ಇವತ್ತು ಮನುಷ್ಯ ಕಾಲವನ್ನು ಕಾಲಿಗೆ ಕಟ್ಟಿಕೊಂಡು ಕುದುರೆಯಂತೆ ಓಡುತ್ತಿದ್ದಾನೆ. ಈ ಓಟದಲ್ಲಿ ಕೈತುಂಬಾ ಸಂಬಳ, ಮನೆ, ಕಾರು ಎಲ್ಲಾ ಇದ್ದು ಎಷ್ಟೋ ಜನ ನೆಮ್ಮದಿಗಾಗಿ ಪರದಾಡುತ್ತಿರುತ್ತಾರೆ. ಎಷ್ಟೋ ಜನ ಒಂಟಿತನ, ಇನ್ನೆಷ್ಟೋ ಜನ ನಿದ್ರೆ ಸಮಸ್ಯೆ, ಇನ್ನೇನೋ ಕಳೆದುಕೊಂಡ ಭಾವದಲ್ಲಿ ತೊಳಲಾಡುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರವಾಗಿ ಎಷ್ಟೋ ಜನ ಆಧ್ಯಾತ್ಮದ ಮೊರೆ ಹೋಗುತ್ತಾರೆ. ಇನ್ನು ಕೆಲವರು ಟ್ರಿಪ್, ಟ್ರೆಕ್ಕಿಂಗ್ ಅಂತ ಸುತ್ತುತ್ತಾರೆ. ಇನ್ನೂ ಕೆಲವರಿಗೆ ಬಾರ್, ಪಬ್‌ಗಳು ʻನೆಮ್ಮದಿಯ ಕೇಂದ್ರಗಳಾಗಿರುತ್ತವೆ. ಆದರೆ ಈಗ ನೆಮ್ಮದಿಗಾಗಿ ಒಂದು ಟ್ರೆಂಡ್ ಶುರುವಾಗುತ್ತಿದೆ. ಅದೇನೆಂದರೆ ಮರಗಳನ್ನು ಅಪ್ಪಿಕೊಳ್ಳೋದು.
ಹೌದು, ನೆಮ್ಮದಿ ಬೇಕಂದ್ರೆ ನಾವು ಈ ಜಂಜಾಟ ಬಿಟ್ಟು ಪ್ರಕೃತಿಯೆಡೆಗೆ ಆದಷ್ಟು ಹೆಜ್ಜೆ ಹಾಕಲೇ ಬೇಕು. ನಾವು ಆದಷ್ಟು ಪ್ರಕೃತಿಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತೇವೆ. ಆಗೆಲ್ಲ ನಮ್ಮ ನೆಮ್ಮದಿ, ಆರೋಗ್ಯ ಕ್ರಮೇಣ ಕ್ಷೀಣಿಸುತ್ತಾ ಬರುತ್ತದೆ. ಹಾಗೇ ಪ್ರಕೃತಿಯ ಮಡಿಲಲ್ಲಿ ಇದ್ದವರ ಆರೋಗ್ಯ, ಅವರ ಮನಶಾಂತಿಯ ಮಟ್ಟ ಎಷ್ಟಿರುತ್ತದೆ? ಒಂದು ದೊಡ್ಡ ಕಟ್ಟಡದಲ್ಲಿ ಪ್ರಕೃತಿಯ ಗಂಧ ಗಾಳಿ ಇಲ್ಲದ ವ್ಯಕ್ತಿಯ ಮನಶಾಂತಿ, ಆರೋಗ್ಯದ ಮಟ್ಟ ಹೇಗಿರುತ್ತದೆ ಎಂದು ಸುಮ್ಮನೆ ಗಮನಿಸಿ ನೋಡಿ. ಸುಮಾರು 90% ಪ್ರಕೃತಿಯ ಒಡಲಲ್ಲಿ ಇರುವವನೇ ಬಹಳ ನೆಮ್ಮದಿಯಾಗಿ ಇರುತ್ತಾನೆ. ಹಾಗಂತ ಕಾಡು ಸೇರಿ ಬಿಡಬೇಕು ಅಂತ ನಾನೆಲ್ಲೂ ಹೇಳ್ತಿಲ್ಲ. ಅವಕಾಶ ಸಿಕ್ಕಾಗ ಪ್ರಕೃತಿಯನ್ನು ಎಂಜಾಯ್ ಮಾಡಬೇಕು. ಎಲ್ಲಿ ಸಾಧ್ಯವೋ ಅಲ್ಲಿ ಬರಿಗಾಲಲ್ಲಿ ನಡೆಯಬೇಕು. ಶುದ್ಧವಾದ ನದಿ ನೀರಲ್ಲಿ ಮಿಂದೇಳಬೇಕು. ಶುದ್ಧ ಮರದ ಗಾಳಿಗೆ, ನೆರಳಿಗೆ ಮೈಮನಸ್ಸನ್ನು ತೆರದಿಡಬೇಕು. ಮನಸ್ಸಿಗೆ ನೆಮ್ಮದಿ ನೀಡುವ ಮಹಾ ತಾಣವಾದ ಮರವನ್ನು ತಬ್ಬಿಕೊಳ್ಳಬೇಕು!
