ಲಕ್ನೋ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಸಮಾಜವಾಧಿ ಪಕ್ಷದ (SP) ಮೂವರು ಬಂಡಾಯ ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ಎಸ್ಪಿ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್ ಮತ್ತು ವಿನೋದ್ ಚತುರ್ವೇದಿ, ಅ.14 ರಂದು ಗೌರಿಗಂಜ್‌ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಮೂವರು ರೆಬೆಲ್ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ (BJP) ರಾಜ್ಯ ಅಧ್ಯಕ್ಷ ಪಂಕಜ್ ಚೌಧರಿ ಮತ್ತು ಹಲವು ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಇದು 2027ರ ವಿಧಾನಸಭಾ ಚುನಾವಣೆಗೂ ಮುನ್ನವೇ ಸಮಾಜವಾಧಿ ಪಕ್ಷಕ್ಕೆ ದೊಡ್ಡ ಆಘಾತವಾಗಿದೆ.
ಈ ಮೂವರು ರೆಬೆಲ್ ಶಾಸಕರು (Three rebel SP MLAs) ಕಳೆದ ರಾಜ್ಯಸಭಾ ಚುನಾವಣಾ ಸಮಯದಲ್ಲಿ ʻಕ್ರಾಸ್-ವೋಟಿಂಗ್ʼ ಕೂಡ ಮಾಡಿ ಸುದ್ದಿಯಾಗಿದ್ದರು. ಇದೀಗ 2027ರ ಚುನಾವಣೆಗೂ ಮುನ್ನವೇ ಪ್ರಬಲ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿರುವುದು, ಪಕ್ಷದ ಬಹುದೊಡ್ಡ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ರಾಕೇಶ್ ಪ್ರತಾಪ್ ಸಿಂಗ್ ಯಾರು?
ರಾಕೇಶ್ ಪ್ರತಾಪ್ ಸಿಂಗ್ ಅವರು ಅಮೇಥಿಯ ಗೌರಿಗಂಜ್ ಸದರ್ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಆ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಬಲ ಸಾಬೀತುಪಡಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ, ಸಿಂಗ್ ಅವರು ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿಯ ಚಂದ್ರ ಪ್ರಕಾಶ್ ಮಿಶ್ರಾ ಅವರನ್ನ 6,963 ಮತಗಳ ಅಂತರದಿಂದ ಸೋಲಿಸಿದ್ದರು. ರಾಕೇಶ್ ಪ್ರತಾಪ್ ಸಿಂಗ್ 79,040 ಮತಗಳನ್ನ ಪಡೆದರೆ, ಚಂದ್ರ ಪ್ರಕಾಶ್ ಮಿಶ್ರಾ 72,077 ಮತಗಳನ್ನು ಪಡೆದಿದ್ದರು.
ಯಾರು ವಿನೋದ್ ಚತುರ್ವೇದಿ?
ವಿನೋದ್ ಚತುರ್ವೇದಿ ಜಲೌನ್ ಜಿಲ್ಲೆಯ ಕಲ್ಪಾ ವಿಧಾನಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ, ಚತುರ್ವೇದಿ ನಿಷಾದ್ ಪಕ್ಷದ ಛೋಟೆ ಸಿಂಗ್ ವಿರುದ್ಧದ ತೀವ್ರ ಪೈಪೋಟಿಯಲ್ಲಿ ಕಲ್ಪಾ ಕ್ಷೇತ್ರವನ್ನು ಗೆದ್ದುಕೊಂಡರು. ಆ ಸಮಯದಲ್ಲಿ ನಿಷಾದ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಒಟ್ಟು 69,782 ಮತಗಳನ್ನ ಪಡೆದಿದ್ದ ಚತುರ್ವೇದಿ ಅವರು 2,816 ಮತಗಳ ಅಂತರದಿಂದ ಗೆದ್ದಿದ್ದರು. ಎದುರಾಳಿ ಛೋಟೆ ಸಿಂಗ್ 66,966 ಮತಗಳನ್ನ ಪಡೆದುದ್ದರು.
ಅಭಯ್ ಸಿಂಗ್ ಯಾರು?
ಅಯೋಧ್ಯಾ ಜಿಲ್ಲೆಯ ಗೋಸಾಯಿನ್‌ಗಂಜ್ ವಿಧಾನಸಭಾ ಕ್ಷೇತ್ರವು 2008ರ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯ ನಂತರ ಅಸ್ತಿತ್ವಕ್ಕೆ ಬಂದಿತು. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ, ಈ ಕ್ಷೇತ್ರದಲ್ಲಿನ ಸ್ಪರ್ಧೆಯು ಹೆಚ್ಚಾಗಿ ಅಭಯ್ ಸಿಂಗ್ ಮತ್ತು ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ಅವರ ಕುಟುಂಬದ ನಡುವೆಯೇ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭಯ್ ಸಿಂಗ್, ಖಬ್ಬು ತಿವಾರಿ ಅವರ ಪತ್ನಿ ಆರತಿ ತಿವಾರಿ ವಿರುದ್ಧ 13,079 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದರು. ಅಭಯ್ ಸಿಂಗ್ 1,05,863 ಮತಗಳನ್ನ ಪಡೆದರೆ, ಆರತಿ ತಿವಾರಿ 92,784 ಮತಗಳನ್ನು ಪಡೆದರು.

