– ನಮ್ಮ ನದಿಗಳಿಗೆ ರಾಜಕೀಯ ಗಡಿಗಳು ತಿಳಿದಿಲ್ಲ
– ನೀರು ಹಂಚಿಕೆ ವಿಚಾರದಲ್ಲಿ ಸಹಕಾರ ಮುಖ್ಯ ಎಂದ ಸಿಎಂ
ಚೆನ್ನೈ: ನಮ್ಮ ನದಿಗಳಿಗೆ ರಾಜಕೀಯ ಗಡಿಗಳು ತಿಳಿದಿಲ್ಲ. ನೀರು ನಮ್ಮನ್ನು ಒಗ್ಗೂಡಿಸಬೇಕು.. ವಿಭಜಿಸಬಾರದು ಎಂದು ತ.ನಾಡು ಸಿಎಂ ವಿಜಯ್ (Vijay) ಎದುರೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ‘ಕಾವೇರಿ’ (Cauvery Water) ಪ್ರಸ್ತಾಪ ಮಾಡಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಮಾತನಾಡಿದ ಡಿಕೆಶಿ, ನಾನು ಇಂದು ಇಲ್ಲಿ, ದಕ್ಷಿಣ ಭಾರತದ ವೇದಿಕೆಯಲ್ಲಿ ಒಬ್ಬ ಹೆಮ್ಮೆಯ ಭಾರತೀಯನಾಗಿ ಮತ್ತು 16 ಶತಮಾನಗಳಿಗೂ ಹೆಚ್ಚು ಸುದೀರ್ಘ ಇತಿಹಾಸವನ್ನು ಹೊಂದಿರುವ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಹೆಮ್ಮೆಯ ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ಇವತ್ತಿನ ನನ್ನ ಮಾತುಗಳು ಕರ್ನಾಟಕಕ್ಕಾಗಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಹಿತಾಸಕ್ತಿಗೆ ಶಕ್ತಿ ತುಂಬುವುದು ಕೂಡ ಆಗಿದೆ. ಭಾರತದ ಅಭಿವೃದ್ಧಿಯ ತೇರು ದಕ್ಷಿಣ ಭಾರತ ಮೂಲಕವೇ ಸಾಗುತ್ತಿತ್ತು-ಸಾಗುತ್ತಿದೆ-ಸಾಗುತ್ತದೆ. ದಕ್ಷಿಣದ ಐದು ರಾಜ್ಯಗಳ ಜನಸಂಖ್ಯೆಯು ಭಾರತದ ಒಟ್ಟು ಜನಸಂಖ್ಯೆಯ ಶೇಕಡ 20 ರಷ್ಟಿದೆ. ಆದರೆ, ನಾವು ದೇಶದ ಜಿಡಿಪಿಗೆ (GDP) ಸುಮಾರು ಶೇಕಡಾ 33 ರಷ್ಟು ಕೊಡುಗೆ ನೀಡುತ್ತಿದ್ದೇವೆ. ಅಂದರೆ ದೇಶದ ಅರ್ಥ ವ್ಯವಸ್ಥೆಯಲ್ಲಿ, ಪ್ರತಿ ಮೂರು ರೂಪಾಯಿಗಳಲ್ಲಿ ಒಂದು ರೂಪಾಯಿ ದಕ್ಷಿಣ ಭಾರತದಿಂದಲೇ ಬರುತ್ತಿದೆ. ದೇಶದ ಆರ್ಥಿಕ ಶಕ್ತಿಯ ಎಂಜಿನ್‌ನಲ್ಲಿ, ಕರ್ನಾಟಕ ಅತ್ಯಂತ ಬಲವಾದ ಇಂಧನವಾಗಿದೆ, ಚಾಲನಾ ಶಕ್ತಿಯಾಗಿದೆ ಎಂದರು.
ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ.42 ರಷ್ಟು ಕೊಡುಗೆ ನಮ್ಮದಿದೆ. ನಾವು 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCC) ಹೊಂದುವ ಮೂಲಕ, ಇತರ ರಾಜ್ಯಗಳಿಗಿಂತ ಅಗ್ರ ಸ್ಥಾನದಲ್ಲಿದ್ದೇವೆ. 2019 ಮತ್ತು 2025 ರ ನಡುವೆ, ಭಾರತದ ನೇರ ವಿದೇಶಿ ಹೂಡಿಕೆಯ (FDI) ಈಕ್ವಿಟಿ ಹರಿವಿನಲ್ಲಿ 21 ಶೇಕಡಾಕ್ಕೂ ಹೆಚ್ಚು ಪಾಲನ್ನು ನಾವು ಪಡೆದುಕೊಳ್ಳುವ ಮೂಲಕ ನಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದೇವೆ. ಭಾರತದ ಕಾಫಿ ಉತ್ಪಾದನೆಯ ಸುಮಾರು ಶೇ.70 ಮತ್ತು ಸಂಸ್ಕರಿಸಿದ ಸೌತೆಕಾಯಿ (gherkin) ರಫ್ತಿನ ಶೇ90 ಕೊಡುಗೆ ನಮ್ಮದಾಗಿದೆ. ನಮ್ಮ ಬೆಂಗಳೂರು ಈಗ AI ರಾಜಧಾನಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ನ್ಯೂಯಾರ್ಕ್, ಬೀಜಿಂಗ್ ಮತ್ತು ಲಂಡನ್ ಜೊತೆಗೆ ಸಿಲಿಕಾನ್ ವ್ಯಾಲಿ ಬೆಂಗಳೂರು ಕೂಡ ಪೈಪೋಟಿ ನೀಡುತ್ತಿದೆ. ಆದರೆ Friends ನಾನು ನಮ್ಮ ಹೆಮ್ಮೆಯ ಸಾಧನೆಗಳಿಗೆ ನ್ಯಾಯಯುತ ಮನ್ನಣೆ ಮತ್ತು ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.
ನಾವು ದೇಶದ ಆರ್ಥಿಕತೆ ಹೆಚ್ಚಿಸುವ ನಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ನಿರಂತರವಾಗಿ ಕೊಡುಗೆ ನೀಡುತ್ತಿದ್ದೇವೆ. ನಮ್ಮ ಬೆಳೆವಣಿಗೆಯ ಮತ್ತು ದೇಶದ ಪ್ರಗತಿ ಜೋಡೆತ್ತಿನ ಹಾಗೆ ಎಂದು ಭಾವಿಸುತ್ತೇನೆ. ಹೀಗಾಗಿ, ನಾವು ಕೇಳುವುದಿಷ್ಟೇ, ನಾವು ಕೊಟ್ಟಷ್ಟೆ ಪ್ರಮಾಣದಲ್ಲಿ ನೀವು ನಮ್ಮೊಟ್ಟಿಗೆ ಹಂಚಿಕೊಳ್ಳಬೇಕು. ನಮ್ಮ ಪ್ರೀತಿಗೆ ತಕ್ಕಂತೆ ನಿಮ್ಮ ಪ್ರೀತಿ ಇರಬೇಕು. ನಾವು ನಿರ್ವಹಿಸುವ ಹೊಣೆಗಾರಿಕೆಯಷ್ಟೇ ನಿಮ್ಮ ಕಾಳಜಿಯೂ ವ್ಯಕ್ತವಾಗಬೇಕು. 15ನೇ ಹಣಕಾಸು ಆಯೋಗದ ಅಡಿಯಲ್ಲಿ, ತೆರಿಗೆ ಪಾಲಿನಲ್ಲಿ ಕರ್ನಾಟಕದ ಪಾಲು 4.7 ಶೇಕಡಾದಿಂದ 3.6 ಶೇಕಡಾಕ್ಕೆ ಕುಸಿಯಿತು, ಅಂದರೆ ನಮ್ಮ ಪಾಲಿನಲ್ಲಿ ಸುಮಾರು ಶೇ23 ರಷ್ಟು ಕಡಿತವಾಯಿತು. ಇದರಿಂದ ನಮ್ಮ ರಾಜ್ಯಕ್ಕೆ ಆರು ವರ್ಷಗಳಲ್ಲಿ ಅಂದಾಜು 65,000 ಕೋಟಿ ರೂಪಾಯಿಗಳ ನಷ್ಟವಾಗಿದೆ. ಇದು