ಮರಗಳ ಮಡಿಲಲ್ಲಿ ಮನಸ್ಸಿನ ನೆಮ್ಮದಿ
ಮರವೆಂದರೆ ಕೇವಲ ನೆರಳು ನೀಡುವ ಜೀವಿಯಲ್ಲ. ಅದು ನಮ್ಮ ಬದುಕಿನೊಂದಿಗೆ ಮೌನವಾಗಿ ಬೆಸೆದುಕೊಂಡಿರುವ ಪ್ರಕೃತಿಯ ಮಿತ್ರ. ಮರಗಳ ನಡುವೆ ಕೆಲವು ಕ್ಷಣಗಳನ್ನು ಕಳೆಯುವುದು, ಹಸಿರನ್ನು ನೋಡುವುದು, ತಂಪಾದ ಗಾಳಿಯನ್ನು ಅನುಭವಿಸುವುದು ಅಥವಾ ಮರವನ್ನು ಪ್ರೀತಿಯಿಂದ ತಬ್ಬಿಕೊಳ್ಳುವುದು, ಇವೆಲ್ಲವೂ ಮನಸ್ಸಿಗೆ ಒಂದು ರೀತಿಯ ನೆಮ್ಮದಿಯನ್ನು ನೀಡಬಲ್ಲದು.
ಇಂದಿನ ವೇಗದ ಬದುಕಿನಲ್ಲಿ ಒತ್ತಡ, ಆತಂಕ ಮತ್ತು ಮಾನಸಿಕ ದಣಿವು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಕೃತಿಯ ಮಡಿಲಿನಲ್ಲಿ ಸ್ವಲ್ಪ ಸಮಯ ಕಳೆಯುವುದು ಮನಸ್ಸನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಹಸಿರು ಪರಿಸರವು ಒತ್ತಡದ ಅನುಭವವನ್ನು ಕಡಿಮೆ ಮಾಡಿ, ಮನಸ್ಥಿತಿಯನ್ನು ಸುಧಾರಿಸಿಸುತ್ತದೆ. ಪ್ರಕೃತಿಯ ಸೌಂದರ್ಯವನ್ನು ಕೆಲವೇ ನಿಮಿಷಗಳ ಕಾಲ ಗಮನಿಸುವುದೂ ಮನಸ್ಸಿನ ಆತಂಕ ಮತ್ತು ಉದ್ವೇಗವನ್ನು ಕಡಿಮೆ ಮಾಡಬಹುದು.
ಪ್ರಕೃತಿಯ ಸಂಪರ್ಕವು ಹೃದಯಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು, ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಹಾಗೂ ದೇಹ, ಮನಸ್ಸಿನ ಚೈತನ್ಯವನ್ನು ಹೆಚ್ಚಿಸಲು ಸಹಕರಿಸುತ್ತದೆ. ಅರಣ್ಯ ವಾತಾವರಣದಲ್ಲಿರುವ ನೈಸರ್ಗಿಕ ರಾಸಾಯನಿಕವಾದ ಫೈಟೋನ್ಸೈಡ್ಸ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ.
ಮಕ್ಕಳಿಗೂ ಹಸಿರು ಪರಿಸರ ಬಹಳ ಉಪಯುಕ್ತವಾಗಬಹುದು. ಮರಗಳಿರುವ ಸ್ಥಳಗಳಲ್ಲಿ ಆಟವಾಡುವುದು, ಪ್ರಕೃತಿಯನ್ನು ಗಮನಿಸುವುದು ಮತ್ತು ಹೊರಾಂಗಣದಲ್ಲಿ ಸಮಯ ಕಳೆಯುವುದು ಅವರ ಏಕಾಗ್ರತೆ ಹಾಗೂ ಮನಸ್ಥಿತಿಗೆ ಸಹಕಾರಿಯಾಗಬಹುದು.
