ಇತ್ತೀಚಿನ ದಿನಗಳಲ್ಲಿ AI ನಮ್ಮ ಮೇಲೆ ಆಳ್ವಿಕೆ ನಡೆಸುತ್ತಿದೆ. ಜನ ಎಲ್ಲದಕ್ಕೂ AIಅನ್ನೇ ಬಳಸುವಂತಾಗಿದೆ. ಯಾರಾದರೂ ಒಂದು ಫೋಟೋ ಹಾಕಿದರೆ ಅದು ನಿಜಾನಾ? ಅಲ್ಲವಾ? ಎಂದು ನಂಬುವುದಕ್ಕೂ ಪದೇ ಪದೇ ಯೋಚಿಸುವಂತೆ ಮಾಡಸುತ್ತಿದೆ ಈ ಕೃತಕ ಬುದ್ಧಿಮತ್ತೆ. ಹೀಗಿರುವಾಗ ಇದರ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸದಲ್ಲಿಯೂ ಈ AI ಅನ್ನು ಬಳಸುವ ಮೂಲಕ ಎಷ್ಟೋ ಜನರ ಹೊಟ್ಟೆಪಾಡನ್ನೇ ಕಿತ್ತುಕೊಂಡು ಬಿಟ್ಟಿದೆ. ಹೀಗಿರುವಾಗ ನಿಜಕ್ಕೂ ಇದು ಹೇಗೆ ಕೆಲಸ ಮಾಡುತ್ತದೆ. ನಾವು ಕೊಡುವ Prompt ಒಂದಿದ್ದರೆ ಸಾಕಾ? ಇದು ಎಲ್ಲದಕ್ಕೂ ಉತ್ತರಿಸಿ ಬಿಡುತ್ತಾ? ಎನ್ನುವ ಹಲವಾರು ಪ್ರಶ್ನೆಗೆ ಇಲ್ಲಿದೆ ಸಂಪೂರ್ಣ ಉತ್ತರ.
ಸಾಮಾನ್ಯವಾಗಿ ನಾವೆಲ್ಲರು ಚಾಟ್‌ಜಿಪಿಟಿ (ChatGPT), ಗೂಗಲ್ ಜೆಮಿನಿ (Gemini) ಅಥವಾ ಕ್ಲಾಡ್ (Claude) ನಂತಹ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ಗಳನ್ನು ಬಳಸುವಾಗ ನಾವು ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ತಕ್ಷಣವೇ ನಿಖರವಾದ ಉತ್ತರ ನೀಡುತ್ತವೆ. ಅಪರಾಧ ಸಂಬಂಧಿಸಿದ ಹಾಗೂ ಹಿಂಸಿಸುವಂತಹ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡುವುದಿಲ್ಲ. ಇದರ ಹೊರತಾಗಿ ನೀವು ಕೇಳುವ ಹೆಚ್ಚಿನ ಪ್ರಶ್ನೆಗಳಿಗೆ AI ಉತ್ತರ ನೀಡುತ್ತದೆ. ಆದರೆ, ಈ AI ಬಾಟ್‌ಗಳು ಕೇವಲ ನೀವು ನೀಡುವ ‘ಪ್ರಾಂಪ್ಟ್’ (ಪ್ರಶ್ನೆ) ನೋಡಿ ಮಾತ್ರ ಉತ್ತರ ನೀಡುವುದಿಲ್ಲ ಬದಲಿಗೆ ಪ್ರತಿ ಉತ್ತರದ ಹಿಂದೆ ಬಳಕೆದಾರರಿಗೆ ಕಾಣಿಸದ ಕೆಲವು ಗುಪ್ತ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳು ಕೆಲಸ ಮಾಡುತ್ತಿರುತ್ತವೆ
ಇದನ್ನು ತಾಂತ್ರಿಕ ಭಾಷೆಯಲ್ಲಿ ಸಿಸ್ಟಮ್ ಪ್ರಾಂಪ್ಟ್ಸ್(System Prompts) ಅಥವಾ ಹಿನ್ನೆಲೆಯ ಸೂಚನೆಗಳು ಎಂದು ಕರೆಯಲಾಗುತ್ತದೆ. ಇವು AI ಕಂಪನಿಗಳು ತಮ್ಮ ಬಾಟ್‌ಗಳಿಗೆ ಮೊದಲೇ ಪ್ರೋಗ್ರಾಂ ಮಾಡಿರುವ ನಿಯಮಗಳಾಗಿವೆ.