ರಾಜ್ಯದ ಪ್ರಗತಿಗೆ ಮಾತ್ರವಲ್ಲ ದೇಶದ ಪ್ರಗತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ನಷ್ಟದ ಜೊತೆಗೆ ಕೇಂದ್ರ ಭರವಸೆ ನೀಡಿದ್ದ ಅನುದಾನಗಳು ರಾಜ್ಯಕ್ಜೆ ಬರುತ್ತಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂಪಾಯಿಗಳ ವಿಶೇಷ ಅನುದಾನ ಮತ್ತು 6,000 ಕೋಟಿ ರೂಪಾಯಿಗಳ ರಾಜ್ಯ ನಿರ್ದಿಷ್ಟ ಅನುದಾನಗಳು ಇಂದಿಗೂ ಬಿಡುಗಡೆಯಾಗಿಲ್ಲ. ಆದರೆ 16ನೇ ಹಣಕಾಸು ಆಯೋಗ ನಮಗೆ ಆಗಿದ್ದ ಅನ್ಯಾಯವನ್ನು ಭಾಗಶಃ ಸರಿಪಡಿಸಿ, ನಮ್ಮ ಪಾಲನ್ನು ಶೇ4.131 ಕ್ಕೆ ಹೆಚ್ಚಿಸಿದ್ದಕ್ಕಾಗಿ ನಾನು 16ನೇ ಹಣಕಾಸು ಆಯೋಗಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಆದರೆ ಇದನ್ನು ಮತ್ತೆ 4.7 ಶೇಕಡಾಕ್ಕೆ ಮರುಸ್ಥಾಪಿಸಬೇಕಿದೆ ಎಂದರು.

ದೇಶದ ಜಿಎಸ್‌ಟಿ (GST) ಸಂಗ್ರಹ ಮತ್ತು ಆದಾಯ ತೆರಿಗೆಯಲ್ಲಿ ಕರ್ನಾಟಕ ಎರಡನೇ ಅತಿದೊಡ್ಡ ಕೊಡುಗೆದಾರ ರಾಜ್ಯವಾಗಿದೆ. ಅಭಿವೃದ್ಧಿ ಮತ್ತು ಕಂದಾಯ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯಕ್ಕೆ ಪ್ರೋತ್ಸಾಹ ನೀಡಬೇಕೇ ಹೊರತು ದಂಡ ವಿಧಿಸಬಾರದು. ಹಣಕಾಸು ಆಯೋಗವು ಈ ಪಾಲುಗಳನ್ನು ನಿರ್ಧರಿಸುತ್ತದೆ, ಆದರೆ ಕೇಂದ್ರ ಸರ್ಕಾರವು ಹೆಚ್ಚುವರಿ ಪರಿಶೀಲನಾ ನಿಯಮಗಳ (Terms of Reference) ಮೂಲಕ ಅದಕ್ಕೆ ಮಾರ್ಗದರ್ಶನ ನೀಡಬಹುದು. ಹಣಕಾಸು ಆಯೋಗದ ವರದಿಯನ್ನು ಈಗಾಗಲೇ ಅಂಗೀಕರಿಸಲಾಗಿದ್ದು, ನಮ್ಮ ಪಾಲುಗಳು ಅಂತಿಮಗೊಂಡಿರುವುದರಿಂದ, ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಯೋಜನೆ, ಎಸ್‌ಟಿಆರ್‌ಆರ್ (STRR) ದಕ್ಷಿಣ ಭಾಗ, ರಾಯಚೂರಿಗೆ ಏಮ್ಸ್ (AIIMS) ಮತ್ತು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ನಂತಹ ಹೆಚ್ಚುವರಿ ಕೇಂದ್ರ ಯೋಜನೆಗಳ ಮೂಲಕ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕೆಂದು ನಾವು ಕೇಂದ್ರ ಸರ್ಕಾರವನ್ನು ಈ ದಕ್ಷಿಣದ ವೇದಿಕೆ ಮೂಲಕ ಒತ್ತಾಯಿಸುತ್ತೇವೆ. ಈ ಒತ್ತಾಯ ಇಡೀ ದಕ್ಷಿಣ ಭಾರತದ ರಾಜ್ಯಗಳ ಒತ್ತಾಯವೂ ಆಗಿದೆ ಎಂದು ಹೇಳಿದರು.
