– 35,000 ಕೋಟಿಗೆ ವ್ಯಾಪಾರ ವೃದ್ಧಿಸುವ ಗುರಿ
– 40 ವರ್ಷಗಳಲ್ಲಿ ಕಿವೀಸ್‌ಗೆ ಕಾಲಿಟ್ಟ ಭಾರತದ ಮೊದಲ ಪ್ರಧಾನಿ
ವೆಲ್ಲಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಜಿಲೆಂಡ್‌ನ (New Zealand) ಆಕ್ಲೆಂಡ್‌ಗೆ ಭೇಟಿ ನೀಡಿದ್ದು, 40 ವರ್ಷಗಳಲ್ಲೇ ಭಾರತದ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ. ಶನಿವಾರ (ಜು.11) ಪ್ರಧಾನಿ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ (Christopher Luxon) ಮುಕ್ತ ವ್ಯಾಪಾರ ಒಪ್ಪಂದ, ರಕ್ಷಣಾ ಸಹಕಾರ, ಕಡಲ ಭದ್ರತೆ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಉಭಯ ದೇಶದ ನಾಯಕರು 10 ಪ್ರಮುಖ ಒಪ್ಪಂದಗಳು ಮತ್ತು 18 ಪ್ರಮುಖ ನಿರ್ಧಾರಗಳಿಗೆ ಸಹಿ ಹಾಕಿದ್ದಾರೆ. ಪ್ರಧಾನಿ ಮೋದಿ (PM Modi) ಮತ್ತು ಲಕ್ಸನ್ ಆಕ್ಲೆಂಡ್‌ನಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಒಪ್ಪಂದದ ಅನ್ವಯ ಭಾರತ (India) ಮತ್ತು ನ್ಯೂಜಿಲೆಂಡ್ 2030ರ ವೇಳೆಗೆ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು 35,000 ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಹೊಂದಿವೆ. ಭಾರತವು ನ್ಯೂಜಿಲೆಂಡ್‌ಗೆ ರಾಸಾಯನಿಕಗಳು, ಸಂಸ್ಕರಿಸಿದ ಆಹಾರ ಹಾಗೂ ಕೃಷಿ ಉತ್ಪನ್ನಗಳು ಮತ್ತು ಇತರ ಸರಕುಗಳನ್ನು ಪೂರೈಸಲಿದೆ. ಅಂತೆಯೇ ನ್ಯೂಜಿಲೆಂಡ್ ಹಣ್ಣಿನ ಪದಾರ್ಥ ಮತ್ತು ನಿರ್ಣಾಯಕ ಖನಿಜಗಳು, ಇತರ ವಸ್ತುಗಳನ್ನ ಭಾರತಕ್ಕೆ ಕೈಗೆಟುಕುವ ದರದಲ್ಲಿ ಪೂರೈಸಲಿದೆ.
ಭಾರತದಿಂದ ನ್ಯೂಜಿಲೆಂಡ್‌ಗೆ ಹೋಗುವ ಹೆಚ್ಚಿನ ಸರಕುಗಳಿಗೆ ಶೂನ್ಯ ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ, ನ್ಯೂಜಿಲೆಂಡ್‌ನಿಂದ ಬರುವ ಸರಕುಗಳಿಗೂ ಕಡಿಮೆ ಅಥವಾ ಶೂನ್ಯ ತೆರಿಗೆ ವಿಧಿಸುವುದು ಒಪ್ಪಂದದ ಮುಖ್ಯ ಉದ್ದೇಶವಾಗಿದೆ.
My gratitude to PM Luxon, the Government and people of New Zealand for the exceptional warmth during this fruitful visit.
This visit, the first by an Indian Prime Minister in four decades, has opened an important new chapter in our relations. Our decision to elevate ties to a… pic.twitter.com/gCLPniBIe9
— Narendra Modi (@narendramodi) July 11, 2026
ಮೊದಲ ದಿನದ ಭೇಟಿಯ ಭಾಗವಾಗಿ ಹೂಡಿಕೆದಾರರು ಹಾಗೂ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಮೋದಿ, ಮುಕ್ತ ವ್ಯಾಪಾರ ಒಪ್ಪಂದದ ಮೂಲಕ 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನ ದ್ವಿಗುಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 20 ಶತಕೋಟಿ ಡಾಲರ್ (ಸುಮಾರು 1,91,064 ಕೋಟಿ) ಹೂಡಿಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಭಾರತ-ನ್ಯೂಜಿಲೆಂಡ್ ಒಪ್ಪಂದದ ಪ್ರಮುಖ 10 ಅಂಶಗಳು
* 2030 ರ ವೇಳೆಗೆ ಪರಸ್ಪರ ಸಹಕಾರ ಹೆಚ್ಚಿಸಲು ಒಂದು ಮಾರ್ಗಸೂಚಿ ಅಭಿವೃದ್ಧಿಪಡಿಸಲಾಗುವುದು. ಎರಡೂ ದೇಶಗಳು ಜಂಟಿಯಾಗಿ ವ್ಯಾಪಾರ, ರಕ್ಷಣೆ, ಶಿಕ್ಷಣ, ಕೃಷಿ, ಕ್ರೀಡೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಮೇಲೆ ಕೇಂದ್ರೀಕರಿಸುವ ಮತ್ತು ವ್ಯಾಪಾರ 35,000 ಕೋಟಿ ರೂ.ಗಳಿಗೆ ಹೆಚ್ಚಿಸುವ ಉದ್ದೇಶವನ್ನು ಈ ಮಾರ್ಗಸೂಚಿ ಹೊಂದಿರಲಿದೆ.