ಅಮೆರಿಕದ ಪ್ರಸಿದ್ಧ ಪತ್ರಿಕೆ ‘ದಿ ವಾಷಿಂಗ್ಟನ್ ಪೋಸ್ಟ್’ ನಡೆಸಿರುವ ಇತ್ತೀಚಿನ ತನಿಖೆಯೊಂದು ಎಐ ಲೋಕದ ಈ ರಹಸ್ಯವನ್ನು ಬಯಲಿಗೆಳೆದಿದೆ. ಶಿಕ್ಷಣ, ಉದ್ಯೋಗ, ಬ್ಯಾಂಕಿಂಗ್ ಮತ್ತು ಸರ್ಕಾರಿ ವ್ಯವಸ್ಥೆಗಳಲ್ಲಿ ಎಐ ವೇಗವಾಗಿ ಸೇರಿಕೊಳ್ಳುತ್ತಿರುವ ಈ ಕಾಲದಲ್ಲಿ, ನಮಗೆ ಸಿಗುವ ಮಾಹಿತಿಯನ್ನು ತೆರೆಮರೆಯಿಂದ ಯಾರು ನಿಯಂತ್ರಿಸುತ್ತಿದ್ದಾರೆ ಎಂಬ ದೊಡ್ಡ ಪ್ರಶ್ನೆ ಈಗ ಎದ್ದಿದೆ.
ಏನಿದು ಸಿಸ್ಟಮ್ ಪ್ರಾಂಪ್ಟ್? ಎಐ ಹೇಗೆ ಕೆಲಸ ಮಾಡುತ್ತದೆ?
ನಾವು ಚಾಟ್‌ಜಿಪಿಟಿ, ಗೂಗಲ್ ಜೆಮಿನಿ, ಕ್ಲಾಡ್ ಎಐ (AI) ಆಪ್‌ಗಳಲ್ಲಿ ಯಾವುದೇ ಪ್ರಶ್ನೆಯನ್ನು ಟೈಪ್ ಮಾಡುವಾಗ, ಅದು ನೇರವಾಗಿ ನಮ್ಮ ಪ್ರಶ್ನೆಗಷ್ಟೇ ಉತ್ತರಿಸುತ್ತಿದೆ ಎಂದು ನಂಬಿರುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಬಳಸುವ ಈ ಚಾಟ್‌ಬಾಟ್‌ಗಳ ಹಿಂದೆ ಒಂದು‘ಅದೃಶ್ಯ ನಿಯಮಗಳ ಗೋಡೆ ಕೆಲಸ ಮಾಡುತ್ತಿದೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ‘ಸಿಸ್ಟಮ್ ಪ್ರಾಂಪ್ಟ್’ (System Prompt) ಎಂದು ಕರೆಯಲಾಗುತ್ತದೆ.