ಕ್ಷೇತ್ರ ಪುನರ್‌ವಿಂಗಡಣೆ (Delimitation)
ಯಾವುದೇ ದಕ್ಷಿಣದ ರಾಜ್ಯವೂ ತನ್ನ ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರಾತಿನಿಧ್ಯ ಎಂಬುದು ಕೇವಲ ಸಂಖ್ಯೆಗಳಷ್ಟೇ ಅಲ್ಲ. ಇದು ನಮ್ಮ ಗಾತ್ರ, ವ್ಯಾಪ್ತಿ ಮತ್ತು ಧ್ವನಿಗೆ ಸಂಬಂಧಿಸಿದ ಸಂಗತಿಯಾಗಿದೆ. ದಕ್ಷಿಣ ಭಾರತವು ದೇಶದ ಕರೆಗೆ ಓಗೊಟ್ಟು, ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶಿಸ್ತು ಮತ್ತು ಯಶಸ್ಸಿನಿಂದ ತನ್ನ ಜನಸಂಖ್ಯೆಯನ್ನು ನಿಯಂತ್ರಿಸಿತು. ನಾವು ಪಾಲಿಸಿದ ಶಿಸ್ತೇ ಈಗ ನಮಗೆ ಮುಳುವಾಗುತ್ತಿದೆ. ನಮ್ಮ ಯಶಸ್ಸೇ ನಮ್ಮ ಧ್ವನಿಯನ್ನು ಕ್ಷೀಣಗೊಳಿಸಲು ಕಾರಣವಾಗಬಾರದು. ನಮ್ಮ ಪ್ರಾತಿನಿಧ್ಯದ ಪಾಲು ನಿರ್ದಿಷ್ಟ ಸಂಖ್ಯೆಯಲ್ಲಾಗಲಿ ಅಥವಾ ಪ್ರಮಾಣದಲ್ಲಾಗಲಿ ಕಡಿಮೆಯಾಗಬಾರದು. ನನ್ನ ಮಾತುಗಳನ್ನು ಇಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳು ನನ್ನನ್ನು ಬೆಂಬಲಿಸುತ್ತಾರೆ. ನಮ್ಮ ಧ್ವನಿ ಸಾಕಾರಗೊಳ್ಳಲು ನಾವು ಪರಸ್ಪರ ಗಟ್ಟಿಯಾಗಿ ನಿಲ್ಲುತ್ತೇವೆ ಎನ್ನುವ ಭರವಸೆ ನನಗಿದೆ. ಹಾಗೆಯೇ, ನಮ್ಮ ಮಹಿಳೆಯರಿಗೆ ಸಿಗಬೇಕಾದ ನ್ಯಾಯ ಕಲ್ಪಿಸುವುದರಲ್ಲಿ ನಾವು ತಡ ಮಾಡಬಾರದು. ನಮ್ಮ ಮಹಿಳೆಯರು ತಮ್ಮ ಸೂಕ್ತ ಪ್ರಾತಿನಿಧ್ಯಕ್ಕಾಗಿ ಸಾಕಷ್ಟು ಸಮಯ ಕಾದಿದ್ದಾರೆ. ಮಹಿಳಾ ಮೀಸಲಾತಿಗಾಗಿ ಜನಸಂಖ್ಯೆಯ ಎಣಿಕೆವರೆಗೂ ಕಾಯಬೇಕಾಗಿಲ್ಲ. ಆದ್ದರಿಂದ ಈ ವೇದಿಕೆಯು ಕ್ಷೇತ್ರ ಪುನರ್ವಿಂಗಡಣೆಯ ಕುರಿತು ನಿರ್ಣಯವನ್ನು ಮಂಡಿಸಬೇಕೆಂದು ನಾನು ಸ್ಪಷ್ಟ ನಿಲುವಿನಿಂದ ಆಗ್ರಹಿಸುತ್ತೇನೆ. ನಮ್ಮ ನಿಲುವಿಗೆ ನನ್ನ ಸಹೋದ್ಯೋಗಿ ಮುಖ್ಯಮಂತ್ರಿಗಳು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ನೀಡುತ್ತೇನೆ ಎಂದು ತಿಳಿಸಿದರು.
