– ಅರಣ್ಯ ಇಲಾಖೆ ಹೈ ಅಲರ್ಟ್, ಸ್ಥಳೀಯರಿಗೆ ಎಚ್ಚರಿಕೆ
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದ ಬೆಟ್ಟದ ಸಾಲುಗಳಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ.
ಭಾನುವಾರ ಸಂಜೆಯಿಂದ ಆನೆಗೊಂದಿ ಸುತ್ತಮುತ್ತಲಿನ ಹಾಗೂ ಬೆಟ್ಟದ ಸಮೀಪದಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಹನಗಳ ಮೂಲಕ ಸಂಚರಿಸಿ ಧ್ವನಿವರ್ಧಕದ ಮೂಲಕ ಜಾಗೃತಿ ಸಂದೇಶ ನೀಡುತ್ತಿದ್ದಾರೆ. ಒಂಟಿಯಾಗಿ ಸಂಚರಿಸದಂತೆ ಹಾಗೂ ಜಾನುವಾರುಗಳನ್ನ ಮೇಯಿಸಲು ಬೆಟ್ಟದ ಪ್ರದೇಶಗಳಿಗೆ ಕರೆದೊಯ್ಯದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಗ್ರಾಮದ ಸುತ್ತಮುತ್ತಲಿನ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಹುಲಿಯ ಚಲನವಲನ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮೈಕ್ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.

ಅರಣ್ಯ ಇಲಾಖೆ ನೀಡಿರುವ ಪ್ರಮುಖ ಸೂಚನೆಗಳು:
* ಒಬ್ಬಂಟಿಯಾಗಿ ಓಡಾಡಬೇಡಿ.
* ರೈತರು ಹೊಲ-ಗದ್ದೆಗಳಿಗೆ ಒಬ್ಬರೇ ತೆರಳಬಾರದು.
* ರಾತ್ರಿ ವೇಳೆ ಅರಣ್ಯ ಪ್ರವೇಶಿಸಬಾರದು.
* ಗುಡ್ಡಗಾಡು ಪ್ರದೇಶಗಳಿಗೆ ತೆರಳುವುದು ಹಾಗೂ ಓಡಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.
* ಹಸು, ಎತ್ತು, ಮೇಕೆ ಸೇರಿದಂತೆ ಸಾಕುಪ್ರಾಣಿಗಳನ್ನು ಸುರಕ್ಷಿತ ಕೊಟ್ಟಿಗೆ ಅಥವಾ ಆವರಣದಲ್ಲಿ ಕಟ್ಟಿಹಾಕಬೇಕು.
* ಕೃಷಿ ಕೆಲಸಗಳಿಗೆ ತೆರಳುವಾಗ ಕಡ್ಡಾಯವಾಗಿ ಗುಂಪಿನಲ್ಲಿ ತೆರಳಬೇಕು.
* ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಬೇಕು.
ಹುಲಿಯ ಚಲನವಲನದ ಮೇಲೆ ನಿಗಾ ಇರಿಸಲು ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ 20ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನ ಅಳವಡಿಸಿದ್ದಾರೆ. ಕ್ಯಾಮೆರಾಗಳಲ್ಲಿ ಹುಲಿ ಓಡಾಡುವ ದೃಶ್ಯ ಸೆರೆಯಾಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.
ಖಚಿತ ಮಾಹಿತಿ ಶೀಘ್ರ
ತಾಲೂಕಿನ ಸಣಾಪುರ, ಕುಮಾರರಾಮನ ಬೆಟ್ಟ ಹಾಗೂ ತೆಂಬಾದ ಅರಣ್ಯ ಪ್ರದೇಶದ ಸುತ್ತಮುತ್ತ ಹುಲಿ ಕಂಡುಬಂದಿದೆ ಎನ್ನಲಾಗುತ್ತಿರುವುದು ಹಾಗೂ ಪತ್ತೆಯಾಗಿವೆ ಎನ್ನಲಾದ ಹುಲಿ ಹೆಜ್ಜೆ ಗುರುತುಗಳ ಕುರಿತು ಶೀಘ್ರದಲ್ಲೇ ಖಚಿತ ಮಾಹಿತಿ ಬಹಿರಂಗಪಡಿಸುವುದಾಗಿ ಪ್ರಾದೇಶಿಕ ವಲಯ ಸಂರಕ್ಷಣಾಧಿಕಾರಿ ಬಸವರಾಜ ಪೂರಾರ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸಣಾಪುರ, ಬಸಾಪುರ, ನಾರಾಯಣಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹುಲಿ ಸಂಚರಿಸುತ್ತಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದೆ. ಇದರಿಂದ ವಿಶೇಷವಾಗಿ ಬೆಟ್ಟದ ಸಮೀಪದ ಜನವಸತಿ ಪ್ರದೇಶಗಳಲ್ಲಿ ಆತಂಕ ಹೆಚ್ಚಾಗಿದೆ ಎಂದರು.
“ಹುಲಿ ಇದೆಯೋ ಇಲ್ಲವೋ ಎಂಬುದು ಸದ್ಯ ಖಚಿತವಾಗಿಲ್ಲ. ಆದರೆ ಜನರಲ್ಲಿ ಈ ಬಗ್ಗೆ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಈಗಾಗಲೇ 20ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೆರಡು ದಿನಗಳಲ್ಲಿ 15ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದುವರೆಗೆ ಯಾವುದೇ ಪ್ರದೇಶದಲ್ಲೂ ಹುಲಿ ನೇರವಾಗಿ ಕಂಡುಬಂದಿಲ್ಲ,” ಎಂದು ಬಸವರಾಜ ಪೂರಾರ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಇದೀಗ ಕ್ಯಾಮೆರಾ ಕಣ್ಗಾವಲು ಹೆಚ್ಚಿಸಿದ್ದು, ಹುಲಿಯ ಅಸ್ತಿತ್ವದ ಬಗ್ಗೆ ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳುವ ಕಾರ್ಯ ಮುಂದುವರಿದಿದೆ.

