ಬೆಂಗಳೂರು: ಮಂಡ್ಯ (Mandya) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವ ಮುತ್ತತ್ತಿಯಲ್ಲಿರುವ (Muttatti) ಕಾವೇರಿ ನದಿಯಲ್ಲಿ (Cauvery River) ನಿರಂತರವಾಗಿ ಪ್ರವಾಸಿಗರು ನೀರಿನ ಸುಳಿಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುತ್ತತ್ತಿಯಲ್ಲಿ ಪೊಲೀಸ್ ಉಪಠಾಣೆ ತೆರೆಯುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಪತ್ರ ಬರೆದಿದ್ದಾರೆ.
ಮುತ್ತತ್ತಿಯ ಕಾವೇರಿ ನದಿ ಭಾಗದ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಮತ್ತು ನದಿಗೆ ಇಳಿಯದಂತೆ ತಡೆಯಲು ದಂಡೆಯ ಉದ್ದಕ್ಕೂ ಮುಳ್ಳಿನ ತಂತಿ-ಬ್ಯಾರಿಕೇಡ್‌ಗಳನ್ನು ಅಳವಡಿಸಲು ತುರ್ತುಕ್ರಮ ವಹಿಸಬೇಕು. ಗ್ರಾಮದಲ್ಲಿ ಪೊಲೀಸ್ ಉಪಠಾಣೆ ತೆರೆಯುವ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಭೈರಮಂಗಲಕ್ಕೆ ಬರ್ತಾರೆ – ಸಿಎಂ ಡಿಕೆಶಿ ಬಂದು ಚರ್ಚೆ ಮಾಡಲಿ: ನಿಖಿಲ್ ಸವಾಲ್
ನದಿಯಲ್ಲಿ ನಿಗೂಢವಾಗಿರುವ ಸುಳಿಗಳಿಗೆ ಸಿಲುಕಿ ಪ್ರವಾಸಿಗರು ಜೀವ ತೆರುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಐದು ತಿಂಗಳಲ್ಲಿ 11ಕ್ಕೂ ಹೆಚ್ಚು ಪ್ರವಾಸಿಗರು ಈಜಲು ಹೋಗಿ ದುರಂತ ಮರಣ ಹೊಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ 36ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಸಾವುಗಳಿಗೆ ತಡೆ ಹಾಕುವ ತುರ್ತು ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುತ್ತತ್ತಿ ಕ್ಷೇತ್ರವು ನಾಡಿನಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಭಕ್ತರು ನದಿಗೆ ಇಳಿದು ಪುಣ್ಯಸ್ನಾನ ಮಾಡುತ್ತಾರೆ. ಆದರೆ ಇಲ್ಲಿ ಎಚ್ಚರಿಕೆ ಫಲಕಗಳು, ರಕ್ಷಣಾ ಸಿಬ್ಬಂದಿ ಇಲ್ಲದ ಕಾರಣ ತಮಗೆ ಅರಿವಿಲ್ಲದೆಯೇ ಜನರು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ. ಇದು ಕಳವಳಕಾರಿ ಎಂದು ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮೂವರನ್ನು ಕೊಲೆ ಮಾಡಿದ್ದು ನಾವೇ – ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆರೋಪಿ ಜೋಡಿ