ಮಿತ್ರರೇ, ನಮ್ಮ ಧ್ವನಿಗೆ ನ್ಯಾಯ ಕೇಳುವುದು ಒಂದು ಭಾಗವಾದರೆ, ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯವಿರುವಂತೆ ನೋಡಿಕೊಳ್ಳುವುದು ಇನ್ನೊಂದು ಭಾಗ. ಈ ಸಭೆಯಲ್ಲಿರುವ ಪ್ರತಿಯೊಂದು ರಾಜ್ಯಕ್ಕೂ ನೀರಿನಷ್ಟು ಮುಖ್ಯವಾದ ಸಂಪನ್ಮೂಲ ಬೇರೆ ಇಲ್ಲ. ನಮ್ಮ ನದಿಗಳಿಗೆ ರಾಜಕೀಯ ಗಡಿಗಳು ತಿಳಿದಿಲ್ಲ. ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ದಕ್ಷಿಣ ರಾಜ್ಯಗಳ ಜೀವನಾಡಿಗಳಾಗಿವೆ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ನೀರು ಹಂಚಿಕೆಯಿಂದ ನೀರು ಸಹಕಾರದತ್ತ ಸಾಗುವ ಸಮಯ ಬಂದಿದೆ. ನೀರಿನ ವಿಚಾರದಲ್ಲಿ ಪರಸ್ಪರತೆ ರೂಪಿಸಲು ಪರಿಸ್ಥಿತಿ ಹದಗೊಂಡಿದೆ. ಈ ಸಹಕಾರ ಮತ್ತು ಪರಸ್ಪರತೆ ಹೇಗಿರುತ್ತದೆ ಎಂಬುದನ್ನು ಕರ್ನಾಟಕ ಈಗಾಗಲೇ ತೋರಿಸಿಕೊಟ್ಟಿದೆ. ಜೂನ್ 25 ರಂದು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರು ತೋರಿಸಿದ ಉದಾರತೆಗೆ ಧನ್ಯವಾದಗಳು, ನಾವು ಜಂಟಿ ಸಾರ್ವಜನಿಕ ಸಭೆಯನ್ನು ನಡೆಸಿದೆವು, ಇದು ಅಂತರರಾಜ್ಯ ಜಲ ಸಂಬಂಧಗಳಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ ದಾಖಲಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಚಂದ್ರಬಾಬು ನಾಯ್ಡು ಮತ್ತು ಶ್ರೀ ರೇವಂತ್ ರೆಡ್ಡಿ ಅವರು ಒಂದೇ ವೇದಿಕೆಯಲ್ಲಿ ನನ್ನ ಜೊತೆಗೆ ಕುಳಿತಿದ್ದರು. ನಾವು ಅಲ್ಲಿ ಪರಸ್ಪರ ಸ್ಪರ್ಧಿಗಳಾಗಿ ಅಲ್ಲ, ಪಾಲುದಾರರಾಗಿ ಮಾತನಾಡಿದೆವು ಎಂದರು.
ಇದು ಕರ್ನಾಟಕದ ಮಾದರಿ
ಪ್ರತಿಯೊಂದು ಕರಾವಳಿ/ನದಿ ಪಾತ್ರದ ರಾಜ್ಯಗಳಿಗೂ ನ್ಯಾಯಬದ್ಧ ಅಗತ್ಯಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಮತ್ತು ನಮ್ಮ ನಿಲುವು ಮೂರು ತತ್ವಗಳ ಮೇಲೆ ಆಧಾರಿತವಾಗಿದೆ: ಸಮಾನತೆ. ಪಾರದರ್ಶಕತೆ. ಸಹಕಾರವು ಎರಡೂ ಕಡೆಯಿಂದ ಇರಬೇಕು. ಕರ್ನಾಟಕವು ತನ್ನ ನೆರೆಹೊರೆಯವರ ಹಕ್ಕುಗಳನ್ನು ಯಾವಾಗಲೂ ಗೌರವಿಸಿದೆ, ಮತ್ತು ಪ್ರತಿಯಾಗಿ ನಮ್ಮ ಹಕ್ಕುಗಳನ್ನು ಗೌರವಿಸಬೇಕೆಂದು ಬಯಸುತ್ತದೆ, ಅಂದರೆ ಟ್ರಿಬ್ಯೂನಲ್ ತೀರ್ಪುಗಳ ಅಡಿಯಲ್ಲಿ ನಮ್ಮ ಕಾನೂನುಬದ್ಧ ಪಾಲು ಮತ್ತು ನಮ್ಮ ರೈತರಿಗೆ ನೀರನ್ನು ಒಯ್ಯುವ ಯೋಜನೆಗಳ ಸಮಯೋಚಿತವಾಗಿ ಪೂರ್ಣಗೊಳ್ಳಬೇಕು, ಜಾರಿ ಆಗಬೇಕು ಎಂದು ನಾವು ಬಯಸುತ್ತೇವೆ. ನಮ್ಮ ನದಿಗಳ ಜೋಡಣೆಯ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆಯ ಸಮಯದಲ್ಲಿ ಕರ್ನಾಟಕದ ನಿರ್ದಿಷ್ಟ ನಿಲುವನ್ನು ನಾನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ. ಆದರೆ ನೀರು ಎಂಬುದು ನಾನು ಪ್ರಾರಂಭಿಸಿದ ವಿಷಯವಷ್ಟೇ, ನಮ್ಮ ಕಳಕಳಿಗಳು ಇಲ್ಲಿಗೇ ಮುಗಿಯುವುದಿಲ್ಲ ಎಂದು ಹೇಳಿದರು.