ಇದು ಎಐನ ಸ್ವಭಾವ, ಮಾತನಾಡುವ ಶೈಲಿ, ಸುರಕ್ಷತೆಯ ಮಿತಿಗಳು ಮತ್ತು ಫಾರ್ಮ್ಯಾಟಿಂಗ್ ಅನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಎಐಗೆ ತನ್ನ ನಿಯಮದಲ್ಲಿ ಹೀಗೆ ಹೇಳಲಾಗಿರುತ್ತದೆ: ಯಾವಾಗಲೂ ವಿನಮ್ರವಾಗಿರು, ಲೈಂಗಿಕ ವಿಷಯಗಳನ್ನು ನಿರಾಕರಿಸು ಮತ್ತು ಪ್ರಸ್ತುತ ವರ್ಷ 2026 ಎಂದು ನೆನಪಿನಲ್ಲಿಡು. ಈ ನಿಯಮಗಳು ಇಲ್ಲದಿದ್ದರೆ ಎಐ ಯಾವುದೇ ಶಿಸ್ತಿಲ್ಲದೆ ಹೇಗೆಂದರೆ ಹಾಗೆ ಉತ್ತರಿಸಲು ಆರಂಭಿಸುತ್ತದೆ. ಎಐ ಕಂಪನಿಗಳು ಅದಕ್ಕೆ ಕೆಲವು ಮೂಲಭೂತ ನಿಯಮಗಳನ್ನು ವಿಧಿಸಿರುತ್ತವೆ. ಉದಾಹರಣೆಗೆ:
ನಡವಳಿಕೆ ಮತ್ತು ಶೈಲಿ: ನೀವು ಒಬ್ಬ ಸಹಾಯಕ ಮತ್ತು ಸಭ್ಯ ರಿಸರ್ಚ್ ಅಸಿಸ್ಟೆಂಟ್ ಆಗಿ ಯೋಚಿಸಬೇಕು, ಉತ್ತರಗಳು ಸರಳವಾಗಿರಬೇಕು ಎಂಬ ನಿಯಮಗಳು.
ಸುರಕ್ಷತಾ ಮಿತಿಗಳು: ಬಾಂಬ್ ತಯಾರಿಸುವುದು ಹೇಗೆ, ಸೈಬರ್ ದಾಳಿ ಮಾಡುವುದು ಹೇಗೆ ಎಂಬಂತಹ ಕಾನೂನುಬಾಹಿರ ಪ್ರಶ್ನೆಗಳಿಗೆ ಉತ್ತರಿಸದಂತೆ AI ಅನ್ನು ನಿರ್ಬಂಧಿಸಲಾಗಿರುತ್ತದೆ.
ಪಕ್ಷಪಾತ ತಡೆಗಟ್ಟುವಿಕೆ: ಯಾವುದೇ ರಾಜಕೀಯ, ಧರ್ಮ ಅಥವಾ ಸೂಕ್ಷ್ಮ ವಿಷಯಗಳ ಬಗ್ಗೆ ಉತ್ತರಿಸುವಾಗ ತಟಸ್ಥ ನಿಲುವು ಹೊಂದಿರಬೇಕು ಎಂಬ ಕಟ್ಟುನಿಟ್ಟಿನ ಆದೇಶವಿರುತ್ತದೆ.
ಬಳಕೆದಾರರು ನೀಡುವ ಪ್ರಾಂಪ್ಟ್ ಕೇವಲ ಶೇಕಡಾ 50ರಷ್ಟು ಮಾತ್ರ ಕೆಲಸ ಮಾಡಿದರೆ, ಉಳಿದ ಶೇಕಡಾ 50ರಷ್ಟು ನಿಯಂತ್ರಣ ಈ ಹಿನ್ನೆಲೆಯ ಸಿಸ್ಟಮ್ ಪ್ರಾಂಪ್ಟ್‌ಗಳದ್ದೇ ಆಗಿರುತ್ತದೆ. ಎಐ ಜಗತ್ತಿನಲ್ಲಿ ಸುರಕ್ಷತೆ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳಲು ಈ ಗುಪ್ತ ನಿಯಮಗಳು ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಈ ನಿಯಮಗಳು ಎಐ ಮುಕ್ತವಾಗಿ ಯೋಚಿಸುವುದನ್ನು ತಡೆಯುತ್ತವೆಯೇ ಎಂಬ ಚರ್ಚೆಯೂ ಈಗ ತಾಂತ್ರಿಕ ವಲಯದಲ್ಲಿ ಆರಂಭವಾಗಿದೆ.
