ಚೆನ್ನೈ: ಕಾವೇರಿ ನದಿಗೆ (Cauvery River) ಅಡ್ಡಲಾಗಿ ಕರ್ನಾಟಕ ಸರ್ಕಾರದ (Karnataka Government) ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯ (Mekedatu Project) ಭೂಮಿ ಪೂಜೆ ಘೋಷಣೆಗೆ ತಮಿಳುನಾಡು (Tamil Nadu) ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಸಾರ್ವಜನಿಕ ಹೇಳಿಕೆಗಳು ಹಾಗೂ ಭೂಮಿ ಪೂಜೆಯ (Bhumi Pooja) ಘೋಷಣೆಯು, ಜೀವನೋಪಾಯಕ್ಕಾಗಿ ಕಾವೇರಿ ನದಿಯನ್ನೇ ನಂಬಿಕೊಂಡಿರುವ ತಮಿಳುನಾಡಿನ ಲಕ್ಷಾಂತರ ರೈತರಲ್ಲಿ ಭಾರಿ ಆತಂಕ ಮೂಡಿಸಿದೆ ಎಂದು ವಿಜಯ್ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಒಪ್ಪಿಗೆಯನ್ನು ಪಡೆಯದೆ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು ಎಂದು ವಿಜಯ್ ಅವರು ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ತಕ್ಷಣವೇ ತಿರಸ್ಕರಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗದ (CWC) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಸುಪ್ರೀಂ ತೀರ್ಪಿನ ಉಲ್ಲಂಘನೆ: ಸುಮಾರು ಮೂರು ದಶಕಗಳ ಸುದೀರ್ಘ ಕಾನೂನು ಹೋರಾಟದ ನಂತರ ಫೆಬ್ರವರಿ 16, 2018 ರಲ್ಲಿ ಸುಪ್ರೀಂ ಕೋರ್ಟ್ ಕಾವೇರಿ ನೀರಿನ ವಿವಾದಕ್ಕೆ ಅಂತಿಮ ತೀರ್ಪು ನೀಡಿದೆ. ಮೇಕೆದಾಟು ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅನುಮತಿಸಿದ ಯೋಜನೆಗಳ ಪಟ್ಟಿಯಲ್ಲಿಲ್ಲ. ಹೀಗಿದ್ದೂ ಕರ್ನಾಟಕ ಭೂಮಿ ಪೂಜೆ ಘೋಷಿಸಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?
ಹೊಸ ಜಲಾಶಯಕ್ಕೆ ಅವಕಾಶವಿಲ್ಲ: ಕಾವೇರಿ ಜಲಾನಯನ ಪ್ರದೇಶವು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಲಭ್ಯವಿರುವ ನೀರನ್ನು ಈಗಾಗಲೇ ಶೇ.50 ರಷ್ಟು ಅವಲಂಬನೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಆದ್ದರಿಂದ ಹೊಸದಾಗಿ ಬೃಹತ್ ಸಂಗ್ರಹಣಾ ಜಲಾಶಯ ನಿರ್ಮಿಸಲು ಯಾವುದೇ ಕಾನೂನು ಅವಕಾಶವಿಲ್ಲ.
ನೀರನ್ನು ತಡೆಯುವ ಪ್ರಯತ್ನ: ಕರ್ನಾಟಕ-ತಮಿಳುನಾಡು ಗಡಿಯ ಮೇಲ್ಭಾಗದಲ್ಲಿ 67.16 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಮೂಲಕ, ತಮಿಳುನಾಡಿಗೆ ಹರಿಯಬೇಕಾದ ಅನಿಯಂತ್ರಿತ ಜಲಾನಯನ ಪ್ರದೇಶದ ನೀರನ್ನು ತಡೆಯಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ದೃಢವಾಗಿ ನಂಬುತ್ತದೆ. ಕೆಳಭಾಗದ ರಾಜ್ಯಕ್ಕೆ ಸಿಗುವ ನೀರಿನ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ಮೇಲ್ಭಾಗದ ರಾಜ್ಯ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಪರಿಸರ ಕಾನೂನುಗಳ ಉಲ್ಲಂಘನೆ: ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಪರಿಣಾಮದ ಮೌಲ್ಯಮಾಪನ (EIA) ಅಧ್ಯಯನ ನಡೆಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅನುಮತಿ ನೀಡಿಲ್ಲ. ಈ ಹಿಂದೆ ಫೆಬ್ರವರಿ 19, 2019 ರಂದು ನಡೆದ ಸಭೆಯಲ್ಲಿ ತಜ್ಞರ ಸಮಿತಿಯು ಅಂತರ-ರಾಜ್ಯ ಸಮಸ್ಯೆಗಳಿರುವುದರಿಂದ ರಾಜ್ಯಗಳ ನಡುವೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿ ಪ್ರಸ್ತಾವನೆಯನ್ನು ಹಿಂತಿರುಗಿಸಿತ್ತು. ಹೀಗಾಗಿ ಕರ್ನಾಟಕದ ಈ ನಡೆ ಪರಿಸರ ಕಾನೂನುಗಳಿಗೂ ವಿರುದ್ಧವಾಗಿದೆ.
ಕೇಂದ್ರ ಜಲ ಆಯೋಗದ ನಡೆಗೆ ಆಶ್ಚರ್ಯ: ತಮಿಳುನಾಡು ಸರ್ಕಾರದ ಮನವಿಯನ್ನು ಪರಿಗಣಿಸದೆ, ಕೇಂದ್ರ ಜಲ ಆಯೋಗ (CWC) ಕರ್ನಾಟಕದ ಮೇಕೆದಾಟು ಯೋಜನೆಯ ಪ್ರಸ್ತಾವನೆಯನ್ನು ಪರಿಗಣಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಡಿಕೆಶಿ ಹೇಳಿದ್ದೇನು?
ನಾವು ಕೇವಲ ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್‌ಗಾಗಿ ಹೋಗಿ ಮೇಕೆದಾಟು ಜಾಗದಲ್ಲಿ ಗುದ್ದಲಿ ಪೂಜೆ ಮಾಡುವುದಿಲ್ಲ. ಯೋಜನೆ ಮರುಪರಿಶೀಲಿಸಿ ಹೊಸ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು (DPR) ಸಿದ್ಧಪಡಿಸಲಾಗಿದ್ದು ಕೇಂದ್ರಕ್ಕೆ ಕಳಹಿಸಲಾಗುವುದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣ, ಯಾವುದೇ ವಿಳಂಬವಿಲ್ಲದೆ ಅಧಿಕೃತವಾಗಿ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಇತ್ತೀಚಿಗೆ ಹೇಳಿದರು.