ಆರೋಗ್ಯ ರಕ್ಷಣೆಯ ಹಣಕಾಸು, ಶಿಕ್ಷಣ ಮತ್ತು ಪೌಷ್ಟಿಕಾಂಶ, ನಮ್ಮ ಅತ್ಯಂತ ಬಡ ಕುಟುಂಬಗಳಿಗೆ ವಸತಿ, ಕರಾವಳಿ ಸವೆತ ಮತ್ತು ವಿಪತ್ತು ನಿರ್ವಹಣೆ, ಗಣಿಗಾರಿಕೆ ಮತ್ತು ಖನಿಜ ಹೊಂದಿರುವ ರಾಜ್ಯಗಳ ಹಣಕಾಸು ಹಕ್ಕುಗಳು, ಕೇಂದ್ರ ಸಂಸ್ಥೆಗಳಿಗೆ ರಾಜ್ಯಗಳು ನೀಡಿದ ಭೂಮಿ, ನ್ಯಾಯದಾನ ಮತ್ತು ಡಿಜಿಟಲ್ ಮೂಲಸೌಕರ್ಯ, ನಮ್ಮ ಹಳ್ಳಿಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇರ್ಪಡೆ ಹಾಗೂ ನಮ್ಮ ರೈತರಿಗೆ ಬೆಂಬಲ ಸೇರಿದಂತೆ ಹಲವು ಪ್ರಮುಖ ವಿಷಯಗಳು ನಮ್ಮ ಆದ್ಯತೆಗಳಾಗಿವೆ. ಇಂದಿನ ಕಾರ್ಯಸೂಚಿಯಲ್ಲಿ ಔಪಚಾರಿಕವಾಗಿ ಇಲ್ಲದಿರುವ, ಆದರೆ ಈ ಮಂಡಳಿಯ ಮುಂದೆ ನಾನು ಮಂಡಿಸಲು ಸಾಕಷ್ಟು ಅಗತ್ಯವೆಂದು ನಂಬುವ ಎರಡು ವಿಷಯಗಳು ಇವೆ.
