ಬೆಂಗಳೂರು ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಉಗ್ರರಿಗೆ ಸಿಲಿಕಾನ್ ಸಿಟಿ ಸ್ಲೀಪರ್ ಸೇಲ್?

– ಮೂರು ತಿಂಗಳ ಅಂತರದಲ್ಲಿ ಮೂವರು ಅರೆಸ್ಟ್
– ಹಲವು ಬಾರಿ ಹೋಟೆಲ್ ಬಳಿ ಓಡಾಡಿದ್ದ ಶಂಕಿತ ಉಗ್ರ
ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ಮೂರು ತಿಂಗಳ ಅಂತರದಲ್ಲಿ ಮೂವರು ಉಗ್ರರನ್ನು ಸಿಲಿಕಾನ್ ಸಿಟಿಯಲ್ಲಿ ಬಂಧಿಸಿದ್ದು, ಉಗ್ರರಿಗೆ ಸಿಲಿಕಾನ್ ಸಿಟಿ ಸ್ಲೀಪರ್ ಸೇಲ್ ನೆಲೆಯಾಗುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಅಸ್ಸಾಂ ಮೂಲದ ಲಷ್ಕರ್ ಶಂಕಿತ ಉಗ್ರ ಅಖ್ತರ್ ಹುಸೇನ್‍ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿ ಕೋಣೆಯಲ್ಲಿ ಕೆಲ ಯುವಕರೊಂದಿಗೆ ವಾಸ್ತವ್ಯ ಹೂಡಿದ್ದ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.
10ನೇ ತರಗತಿ ಓದಿದ್ದ ಹುಸೇನ್ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನೆ ನೀಡುತ್ತಿದ್ದ. ಸೋಷಿಯಲ್ ಮೀಡಿಯಾ ಬಳಸಿಕೊಂಡು ಭಾರತದಲ್ಲಿ ಗಲಭೆ ಎಬ್ಬಿಸುವುದು, ಬೆಂಗಳೂರಿನಲ್ಲಿ ಶಾಂತಿ ಹದಗೆಡಿಸುವುದೇ ಇವನ ಕೆಲಸವಾಗಿತ್ತು. ಬೆಂಗಳೂರು ಮತ್ತು ಬೇರೆ ಬೇರೆ ಜಿಲ್ಲೆಯ ಮಾಹಿತಿಯನ್ನು ಬೇರೆ ಸಂಘಟನೆಯ ಜೊತೆ ಹಂಚಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೇ ಬೇರೆ ಸಂಘಟನೆಗಳ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದ ವಿಚಾರ ಈಗ ಮೂಲಗಳಿಂದ ತಿಳಿದು ಬಂದಿದೆ.
ಹುಸೇನ್ ಕಳೆದ ಒಂದು ತಿಂಗಳ ಹಿಂದೆ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದ ಉಗ್ರ ಫೈಜಲ್‍ನೊಂದಿಗೆ ನಂಟು ಹೊಂದಿದ್ದ. ಫೈಜಲ್ ಅಹಮದ್ ಮೋಸ್ಟ್ ವಾಟೆಂಡ್ ಟೆರರ್ ಆಗಿದ್ದ. ಬಾಂಗ್ಲಾದೇಶದ ಮೂಲದವನಾಗಿದ್ದ ಫೈಜಲ್‍ಗೆ ಲಷ್ಕರ್ ತೋಯ್ಬಾ ಸಂಘಟನೆ ಜೊತೆಗೆ ಸಂಪರ್ಕ ಇತ್ತು.