* ಎರಡೂ ದೇಶಗಳು ರಕ್ಷಣಾ ಮತ್ತು ಸಮುದ್ರ ಮಾರ್ಗಗಳಲ್ಲಿ ಸಹಕಾರ ಹೆಚ್ಚಿಸುತ್ತವೆ. ಜಂಟಿ ವ್ಯಾಯಾಮ ನಡೆಸುವ ಜೊತೆಗೆ ವಿಪತ್ತು ಪರಿಹಾರಕ್ಕೆ ಸಹಕರಿಸುತ್ತಾರೆ. ಇದು ಕಡಲ ಕಣ್ಗಾವಲ ಭದ್ರತೆಗೂ ಸಹಕಾರಿಯಾಗಲಿದೆ. ನೌಕಾ ಚಾರ್ಟ್‌ಗಳು ಮತ್ತು ಡೇಟಾವನ್ನು ಸಹ ಹಂಚಿಕೊಳ್ಳಲಾಗುತ್ತದೆ.
* ಅಗತ್ಯವಿದ್ದಾಗ ಎರಡೂ ದೇಶಗಳ ಸೈನ್ಯಗಳು ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಸಹ ಒದಗಿಸುತ್ತವೆ. ಇದು ರಕ್ಷಣಾ ಸಹಕಾರವನ್ನು ಹೆಚ್ಚಿಸುತ್ತದೆ.
* ಭಯೋತ್ಪಾದನಾ ನಿಗ್ರಹ ಅಭಿಯಾನ ಪ್ರಾರಂಭಿಸಲು ಜಂಟಿ ಕಾರ್ಯ ಗುಂಪನ್ನು ಸ್ಥಾಪಿಸಲಾಗುತ್ತದೆ. ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಒಪ್ಪಂದಕ್ಕೂ ಒಪ್ಪಿಗೆ ಸೂಚಿಸಲಾಗಿದೆ.
* ಹೈನುಗಾರಿಕೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನ ಮತ್ತು ಪರಿಣತಿಯನ್ನ ಹಂಚಿಕೊಳ್ಳಲಾಗುವುದು, ಇದು ರೈತರಿಗೆ ಮತ್ತು ಆಹಾರ ಭದ್ರತೆಗೆ ಪ್ರಯೋಜನ ನೀಡುತ್ತದೆ.
* ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಒಪ್ಪಂದವೂ ಏರ್ಪಟ್ಟಿದೆ. ಎರಡೂ ದೇಶಗಳು ಪ್ರಯಾಣವನ್ನು ಸುಗಮಗೊಳಿಸುತ್ತವೆ, ಇದು ಪ್ರವಾಸೋದ್ಯಮ ವಲಯದಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸಲು ಅನುಕೂಲ ಮಾಡಿಕೊಡುತ್ತದೆ.
* ಉನ್ನತ ಕಾರ್ಯಕ್ಷಮತೆಯ ಕ್ರೀಡೆ, ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ಔಷಧದಲ್ಲಿ ಸಹಕಾರ. ರಗ್ಬಿ, ರೋಯಿಂಗ್, ಅಥ್ಲೆಟಿಕ್ಸ್ ಮತ್ತು ಗಾಲ್ಫ್‌ನಂತಹ ಕ್ರೀಡೆಗಳಿಗೆ ಪರಸ್ಪರ ಬೆಂಬಲ.
* ಉದ್ಯೋಗ, ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು 2030 ರ ವೇಳೆಗೆ ವ್ಯವಹಾರದಲ್ಲಿ 35,000 ಕೋಟಿ ರೂ. ಗುರಿಯನ್ನು ನಿಗದಿಪಡಿಸಲಾಗಿದೆ.
* ಆಹಾರ ತಂತ್ರಜ್ಞಾನ ಮತ್ತು ಭದ್ರತೆಯಲ್ಲಿ ಪರಸ್ಪರ ಸಹಕಾರ, ನ್ಯೂಜಿಲೆಂಡ್‌ಗಾಗಿ ಹೊಸ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು.
* ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್ 1.91 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಮತ್ತು ಭಾರತ – ನ್ಯೂಜಿಲೆಂಡ್ ನಡುವಿನ ಹೆಚ್ಚಿನ ಆಮದು ಮತ್ತು ರಫ್ತುಗಳು ತೆರಿಗೆ ಮುಕ್ತವಾಗಿರುತ್ತವೆ.
* ಭಾರತದ UPI ಅನ್ನು ನ್ಯೂಜಿಲೆಂಡ್‌ನ ವೇಗದ ಪಾವತಿ ವ್ಯವಸ್ಥೆಯೊಂದಿಗೆ ಲಿಂಕ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ, ಇದು ಡಿಜಿಟಲ್ ಪಾವತಿಗಳನ್ನು ಹೆಚ್ಚು ಸುಲಭಗೊಳಿಸುತ್ತದೆ.