ಮೊದಲನೆಯದು ನಮ್ಮ ಖನಿಜ ಸಂಪನ್ಮೂಲಗಳಿಗೆ ಸಂಬಂಧಿಸಿದ್ದು. ಇದು ಕರ್ನಾಟಕಕ್ಕೆ ಕೇವಲ ಕಂದಾಯದ ಪ್ರಶ್ನೆಯಲ್ಲ. ಇದು ಖನಿಜವನ್ನು ಹೊಂದಿರುವ ರಾಜ್ಯಗಳ ಹಣಕಾಸು ಹಕ್ಕುಗಳು ಮತ್ತು ಸ್ವಾಯತ್ತತೆಗೆ ಸಂಬಂಧಿಸಿದ ಸಂಗತಿ. ಆದ್ದರಿಂದ ರಾಜ್ಯಗಳ ಹಕ್ಕುಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಈ ವಿಷಯವನ್ನು ಮರುಪರಿಶೀಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಎರಡನೆಯದು ಮಾದಕ ದ್ರವ್ಯ ಕಳ್ಳಸಾಗಣೆಯ ಬೆಳೆಯುತ್ತಿರುವ ಸವಾಲು. ನಮ್ಮ ಗಡಿಗಳನ್ನು ಬಲಪಡಿಸಲು ಇಲ್ಲಿರುವ ನನ್ನ ಮಿತ್ರರಿಂದ ಹೆಚ್ಚಿನ ಸಹಕಾರವನ್ನು ನಾನು ಕೋರುತ್ತೇನೆ. ಕಾನೂನು ಚೌಕಟ್ಟನ್ನು ಬಲಪಡಿಸಲು ಹಾಗೂ ಈ ದಂಧೆಯಿಂದ ಲಾಭ ಪಡೆಯುವವರು ಶೀಘ್ರ ಮತ್ತು ಕಠಿಣ ಶಿಕ್ಷೆ ಅನುಭವಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಬೆಂಬಲ ನೀಡಬೇಕೆಂದು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇವು ಪ್ರತ್ಯೇಕ ಬೇಡಿಕೆಗಳಲ್ಲ. ಇವು ಒಕ್ಕೂಟ ವ್ಯವಸ್ಥೆ ನಮ್ಮ ಜನರ ಸುರಕ್ಷತೆಗೆ ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು ಎಂಬ ದೊಡ್ಡ ಪ್ರಶ್ನೆಗೆ ಉತ್ತರವಾಗಿದೆ. ಚರ್ಚೆಯ ಸಮಯದಲ್ಲಿ ಕರ್ನಾಟಕವು ಪ್ರತಿಪಾದಿಸುವ ದತ್ತಾಂಶ ಮತ್ತು ಪರಿಹಾರಗಳೊಂದಿಗೆ ಈ ಪ್ರತಿಯೊಂದು ನಿರ್ದಿಷ್ಟ ವಿಷಯಗಳನ್ನು ನಾನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ. ಮಿತ್ರರೇ, ನಾವು ಇಲ್ಲಿ ದೂರು ನೀಡಲು ಬಂದಿಲ್ಲ. ನಾವು ಭಾರತದ ಪ್ರಗತಿಯ ಪಾಲುದಾರರಾಗಿ ಬಂದಿದ್ದೇವೆ. ನಾವು ಕೇಳುವುದು ನ್ಯಾಯವನ್ನು ಮಾತ್ರ. ನಮ್ಮ ಅನುದಾನಗಳಲ್ಲಿ ನ್ಯಾಯ. ನಮ್ಮ ಧ್ವನಿಯಲ್ಲಿ ನ್ಯಾಯ ಮತ್ತು ಈ ಅರ್ಥವ್ಯವಸ್ಥೆಯನ್ನು ಮುನ್ನಡೆಸುವ ರಾಜ್ಯಗಳಿಗೆ ಸಿಗಬೇಕಾದ ಗೌರವದಲ್ಲಿ ನ್ಯಾಯ. ಕರ್ನಾಟಕ ಬಲವಾಗಿದ್ದರೆ ಮಾತ್ರ, ದಕ್ಷಿಣ ಭಾರತವು ಮತ್ತಷ್ಟು ಬಲಗೊಳ್ಳುತ್ತದೆ ಮತ್ತು ದಕ್ಷಿಣ ಭಾರತ ಬಲವಾಗಿದ್ದಾಗ, ಭಾರತವೇ ಮತ್ತಷ್ಟು ಬಲಗೊಳ್ಳುತ್ತದೆ. ಸದ್ಯಕ್ಕೆ, ನಾನು ನಿಮ್ಮ ಬಳಿ ಒಂದು ಸ್ಪಷ್ಟ ಸಂದೇಶವನ್ನು ಬಿಟ್ಟು ಹೋಗುತ್ತಿದ್ದೇನೆ. ನಮ್ಮೊಂದಿಗೆ ಹೆಜ್ಜೆ ಹಾಕಿ. ನಮಗೆ ನ್ಯಾಯಯುತವಾಗಿ ಅನುಸಾನ ನೀಡಿ. ಮತ್ತು ದಕ್ಷಿಣ ಭಾರತಕ್ಕೆ ಸಿಗಬೇಕಾದ ಹಕ್ಕನ್ನು ನೀಡಿ. ನಾವು ಭಾರತದ ಭವಿಷ್ಯ ರೂಪಿಸಲು ನಾವು ಶ್ರಮಿಸುತ್ತಲೇ ಇರುತ್ತೇವೆ ಎಂದು ತಿಳಿಸಿದರು.
