ಚೆನ್ನೈ: ತಮಿಳುನಾಡು (Tamil Nadu) ಜನರಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್ (LPG Cylinders) ಉಚಿತವಾಗಿ ನೀಡಲು ಸಿಎಂ ವಿಜಯ್ ಸರ್ಕಾರ ಮುಂದಾಗಿದೆ.
ʻಅನ್ನಪೂರ್ಣಿ ಸೂಪರ್ ಸಿಕ್ಸ್ʼ (Annapooranai Super Six) ಹೆಸರಿನಲ್ಲಿ ತಮಿಳುನಾಡು ಸರ್ಕಾರ ಈ ಯೋಜನೆ ಘೋಷಿಸಿದೆ. ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಈ ಯೋಜನೆ ಅನ್ವಯ ಆಗಲಿದೆ. ಈ ಯೋಜನೆಯಿಂದ 1.30 ಕೋಟಿ ಕುಟುಂಬಗಳಿಗೆ ಸಹಾಯವಾಗಲಿದೆ. ಅಂದಾಜು 4000 ಕೋಟಿ ರೂ. ಹಣ ಈ ಯೋಜನೆಗೆ ಬಳಕೆಯಾಗಲಿದೆ. ಇದನ್ನೂ ಓದಿ: ನೀರು ನಮ್ಮನ್ನು ಒಗ್ಗೂಡಿಸಬೇಕು.. ವಿಭಜಿಸಬಾರದು: ವಿಜಯ್ ಸಮ್ಮುಖದಲ್ಲೇ ಡಿಕೆಶಿ ‘ಕಾವೇರಿ’ ಪ್ರಸ್ತಾಪ
ಯೋಜನೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ಈ ಯೋಜನೆಯು ವಾರ್ಷಿಕ ಆದಾಯ 2.5 ಲಕ್ಷ ರೂ. ಮೀರದ ಕುಟುಂಬಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳು ಮತ್ತು ಅಂಗವಿಕಲ ವ್ಯಕ್ತಿಗಳ ಕುಟುಂಬಗಳನ್ನು ಒಳಗೊಳ್ಳುತ್ತದೆ. ಅಡುಗೆ ಅನಿಲ ಸಿಲಿಂಡರ್‌ನ ವೆಚ್ಚವನ್ನು ಮರುಪಾವತಿಸಲಾಗುತ್ತದೆ. ಕಂಪನಿಗಳಿಂದ ಅಧಿಕೃತ ಬಿಲ್ಲಿಂಗ್ ಆಧಾರದ ಮೇಲೆ ಬುಕಿಂಗ್ ಮತ್ತು ವಿತರಣೆಯ ನಂತರ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ನೇರವಾಗಿ ಯೋಜನೆಯ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೊಲ್ಲಿ ರಾಷ್ಟ್ರಗಳ ಸಂಘರ್ಷದ ಪರಿಣಾಮವಾಗಿ ಅನಿಲ ಪೂರೈಕೆ ಅಡಚಣೆಗಳು ಮತ್ತು ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಕಳೆದ ನಾಲ್ಕು ತಿಂಗಳಲ್ಲಿ ಕುಟುಂಬಗಳ ಮೇಲೆ ತೀವ್ರ ಆರ್ಥಿಕ ಹೊರೆ ಹೆಚ್ಚಾಗಿದೆ. ಇದರಿಂದಾಗಿ ಅನೇಕ ಕುಟುಂಬಗಳು ಪರ್ಯಾಯ ಇಂಧನಗಳತ್ತ ಮುಖ ಮಾಡಿವೆ. ಇದನ್ನು ಪರಿಗಣಿಸಿ ʻಅನ್ನಪೂರ್ಣಿ ಸೂಪರ್ ಸಿಕ್ಸ್ʼ ಯೋಜನೆ ಜಾರಿಗೆ ತರುತ್ತಿರುವುದಾಗಿ ಅವರು ಗಮನ ಸೆಳೆದರು.
ತೃತೀಯ ಲಿಂಗಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ
ʻವೆಟ್ರಿ ಪಯಣಂʼ ಯೋಜನೆಯ ವ್ಯಾಪ್ತಿ ವಿಸ್ತರಣೆ ಮಾಡುವುದಾಗಿ ಅವರು ಇದೇ ವೇಳೆ ಘೋಷಿಸಿದರು. ಈ ಮೂಲಕ ಮಹಿಳೆಯರು ಮಾತ್ರವಲ್ಲದೇ ತೃತೀಯ ಲಿಂಗಿಗಳಿಗೂ ಉಚಿತ ಬಸ್ ಪ್ರಯಾಣ (Free Bus Travel) ಯೋಜನೆ ವಿಸ್ತರಣೆ ಆಗಲಿದೆ. ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ ಅಕ್ಟೋಬರ್ 2 ರಿಂದ ಈ ಯೋಜನೆ ವಿಸ್ತರಣೆಯಾಗಲಿದೆ. ಈ ಮೂಲಕ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡಿಲಕ್ಸ್ ಹಾಗೂ ಅಂತರ್ ಜಿಲ್ಲಾ ಬಸ್‌ಗಳಲ್ಲೂ ಫಲಾನುಭವಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.
‘ವೆಟ್ರಿ ಪಯಣಂ’ ಯೋಜನೆಯ ಅನುಷ್ಠಾನದಿಂದ ರಾಜ್ಯ ಖಜಾನೆಗೆ ವಾರ್ಷಿಕ ಸುಮಾರು 6,000 ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಗೆ ಯಾವುದೇ ಆದಾಯ ಮಿತಿ ಅಥವಾ ಪ್ರವಾಸಗಳ ಸಂಖ್ಯೆಯ ಮಿತಿಗಳಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ವಿಜಯ್ ಸರ್ಕಾರ ಯೂಟರ್ನ್; CJP, ಎಡಪಕ್ಷ ಪ್ರತಿಭಟನೆಗಳಿಂದ ವಿದ್ಯಾರ್ಥಿಗಳನ್ನು ದೂರವಿಡುವ ಆದೇಶ ವಾಪಸ್
