ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಅದ್ವೈತ್ ಉಪಾಧ್ಯಾಯನಿಗಾಗಿ (Techie Advaith) ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಇಂದು ಬ್ರೇಕ್ ಬಿದ್ದಿದೆ.
ಕಳೆದ 6 ದಿನಗಳಿಂದ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ನೆಲಮಂಗಲ ಟೌನ್ ಮತ್ತು ಡಾಬಸ್‌ಪೇಟೆ ಪೊಲೀಸರು, ಅರಣ್ಯ ಸಿಬ್ಬಂದಿ, ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಹಾಗೂ ಸ್ಥಳೀಯರು ಜಂಟಿಯಾಗಿ ಬೆಟ್ಟ, ಕಂದಕ ಮತ್ತು ಕಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಇಷ್ಟೆಲ್ಲಾ ಶೋಧ ನಡೆಸಿದರೂ ಅದ್ವೈತ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಶಿವಗಂಗೆ ಬೆಟ್ಟದಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಸದ್ಯಕ್ಕೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದೀಗ ಪ್ರಕರಣದ ಮುಂದಿನ ತನಿಖೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಿಯಾಂಕ್ ಖರ್ಗೆ RSS ವಿರೋಧಿ ಇಲಾಖೆ ಪಡೆಯಲಿ: ಬಿವೈವಿ ವ್ಯಂಗ್ಯ
ಈ ನಡುವೆ ಡಾಬಸ್‌ಪೇಟೆ ಪೊಲೀಸರು ಪ್ರಕರಣದ ಮಾಹಿತಿಯನ್ನು ಕಾಡುಗೋಡಿ ಪೊಲೀಸರಿಗೆ ರವಾನಿಸಿದ್ದಾರೆ. ಮುಂದಿನ ತನಿಖೆಯನ್ನು ಕಾಡುಗೋಡಿ ಪೊಲೀಸರು ಮುಂದುವರಿಸಲಿದ್ದಾರೆ. ಇದರ ಮಧ್ಯೆ ಅದ್ವೈತ್ ನಾಪತ್ತೆ ಪ್ರಕರಣದಲ್ಲಿ ಹೊಸ ಅನುಮಾನವೂ ಮೂಡಿದೆ. ಪ್ರೇಯಸಿಯನ್ನು ಹೆದರಿಸಲು ಅಥವಾ ಯಾವುದಾದರೂ ಕಾರಣಕ್ಕೆ ಅದ್ವೈತ್ ಉದ್ದೇಶಪೂರ್ವಕವಾಗಿ ನಾಪತ್ತೆ ನಾಟಕವಾಡಿದ್ದಾನಾ? ಎಂಬ ಅನುಮಾನ ಪೊಲೀಸರಲ್ಲೂ ಮೂಡಿದೆ.ಇದನ್ನೂ ಓದಿ: ಕೂಡ್ಲಿಗಿ ಹೈವೇಯಲ್ಲಿ ಬೈಕಿಗೆ ಕಾರು ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು
ಈ ನಿಟ್ಟಿನಲ್ಲಿ ಕಾಡುಗೋಡಿ ಪೊಲೀಸರು ಅದ್ವೈತ್‌ನ ಹಿನ್ನೆಲೆ, ಕೊನೆಯ ಚಟುವಟಿಕೆಗಳು ಹಾಗೂ ನಾಪತ್ತೆಯಾಗಿರುವ ಸಂದರ್ಭದ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ತನಿಖೆಯಲ್ಲಿ ಪ್ರಕರಣಕ್ಕೆ ಯಾವ ತಿರುವು ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

