– ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಗೆ ಟ್ರಂಪ್ ಖಂಡನೆ
ವಾಷಿಂಗ್ಟನ್: ರಷ್ಯಾದಿಂದ ಡೀಸೆಲ್ ಪೂರೈಕೆಗೆ ನಿರ್ಬಂಧ ಸಡಿಲಿಸುವ ಒಪ್ಪಂದ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಷ್ಯಾ–ಉಕ್ರೇನ್ ಯುದ್ಧ ಅಂತ್ಯಗೊಳಿಸುವಲ್ಲಿ ವಿಫಲರಾಗಿದ್ದು, ಉಕ್ರೇನ್‌ಗೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, 2022ರಲ್ಲಿ ಯುದ್ಧ ಆರಂಭವಾಗಲು ಯಾವುದೇ ಕಾರಣವಿರಲಿಲ್ಲ ಎಂದರಲ್ಲದೇ, ಒಪ್ಪಂದ ಮಾಡಿಕೊಳ್ಳಬಲ್ಲ ಹೊಸ ನಾಯಕನನ್ನ ಉಕ್ರೇನ್ ಆಯ್ಕೆ ಮಾಡಿಕೊಳ್ಳಬೇಕು ಕರೆ ಕೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡುವ ಅಮೆರಿಕದ ನಿರ್ಧಾರವನ್ನ ಟೀಕಿಸಿದ್ದಾರೆ. ಇಂಧನ ರಫ್ತಿನಿಂದ ರಷ್ಯಾಕ್ಕೆ ಸಿಗುವ ಆದಾಯವನ್ನ ಯುದ್ಧ ಮುಂದುವರಿಸಲು ಬಳಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರಷ್ಯಾದ ದಾಳಿಯಿಂದ ಉಕ್ರೇನ್‌ನ ಇಂಧನ ಮೂಲಸೌಕರ್ಯಗಳು ಹಾನಿಗೊಳಗಾಗುತ್ತಿವೆ. ಹೀಗಾಗಿ ರಷ್ಯಾದ ಯುದ್ಧ ಸಾಮರ್ಥ್ಯವನ್ನು ಕುಗ್ಗಿಸಲು ಅಮೆರಿಕ, ಯುರೋಪ್ ಸೇರಿದಂತೆ ಮಿತ್ರ ರಾಷ್ಟ್ರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಟ್ರಂಪ್ ಘೋಷಿಸಿರುವ ಒಪ್ಪಂದದ ಪ್ರಕಾರ, ರಷ್ಯಾ ಆರಂಭದಲ್ಲಿ 3 ಲಕ್ಷ ಟನ್‌ಗೂ ಅಧಿಕ ಡೀಸೆಲ್ ಪೂರೈಸಲಿದ್ದು, ನವೆಂಬರ್‌ನಲ್ಲಿ 5 ಲಕ್ಷ ಟನ್ ಹಾಗೂ ನಂತರ ಹೆಚ್ಚುವರಿ ಪೂರೈಕೆ ಮಾಡುವುದಾಗಿ ತಿಳಿಸಿದ್ದಾರೆ.