ChatGPT, Gemini ಮತ್ತು Claude ಪ್ರಾಂಪ್ಟ್‌ಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ನಿರ್ದೇಶಿಸುವ ‘ಸಿಸ್ಟಮ್ ಪ್ರಾಂಪ್ಟ್’ (System Prompt) ಕೇವಲ ಸುರಕ್ಷತೆಯ ನಿಯಮಗಳಲ್ಲ, ಬದಲಿಗೆ ಅವು ಆಯಾ ಕಂಪನಿಗಳ ಕೋಟ್ಯಂತರ ಡಾಲರ್ ಮೌಲ್ಯದ ಬೌದ್ಧಿಕ ಆಸ್ತಿ (Intellectual Property) ಆಗಿದೆ. ಇತ್ತೀಚಿನ ಭದ್ರತಾ ಸಂಶೋಧನೆಗಳ ಪ್ರಕಾರ, ಈ ಮೂರೂ ಎಐ ಮಾದರಿಗಳು ಸಂಪೂರ್ಣವಾಗಿ ಭಿನ್ನವಾದ ತಾರ್ಕಿಕ ಚಿಂತನೆ (Logic) ಮತ್ತು ಸ್ವಭಾವವನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.
ChatGPT:
ಇದಲ್ಲದೇ ಕೆಲವು ಗಣಿತಕ್ಕೆ ಸಂಬಂಧಿಸಿದ ವಿಷಯದಲ್ಲಿಯೂ ಕಂಪನಿಗಳು AI ಬಾಟ್‌ಗಳಿಗೆ ಕೆಲವು ನಿಯಮಗಳನ್ನು ವಿಧಿಸಿದ್ದಾರೆ. ಸಾಮಾನ್ಯವಾಗಿ ಗಣಿತದ ಪ್ರಶ್ನೆಗಳನ್ನು AIಗಳು ನೇರವಾಗಿ ಉತ್ತರ ನೀಡುವುದಿಲ್ಲ. ಬದಲಿಗೆ ಹಂತ ಹಂತವಾಗಿ ಉತ್ತರಿಸುತ್ತದೆ. ಕಂಪನಿಗಳ ಮಾಹಿತಿ ಪ್ರಕಾರ AI ಉತ್ತರ ನೀಡುವಾಗ ಅದು ಕೆಲವೊಮ್ಮೆ ತಪ್ಪು ಮಾಡುತ್ತದೆ. ಹೀಗಾಗಿ ಅಂತಹ ತಪ್ಪುಗಳನ್ನು ಆಗದಂತೆ ನೋಡಿಕೊಳ್ಳಲು ಈ ರೀತಿ ಹಂತ ಹಂತವಾಗಿ ಉತ್ತರಿಸುತ್ತದೆ.
ಇನ್ನೂ ಸಮಯಕ್ಕೆ ತಕ್ಕಂತೆ ಬದಲಾಗುವ ಉತ್ತರ ಹೊಂದಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಸತ್ಯಾಸತ್ಯತೆ ಪರಿಶೀಲಿಸಲು ಚಾಟ್‌ಜಿಪಿಟಿಗೆ ಒಂದು ವಿಶೇಷ ಸೂತ್ರ ನೀಡಲಾಗಿದೆ. ಉದಾಹರಣೆಗೆ, ನೀರು 100 ಡಿಗ್ರಿಯಲ್ಲಿ ಕುದಿಯುತ್ತದೆ ಎಂಬುದು ಶಾಶ್ವತ ಸತ್ಯ. ಆದರೆ ಟ್ವಿಟರ್‌ನ ಸಿಇಒ ಯಾರು? ಎಂಬುದು ಕಾಲಕ್ಕೆ ತಕ್ಕಂತೆ ಬದಲಾಗುವ ಮಾಹಿತಿ. ಇಂತಹ ಬದಲಾಗುವ ಮಾಹಿತಿಯ ವಿಷಯದಲ್ಲಿ ಕೇವಲ 10% ಅನುಮಾನವಿದ್ದರೂ, ಎಐ ತನ್ನ ಮೆಮೊರಿ ಬಳಸಬಾರದು, ಬದಲಿಗೆ ಕಡ್ಡಾಯವಾಗಿ ವೆಬ್ ಸರ್ಚ್ (Web Search) ಮಾಡಿಯೇ ಉತ್ತರ ನೀಡಬೇಕು ಎಂಬ ಕಠಿಣ ನಿಯಮವಿದೆ.
