಯಲ್ಲಿ 45 ವರ್ಷಗಳನ್ನು ಪೂರೈಸಿದ್ದೇವೆ. ಅಭಿಷೇಕ್ ಬ್ಯಾನರ್ಜಿ ಅತ್ಯಂತ ಅಹಂಕಾರಿಯಾಗಿದ್ದು, ಯಾರಿಗೂ ಗೌರವ ನೀಡುವುದಿಲ್ಲ. ಇದೇ ಕಾರಣಕ್ಕೆ ಪಕ್ಷದಿಂದ ನಾಯಕರೆಲ್ಲರೂ ದೂರವಾಗುತ್ತಿರುವುದು. ಇಂದು ಬೆಳಿಗ್ಗೆ ದೀದಿಗೆ ನೇರವಾಗಿ ನಾನು ಅಥವಾ ಅಭಿಷೇಕ್ ಬ್ಯಾನರ್ಜಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನಕ್ಕೆ ಆಹ್ವಾನ ಕೊಟ್ಟ ಸೋನಿಯಾ ಗಾಂಧಿ – ʻದೀದಿʼಗೆ ಉಪಾಧ್ಯಕ್ಷೆ ಸ್ಥಾನ ಆಫರ್
ಇತ್ತೀಚಿಗೆ ನಡೆದಿದ್ದ ಬಂಗಾಳದ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಟಿಎಂಸಿ ಪಕ್ಷದಲ್ಲಿನ ಬಂಡಾಯ ಭುಗಿಲೆದ್ದಿದೆ. 58 ಜನ ಟಿಎಂಸಿ ಬಂಡಾಯ ಶಾಸಕರು ಋತುಬ್ರತಾ ಬ್ಯಾನರ್ಜಿಯವರಿಗೆ ಬೆಂಬಲ ನೀಡಿ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಇತ್ತ 20 ಸಂಸದರು ಪಕ್ಷದಿಂದ ಹೊರಬಂದು ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಕೊಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮಮತಾ ಬ್ಯಾನರ್ಜಿಯವರಿಗೆ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದ ಮೇಲಿನ ಸಂಪೂರ್ಣ ಹಿಡಿತ ಕಳೆದುಕೊಂಡಿರುವ ಮಮತಾ ಬ್ಯಾನರ್ಜಿ(Mamata Banerjee) ತಾನೇ ಕಟ್ಟಿ ಬೆಳಸಿದ ಪಕ್ಷದಲ್ಲಿ ಮೂಲೆ ಗುಂಪಾಗಿದ್ದಾರೆ.
