ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ನವ ನಿರ್ದೇಶಕ ಬಡಿಗೇರ್ ದೇವೇಂದ್ರ ನಿರ್ದೇಶಿಸಿರುವ ಪ್ರಯೋಗಾತ್ಮಕ ‘ಇನ್’ ಚಿತ್ರದ ಟೀಸರನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ಈ ಹಿಂದೆ ಮಹಿಳಾ ಪ್ರಧಾನ ‘ರುದ್ರಿ’ ಚಿತ್ರ ನಿರ್ದೇಶಿಸಿದ್ದ ಬಡಿಗೇರ್ ದೇವೇಂದ್ರ ಈ ಬಾರಿಯೂ ಒಂದು ಮನೆಯಲ್ಲಿ ಒಂಟಿ ಯುವತಿಯನ್ನು ಇಟ್ಟುಕೊಂಡು ಚಿತ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ವೀಕ್ಷಿಸಿ ಬಿಡುಗಡೆ ಮಾಡಿರುವ ನಟ ಸುದೀಪ್ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ ಚಿತ್ರ ಯಶಸ್ವಿಯಾಗಲಿ ಎಂದು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಡಿಗೇರ್ ದೇವೇಂದ್ರ, ನನ್ನ ಮೊದಲ ಚಿತ್ರ ರುದ್ರಿಯೂ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಈಗ ನಿರ್ದೇಶಿಸಿರುವ ಇನ್ ಚಿತ್ರವೂ ಮಹಿಳಾ ಪ್ರಧಾನ ಚಿತ್ರವಾಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಿದ್ದವಾಗಿರುವ ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಈ ರೀತಿಯ ಪ್ರಯತ್ನ ನಡೆದಿರುವ ಉದಾಹರಣೆ ಕಡಿಮೆ. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ
ನಮ್ಮ ಈ ಪ್ರಯತ್ನಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಟೀಸರ್ ನೋಡಿ, ನಮ್ಮ ಪ್ರಯತ್ನ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದರು. ಈಗ ಟೀಸರನ್ನು ಕಿಚ್ಚ ಸುದೀಪ್ ಅವರು ಲಾಂಚ್ ಮಾಡಿದ್ದು, ಹೆಮ್ಮೆಯ ಸಂಗತಿ. ದೊಡ್ಡವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಈ ಚಿತ್ರವನ್ನು ಮಾಡಿದ್ದೇವೆ. ಖಂಡಿತವಾಗಿಯೂ ಜನರು ಈ ಚಿತ್ರ ನೋಡಲು ಕಾತುರರಾಗಿರುತ್ತಾರೆ ಎನ್ನುವ ವಿಶ್ವಾಸ ನನ್ನದು ಎಂದು ಹೇಳಿದ್ದಾರೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ
ಚಿತ್ರದ ನಾಯಕಿ ಪಾವನಾ ಗೌಡ, ಇನ್ ಚಿತ್ರ ಅತ್ಯಂತ ವಿಭಿನ್ನವಾಗಿದ್ದು, ಇಡೀ ಚಿತ್ರದ ತುಂಬ ನಾನೊಬ್ಬಳೇ ಸ್ಕ್ರೀನ್‌ನಲ್ಲಿ ಬರೋದು, ಇದೊಂದು ದೊಡ್ಡ ಸವಾಲಿನ ಚಿತ್ರ, ಈ ಚಿತ್ರದ ಟೀಸರ್‌ನ್ನು ಕಿಚ್ಚ ಸುದೀಪ್ ಸರ್ ಲಾಂಚ್ ಮಾಡಿರುವುದು ನನಗೆ ತುಂಬ ಖುಷಿಯಾಗಿದೆ. ಈ ಚಿತ್ರವನ್ನು ಜನರು ಇಷ್ಟ ಪಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಐಡಿಯಾ ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಶಾಂತ ಅಯ್ಯಗಾರಿ ನಿರ್ಮಾಪಕರಾಗಿದ್ದು, ದೀಪಕ ದುರ್ಗಾಯಿ, ಕರವೀರ ಸಂಗೊಳ್ಳಿ, ಸಹದೇವ ಪಾಗೋಜಿ, ನಾಗಪ್ಪ ಓಮನ್ನವರ, ಧನರಾಜ ಬಡಿಗೇರ, ಸಂಜೋತಾ ಪಾಗೋಜಿ ಸೇರಿ ಐದಾರು ಜನ ಸ್ನೇಹಿತರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಭರತ್ ನಾಯಕ್ ಸಂಗೀತ ನೀಡಿದ್ದು, ಸಾಹಿತ್ಯ ಬಡಿಗೇರ್ ದೇವೇಂದ್ರ, ಶಂಕರ ಪಾಗೋಜಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.