ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ, ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್‌ಗೆ (Tarun Tejpal) ಇನ್ನೆರಡು ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದೆ.
2013 ರಲ್ಲಿ ಮಾಜಿ ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ತೇಜ್‌ಪಾಲ್ ಅವರನ್ನು ದೋಷಿ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ, 2021 ರಲ್ಲಿ ನೀಡಿದ್ದ ಖುಲಾಸೆಯನ್ನು ರದ್ದುಗೊಳಿಸಿತ್ತು. ಇದೇ ಆಗಸ್ಟ್ 6 ರಂದು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್ – ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ
63 ವರ್ಷದ ಮಾಜಿ ಪತ್ರಕರ್ತ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ತಾನು ಬಲಿಪಶು ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತೇಜ್‌ಪಾಲ್‌ಗೆ ಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿ ಗೋವಾ ಸರ್ಕಾರವೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಅಪರಾಧ ಸಾಬೀತಾದ ಆದೇಶವನ್ನು ಪ್ರಶ್ನಿಸುವ ಮೊದಲು ಶರಣಾಗುವುದು ಕಡ್ಡಾಯ. ನಿಯಮಗಳ ಪ್ರಕಾರ ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪರ್ಯಾಯವಾಗಿ, ಶರಣಾಗತಿಯಿಂದ ವಿನಾಯಿತಿ ಕೋರಿ ಅರ್ಜಿಯನ್ನು ಮೇಲ್ಮನವಿಯೊಂದಿಗೆ ಸಲ್ಲಿಸಬಹುದು.
ವಿಚಾರಣೆಯ ಸಮಯದಲ್ಲಿ ಗೋವಾ ಸರ್ಕಾರದ ಪರವಾಗಿ ಹಾಜರಾದ ತುಷಾರ್ ಮೆಹ್ತಾ, ತೇಜ್‌ಪಾಲ್ ಅವರು ಮೊದಲು ಶರಣಾಗತಿ ಪ್ರಮಾಣಪತ್ರವನ್ನು ಸಲ್ಲಿಸಿದರೆ ಮಾತ್ರ ಅವರ ಮೇಲ್ಮನವಿಯನ್ನು ಆಲಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ: ಹೇಳಿಕೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಗಡ್ಕರಿ ಕಚೇರಿಯಿಂದ ಸ್ಪಷ್ಟನೆ
ಇದನ್ನು ವಿರೋಧಿಸಿ, ತೇಜ್‌ಪಾಲ್ ಪರ ಹಾಜರಾದ ಕಪಿಲ್ ಸಿಬಲ್, ಬಾಂಬೆ ಹೈಕೋರ್ಟ್ ಈಗಾಗಲೇ ತೇಜ್‌ಪಾಲ್ ಅವರ ಶಿಕ್ಷೆಗೆ ತಡೆ ನೀಡಿದೆ ಎಂದು ವಾದಿಸಿದರು. ಆದ್ದರಿಂದ, ಅವರನ್ನು ಮತ್ತೆ ಶರಣಾಗುವಂತೆ ಕೇಳುವುದು ಸೂಕ್ತವಲ್ಲ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಎರಡು ವಾರಗಳಲ್ಲಿ ಶರಣಾಗುವಂತೆ ಸೂಚಿಸಿದೆ.