ಈ ಎಲ್ಲಾ ಮಾಹಿತಿಯ ಮೇರೆಗೆ 30ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ಹುಸೇನ್‍ನಿದ್ದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಘಟನೆ ಸಂಬಂಧಿಸಿ ರೂಂನಲ್ಲಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಖ್ತರ್ ಹುಸೇನ್ ಜೊತೆ ಇನ್ನುಳಿದ ಮೂವರು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು, ಚದುರಂಗದಾಟನೂ ಗೊತ್ತಿರಬೇಕು: ಬಿ.ವೈ.ವಿಜಯೇಂದ್ರ
ಸ್ಥಳೀಯರು ಮಾಹಿತಿ ನೀಡಿದ್ದು, ಕಳೆದ ಒಂದೂವರೆ ವರ್ಷಗಳಿಂದ ಹುಸೇನ್ ಇದೇ ರೂಮ್‍ನಲ್ಲಿ ಇದ್ದ. ಯಾವಾಗ ಬರ್ತಾರೆ, ಯಾವಾಗ ಹೋಗ್ತಾರೆ ಅಂತಾ ಗೊತ್ತಿರಲಿಲ್ಲ. ಐದಾರು ಜನ ರೂಮಿನಲ್ಲಿದ್ದರು. ರಾತ್ರಿ 8:30ಕ್ಕೆ ಪೊಲೀಸರು ಕರೆದುಕೊಂಡು ಹೋದರು. 6 ಗಂಟೆಗೆ ಬಂದು ಪೊಲೀಸರು ವಿಚಾರಣೆ ಮಾಡಿದರು. ಅವರೆಲ್ಲರೂ ಫುಡ್ ಡೆಲಿವರಿ ಬಾಯ್ ಆಗಿ ಮಾಡುತ್ತಿದ್ದರು. ನಮ್ಮ ಏರಿಯಾದಲ್ಲಿ ಯಾರಿಗೂ ಸಂಪರ್ಕದಲ್ಲಿ ಇರಲಿಲ್ಲ. ಪೊಲೀಸರು ಅರೆಸ್ಟ್ ಮಾಡಿದ ಮೇಲೆಯೇ ನಮಗೆ ಗೊತ್ತಾಗಿರೋದು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಪ್ರಮುಖ ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಶಂಕಿತ ಸಂಚು ರೂಪಿಸುತ್ತಿದ್ದ. ವಿಧಾನಸೌಧದ ಬಳಿ ಇರುವ ಅತಿ ಹೆಚ್ಚು ವಿಐಪಿಗಳ ಬಂದು ಹೋಗುವ ಹೋಟೆಲ್ ಟಾರ್ಗೆಟ್ ಮಾಡಿದ್ದ ಈತ ಹಲವು ಬಾರಿ ಆ ಹೋಟೆಲ್ ಬಳಿ ಬಂದು ಹೋಗಿದ್ದ. ಶಂಕಿತ ಉಗ್ರನ ಚಲನವಲನದ ಬಗ್ಗೆ ಸಿಸಿಟಿವಿ ಹಾಗೂ ಟೆಕ್ನಿಕಲ್ ಸಾಕ್ಷ್ಯವನ್ನು ಪೊಲೀಸರು ಈಗ ಸಂಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಸಾಬ್ರು ವೋಟ್ ಹಾಕಿದ್ರೆ ಮಾತ್ರ ಅಧಿಕಾರ ಹೆದರಿಸೋ ಕಾಲ ಹೋಗಿ ಬಹಳ ದಿನವಾಗಿದೆ ಜಮೀರ್ ಭಾಯ್: ಸಿ.ಟಿ ರವಿ
ಪಬ್ಲಿಕ್ ಟಿವಿಯೊಂದಿಗೆ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಮಾತನಾಡಿ, ಮೂಲಭೂತವಾದಿಯಾಗಿದ್ದ ಅಕ್ತರ್ ಹುಸೇನ್ ಉಗ್ರ ಸಂಘಟನೆಗಳಿಗೆ ಸೇರಬೇಕು. ಉಗ್ರ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದುವ ಬಗ್ಗೆ ಪ್ರಯತ್ನ ನಡೆಸಿದ್ದ.
ಅಲ್ ಖೈದಾ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಈತ ಕೆಲವೇ ತಿಂಗಳಲ್ಲಿ ದೊಡ್ಡ ಪ್ಲ್ಯಾನ್ ಮಾಡಿದ್ದ. ಈ ಬಗ್ಗೆ ತೆಲಂಗಾಣ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಂದ ಮಾಹಿತಿ ನೀಡಿತ್ತು. ಈ ಬಗ್ಗೆ ಕೂಡಲೇ ಎಚ್ಚೆತ್ತ ಆಯುಕ್ತರು ಸಿಸಿಬಿಗೆ ಆಯುಕ್ತರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಐಬಿ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತನನ್ನ ಬಂಧಿಸಲಾಗಿದೆ ಎಂದರು.