ಉಡುಪಿ: ಮಣ್ಣು ತೆಗೆಯಲು ಹೋಗಿ ಬಾವಿಗೆ ಬಿದ್ದಿದ್ದ ಮೂವರು ಕಾರ್ಮಿಕರನ್ನು ಕಾರ್ಕಳದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಎಂಬವರು ಬಾವಿಯ ಮಣ್ಣು ತೆಗೆಯಲೆಂದು ಬಾವಿಗಿಳಿದಿದ್ದರು. ರಾಜೇಶ್ ಮೇಲಕ್ಕೆ ಬರುವಾಗ ಬಿದ್ದು ಗಾಯಗೊಂಡಿದ್ದರು. ಇವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಬಾವಿಯಲ್ಲಿ ಸಿಲುಕಿಕೊಂಡಿದ್ದರು.
ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ಬಾವಿಯಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿದ್ದ ರಾಜೇಶ್ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆ ಸಾಗಿಸಲಾಗಿದೆ.

