ಮುಂಬೈ: ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪರಿಣಾಮ, ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ (Surya Kumar Yadav) ಅವರ ಟಿ20 ತಂಡದ ನಾಯಕತ್ವ ಸ್ಥಾನಕ್ಕೆ ಕುತ್ತು ಬಂದಿದೆ. ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಬಿಸಿಸಿಐ (BCCI) ಗಂಭೀರ ಚಿಂತನೆ ನಡೆಸಿದ್ದು, ತೆರವಾಗಲಿರುವ ಈ ಮಹತ್ವದ ಸ್ಥಾನ ಕೈಗೆತ್ತಿಕೊಳ್ಳಲು ಮೂವರು ಪ್ರಮುಖ ಆಟಗಾರರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ.
ಜೂನ್ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಸಜ್ಜಾಗುತ್ತಿದ್ದು, ಈ ಸರಣಿಗಳಿಂದ ಸೂರ್ಯಕುಮಾರ್ ಅವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಇಂದು (ಗುರುವಾರ) ನಡೆಯಲಿರುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಸೂರ್ಯಕುಮಾರ್ ಅವರ ನಾಯಕತ್ವದ ಭವಿಷ್ಯದ ಕುರಿತು ಅಧಿಕೃತ ನಿರ್ಧಾರ ಹೊರಬೀಳಲಿದ್ದು, ಮುಂದಿನ ನಾಯಕ ಯಾರು ಎಂಬ ಕುತೂಹಲ ಕ್ರಿಕೆಟ್ ವಲಯದಲ್ಲಿ ಮನೆಮಾಡಿದೆ.
ಶ್ರೇಯಸ್ ಅಯ್ಯರ್
ಸೂರ್ಯಕುಮಾರ್ ಅವರಂತೆಯೇ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಶ್ರೇಯಸ್ ಅಯ್ಯರ್(Shreyas Iyer) ಸದ್ಯ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಹಂತದವರೆಗೆ ಮುನ್ನಡೆಸಿದ್ದ ಅಯ್ಯರ್, ಈ ಬಾರಿಯೂ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. 14 ಟೆಸ್ಟ್, 76 ಏಕದಿನ ಹಾಗೂ 25 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅವರ ಅನುಭವವನ್ನು ಪರಿಗಣಿಸಿ ಆಯ್ಕೆ ಸಮಿತಿ ಅಯ್ಯರ್ ಪರ ಒಲವು ತೋರಿದೆ ಎನ್ನಲಾಗಿದೆ.

ತಿಲಕ್ ವರ್ಮಾ
ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ತಿಲಕ್ ವರ್ಮಾ (Tilak Varma) ಕೂಡ ನಾಯಕತ್ವದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಭವಿಷ್ಯದ ದೃಷ್ಟಿಯಿಂದ ವಯಸ್ಸನ್ನು ಮಾನದಂಡವಾಗಿಟ್ಟುಕೊಂಡರೆ 23 ವರ್ಷದ ತಿಲಕ್ ವರ್ಮಾ ಸೂಕ್ತ ಎಂದು ಆಯ್ಕೆ ಸಮಿತಿಯ ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯದ ಗೆಲುವಿನಲ್ಲಿ ತಿಲಕ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರ ನಾಯಕತ್ವದ ಗುಣಗಳನ್ನು ಪರೀಕ್ಷಿಸಲು ಶ್ರೀಲಂಕಾದಲ್ಲಿ ನಡೆಯಲಿರುವ ‘ಎ’ ಸರಣಿಗೆ ಅವರನ್ನು ನಾಯಕರನ್ನಾಗಿ ನೇಮಿಸಲು ಬಿಸಿಸಿಐ ಯೋಜಿಸಿದೆ. ಇದನ್ನೂ ಓದಿ: ನಾನು ಕ್ರಿಕೆಟ್ ಆಡಿದ್ದು ನನಗಾಗಿಯೇ ಹೊರತು ದೇಶಕ್ಕಾಗಿ ಅಲ್ಲ – ಕಪಿಲ್ ದೇವ್

ಸಂಜು ಸ್ಯಾಮ್ಸನ್
ಮತ್ತೊಂದೆಡೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಶ್ರೇಯಸ್ ಅಯ್ಯರ್ ಅವರ ಪ್ರದರ್ಶನದ ಬಗ್ಗೆ ಅಷ್ಟಾಗಿ ತೃಪ್ತಿ ಹೊಂದಿಲ್ಲ ಎನ್ನಲಾಗಿದೆ. ಹಿಂದೆ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿದ್ದಾಗ ಅಯ್ಯರ್ ಕೋಲ್ಕತ್ತಾ ತಂಡದ ನಾಯಕರಾಗಿದ್ದರು, ಹೀಗಾಗಿ ಅಯ್ಯರ್ ಆಟದ ಶೈಲಿ ಬಗ್ಗೆ ಗಂಭೀರ್‌ಗೆ ಕೆಲವು ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ. ಈ ಕಾರಣದಿಂದಾಗಿ ಗಂಭೀರ್ ಅವರು ಸಂಜು ಸ್ಯಾಮ್ಸನ್ ಪರ ಒಲವು ವ್ಯಕ್ತಪಡಿಸಿದ್ದಾರೆ. ಸ್ಯಾಮ್ಸನ್ ಇತ್ತೀಚಿನ ಟಿ20 ವಿಶ್ವಕಪ್‌ನ ನಾಕೌಟ್ ಪಂದ್ಯಗಳ ತಂಡದಲ್ಲೂ ಸ್ಥಾನ ಪಡೆದಿದ್ದರು.
ಸಂಜು ಸ್ಯಾಮ್ಸನ್ ಮತ್ತು ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರ ಬ್ಯಾಟಿಂಗ್‌ನಲ್ಲಿನ ‘ಸ್ಥಿರತೆಯ ಕೊರತೆ’ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗುರುವಾರ ಬಿಸಿಸಿಐ ಸಭೆಯ ನಂತರ ಭಾರತ ಟಿ20 ತಂಡದ ನಾಯಕತ್ವ ಯಾರ ಹೆಗಲಿಗೇರಲಿದೆ ಎಂಬ ಗೊಂದಲಕ್ಕೆ ತೆರೆ ಬೀಳಲಿದೆ.