ಪ್ರಕೃತಿಯ ಮಡಿಲಲ್ಲಿ ರೋಗಿಗಳ ಆರೈಕೆ ಮಾಡುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆಯಾಗುತ್ತದೆ. ಇದರಿಂದ ಬೇಗ ಚೇತರಿಕೆ ಕೂಡ ಸಾಧ್ಯವಿದೆ ಎಂದು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಪ್ರಕೃತಿ ನಮ್ಮ ದೇಹವನ್ನು ಮಾತ್ರವಲ್ಲ, ನಮ್ಮ ಮನಸ್ಸನ್ನೂ ಆರೈಕೆ ಮಾಡುವ ವಿಶೇಷ ಶಕ್ತಿಯಾಗಿದೆ.
ಆದ್ದರಿಂದ ಮರಗಳನ್ನು ಕೇವಲ ಸಂಪನ್ಮೂಲಗಳೆಂದು ನೋಡುವುದಕ್ಕಿಂತ, ನಮ್ಮ ಆರೋಗ್ಯ ಮತ್ತು ನೆಮ್ಮದಿಯ ಸಹಯಾತ್ರಿಗಳೆಂದು ಕಾಣಬೇಕು. ಪ್ರತಿದಿನ ಕೆಲವು ನಿಮಿಷವಾದರೂ ಮರಗಳ ನಡುವೆ ನಡೆಯೋಣ, ಹಸಿರನ್ನು ಕಣ್ತುಂಬಿಕೊಳ್ಳೋಣ, ಪ್ರಕೃತಿಯ ಉಸಿರನ್ನು ಅನುಭವಿಸೋಣ. ಒಂದೆರಡು ನಿಮಿಷ ಮರಗಳನ್ನು ತಬ್ಬಿಕೊಳ್ಳೋಣ. ಪ್ರಕೃತಿ ಜೊತೆಗಿನ ನಮ್ಮ ಬದುಕನ್ನು ಮರಳಿ ಪಡೆಯೋಣ!
ಮರಗಳನ್ನು ತಬ್ಬಿಕೊಳ್ಳುವುದರಿಂದ ಆಗೋ ಪ್ರಯೋಜನ
ಒತ್ತಡ ನಿವಾರಣೆ: ಮರಗಳನ್ನು ತಬ್ಬಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.
ಸಕಾರಾತ್ಮಕ ಶಕ್ತಿ: ಪ್ರಕೃತಿಯೊಂದಿಗೆ ನೇರ ಸಂಪರ್ಕ ಸಾಧಿಸುವುದರಿಂದ ಉಲ್ಲಾಸ ಮತ್ತು ಮಾನಸಿಕ ನೆಮ್ಮದಿ ದೊರೆಯುತ್ತದೆ.
ಆರೋಗ್ಯಕರ ವಾತಾವರಣ: ಮರಗಳು ಬಿಡುಗಡೆ ಮಾಡುವ ಶುದ್ಧ ಗಾಳಿ ಮತ್ತು ಸಸ್ಯಜನ್ಯ ತೈಲಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಮರಗಳನ್ನು ತಬ್ಬಿಕೊಳ್ಳುತ್ತೇವೆ ಎಂದು ಎಲ್ಲಾ ಜಾತಿಯ ಮರಗಳನ್ನೂ ತಬ್ಬಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಎಲ್ಲಾ ಮರಗಳ ಸಹವಾಸಕೂಡ ಸಾಧ್ಯವಿಲ್ಲ. ಕೆಲವು ಮರಗಳು ಮುಳ್ಳುಗಳಿಂದ ಕೂಡಿರುತ್ತವೆ. ಇನ್ನೂ ಕೆಲವು ಮರಗಳು ಅಲರ್ಜಿ ಉಂಟು ಮಾಡಬಹುದು. ಇದನ್ನೆಲ್ಲ ಅರಿತು ನಾವು ಮರಗಳ ಸಹವಾಸ ಮಾಡಬೇಕಾಗುತ್ತದೆ. ಒಟ್ಟಾರೆ ಮರಗಳ ಸಹವಾಸ, ಮರಗಳನ್ನು ತಬ್ಬಿಕೊಳ್ಳೋದ್ರಿಂದ ಖಂಡಿತ ನೆಮ್ಮದಿ ಸಿಗುತ್ತೆ. ಇತ್ತೀಚೆಗೆ ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಂಡು ತಮ್ಮ ಅನುಭವ ಹೇಳಿಕೊಂಡಿರೋದನ್ನು ನೋಡಬಹುದಾಗಿದೆ.