Google Gemini:
ಜೆಮಿನಿಯು ಬಳಕೆದಾರರು ಟೈಪ್ ಮಾಡುವ ಭಾಷೆ, ಮೂಡ್ ಮತ್ತು ಶೈಲಿಯನ್ನು ತಕ್ಷಣವೇ ಗಮನಿಸುತ್ತದೆ. ಬಳಕೆದಾರರು ಗಂಭೀರವಾಗಿ ಪ್ರಶ್ನೆ ಕೇಳಿದರೆ ಗಂಭೀರವಾಗಿ, ಹಾಸ್ಯಮಯವಾಗಿ ಕೇಳಿದರೆ ಅದೇ ಶೈಲಿಯಲ್ಲಿ ಸ್ನೇಹಪರವಾಗಿ ಉತ್ತರಿಸಲು ಇದಕ್ಕೆ ಪ್ರೋಗ್ರಾಂ ಮಾಡಲಾಗಿದೆ.
ಜೆಮಿನಿ ತನ್ನ ಸ್ವಂತ ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ಅತಿ ಹೆಚ್ಚು ತಾಂತ್ರಿಕ ಪದಗಳನ್ನು ಬಳಸುವುದನ್ನು ಗೂಗಲ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇದು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಇರಬೇಕು ಎಂಬುದು ಗೂಗಲ್ ಆಶಯ.
ಈ ನಿಯಮಗಳನ್ನು ಕಂಪನಿಗಳು ರಹಸ್ಯವಾಗಿಡುವುದು ಏಕೆ?
- ಸುರಕ್ಷತೆ: ನಿಯಮಗಳು ಎಲ್ಲರಿಗೂ ತಿಳಿದರೆ, ಹ್ಯಾಕರ್‌ಗಳು ಎಐ ಅನ್ನು ವಂಚಿಸಿ ಅಪಾಯಕಾರಿ ಮಾಹಿತಿಗಳನ್ನು ಹೊರತೆಗೆಯುವುದು ಸುಲಭವಾಗುತ್ತದೆ (ಇದನ್ನು ‘ಪ್ರಾಂಪ್ಟ್ ಇಂಜೆಕ್ಷನ್ ದಾಳಿ’ ಎನ್ನಲಾಗುತ್ತದೆ).
- ವ್ಯಾಪಾರದ ರಹಸ್ಯ: ಈ ನಿಯಮಗಳೇ ಆಯಾ ಕಂಪನಿಯ ಎಐನ ವಿಶೇಷ ಶೈಲಿಯಾಗಿರುತ್ತದೆ. ಇದು ಅವರ ವ್ಯಾಪಾರದ ‘ರಹಸ್ಯ ಸೂತ್ರ’ (Secret Sauce).
- ಕಾನೂನು ರಕ್ಷಣೆ: ಕೃತಿಸ್ವಾಮ್ಯ (Copyright), ಚುನಾವಣೆ ಮತ್ತು ವೈದ್ಯಕೀಯ ಸಲಹೆಗಳ ವಿಷಯದಲ್ಲಿ ತೊಂದರೆಯಾಗದಂತೆ ಈ ನಿಯಮಗಳು ಕಂಪನಿಗಳನ್ನು ಕಾಪಾಡುತ್ತವೆ.
ಇದರಿಂದ ಭಾರತದ ಮೇಲಾಗುವ ಪರಿಣಾಮವೇನು?
ವಿಶ್ವದಲ್ಲೇ ಅತಿ ಹೆಚ್ಚು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತವು ಒಂದು. ಶೇಕಡಾ 87ರಷ್ಟು ಭಾರತೀಯ ಉದ್ಯಮಗಳು ಎಐ ಬಳಸುತ್ತಿವೆ
- ಸ್ವಂತ ಕಾಯ್ದೆಯ ಕೊರತೆ: ಭಾರತದಲ್ಲಿ ಪ್ರಸ್ತುತ ಐಟಿ ಕಾಯ್ದೆ ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ (DPDP) ಕಾಯ್ದೆ ಇದೆಯೇ ಹೊರತು, ಎಐ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನಿಲ್ಲ.
- ಭಾರತೀಯ ಸಂಸ್ಕೃತಿಯ ನಿರ್ಲಕ್ಷ್ಯ: ಪ್ರಸ್ತುತ ಬಳಕೆಯಲ್ಲಿರುವ ಬಹುತೇಕ ಎಐ ನಿಯಮಗಳನ್ನು ಅಮೆರಿಕ ಅಥವಾ ಯುರೋಪ್‌ನಲ್ಲಿ ಸಿದ್ಧಪಡಿಸಲಾಗುತ್ತದೆ. ಹಾಗಾಗಿ ಇವುಗಳಲ್ಲಿ ಭಾರತದ ಭಾಷಾ ವೈವಿಧ್ಯತೆ, ಸ್ಥಳೀಯ ಕಾನೂನು ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳಿಗೆ ಸರಿಯಾದ ಸ್ಥಾನ ಸಿಗುತ್ತಿಲ್ಲ ಎಂಬ ಆತಂಕ ತಜ್ಞರಲ್ಲಿದೆ.
ಎಐ (AI) ಚಾಟ್‌ಬಾಟ್‌ಗಳು ಕೇವಲ ಮುಕ್ತವಾಗಿ ಯೋಚಿಸುವ ತಂತ್ರಜ್ಞಾನಗಳಲ್ಲ. ಬದಲಿಗೆ, ಅವು ಕಾರ್ಪೊರೇಟ್ ಕಂಪನಿಗಳು ಮೊದಲೇ ಸಿದ್ಧಪಡಿಸಿದ ಅದೃಶ್ಯ ನಿಯಮಗಳ ಚೌಕಟ್ಟಿನೊಳಗೆ ಕೆಲಸ ಮಾಡುವ ಡಿಜಿಟಲ್ ಸಹಾಯಕರು ಮಾತ್ರ.
ಭವಿಷ್ಯದಲ್ಲಿ ಈ ತಂತ್ರಜ್ಞಾನ ನಮ್ಮ ಬದುಕನ್ನು ಸಂಪೂರ್ಣವಾಗಿ ನಿಯಂತ್ರಿಸಲಿರುವಾಗ, ಈ ರಹಸ್ಯ ನಿಯಮಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಪಾರದರ್ಶಕತೆ ಅತ್ಯಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಭಾರತದಂತಹ ಬೃಹತ್ ಮಾರುಕಟ್ಟೆಯಲ್ಲಿ, ಪಾಶ್ಚಿಮಾತ್ಯ ದೇಶಗಳು ರೂಪಿಸಿದ ನಿಯಮಗಳು ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ತರದಂತೆ ಇರುವುದು ಅಗತ್ಯವಾಗಿದೆ. ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಜವಾಬ್ದಾರಿಯೂ ಸಮನಾಗಿ ಸಾಗಿದಾಗ ಮಾತ್ರ ಎಐ ವ್ಯವಸ್ಥೆಯು ಸಮಾಜಕ್ಕೆ ನಿಜವಾದ ಪ್ರಯೋಜನ ನೀಡಬಲ್ಲದು.
.
