– ದೇಶಕ್ಕಾಗಿ ಆಡಲು ಯಾವಾಗ್ಲೂ ರೆಡಿ, ಸಮಯ ಬಂದಾಗ ಕರೆಯಿರಿ ಎಂದ ಸ್ಕೈ
ನವದೆಹಲಿ: ಭಾರತ ತಂಡವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ ಬಳಿಕವೇ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದ್ದ ವಿಚಾರದ ಕುರಿತು ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು (Team India) ಆಯ್ಕೆ ಮಾಡುವಾಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಹೊರಗಿಟ್ಟು, ಮುಂದಿನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿತ್ತು. ಕಳೆದ 2 ವರ್ಷಗಳಿಂದ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿ ಇರದಿರುವುದೇ ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎನ್ನಲಾಗಿತ್ತು.

2025ರಲ್ಲಿ ಭಾರತ ಪರ ಆಡಿದ ಯಾವುದೇ ಪಂದ್ಯದಲ್ಲೂ ಸೂರ್ಯಕುಮಾರ್ ಅರ್ಧಶತಕ ದಾಖಲಿಸಿರಲಿಲ್ಲ. ತವರಿನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅಮೆರಿಕ ತಂಡದ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಗಳಿಸಿದ ಪ್ರಮುಖ ಇನ್ನಿಂಗ್ಸ್ ಹೊರತುಪಡಿಸಿ ಅವರ ಬ್ಯಾಟಿಂಗ್ ಗಮನಾರ್ಹವಾಗಿರಲಿಲ್ಲ. ಆದರೆ, ನಾಯಕನಾಗಿ ಸೂರ್ಯಕುಮಾರ್ ಯಾವುದೇ ತಪ್ಪು ಮಾಡಿರಲಿಲ್ಲ. ಅವರ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಸರಣಿಯನ್ನೂ ಸೋಲದೇ, ಏಷ್ಯಾಕಪ್ ಜೊತೆಗೆ ತವರಿನಲ್ಲೇ ಟಿ20 ವಿಶ್ವಕಪ್‌ನ್ನೂ ಗೆದ್ದಿತ್ತು.
ತಂಡದಿಂದ ಕೈಬಿಟ್ಟಾಗ ಸೂರ್ಯನ ಪ್ರತಿಕ್ರಿಯೆ ಹೇಗಿತ್ತು?
ಈ ಬಗ್ಗೆ ಆಕಾಶ್ ಚೋಪ್ರಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಸೂರ್ಯ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ತಂಡದಿಂದ ಕೈಬಿಟ್ಟ ವಿಚಾರ ತಿಳಿದಾಗ ಆರಂಭದಲ್ಲಿ ತಾನು ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ. ಆಯ್ಕೆಗಾರರ ಸ್ಥಾನದಲ್ಲಿ ನಿಂತು ಅವರ ನಿರ್ಧಾರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ.

ತಂಡದಲ್ಲಿ ನನ್ನ ಹೆಸರು ಇಲ್ಲ ಎಂಬುದು ತಿಳಿದಾಗ ನಾನು ನಗುತ್ತಿದ್ದೆ. ಕಳೆದ ಒಂದು ಅಥವಾ ಎರಡು ವರ್ಷಗಳಿಂದ ತಂಡದೊಂದಿಗೆ ಆಡುತ್ತಿದ್ದಾಗ, ಒತ್ತಡದ ಸಂದರ್ಭಗಳು ಎದುರಾದಾಗ ಅಥವಾ ವಿಷಯಗಳು ನನ್ನ ಪರವಾಗಿ ನಡೆಯದಿದ್ದಾಗಲೂ ನಾನು ನಗುತ್ತಿದ್ದೆ, ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುತ್ತಿದ್ದೆ. ಹಿಂದೆ ನನಗೆ ಉತ್ತಮ ಪ್ರದರ್ಶನ ನೀಡುವ ಅವಕಾಶಗಳು ಸಿಕ್ಕಾಗ ಆ ಕ್ಷಣಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಆದ್ರೆ ಇಂತಹ ಪರಿಸ್ಥಿತಿ ಬರುತ್ತದೆ ಅಂತ ನಾನು ಎಂದಿಗೂ ಯೋಚಿಸಿರಲಿಲ್ಲ. 2026ಕ್ಕೆ ಬಂದ ನಂತರ ಮುಂದಿನ 2 ವರ್ಷಗಳ ಕಾಲ ತಂಡವನ್ನು ಮುನ್ನಡೆಸುತ್ತೇನೆ ಎಂದೇ ಭಾವಿಸಿದ್ದೆ. ಒಲಿಂಪಿಕ್ಸ್ ಬರಲಿದೆ, ನಂತರ ಮತ್ತೊಂದು ಟಿ20 ವಿಶ್ವಕಪ್ ಹಾಗೂ ಇನ್ನಷ್ಟು ಸವಾಲುಗಳು ಎದುರಾಗಲಿವೆ ಎಂದುಕೊಂಡಿದ್ದೆ. ಆದರೆ ನಾವೇನು ಯೋಚಿಸುತ್ತೇವೆ ಮತ್ತು ಇನ್ನೊಬ್ಬ ವ್ಯಕ್ತಿ ಏನು ಯೋಚಿಸುತ್ತಾರೆ ಎಂಬುದು ಎರಡು ವಿಭಿನ್ನ ವಿಚಾರಗಳು. ಅವರ ಆಲೋಚನೆಗಳನ್ನು ಗೌರವಿಸುವುದು ಮುಖ್ಯ. ಮುಂದಿನ ದಿನಗಳಲ್ಲಿ ಇದು ತಂಡಕ್ಕೆ ಉತ್ತಮ ನಿರ್ಧಾರ ಎಂದು ಅವರು ಭಾವಿಸಿದ್ದೆ, ಅವರು ಆ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ಅದು ಅವರ ನಿರ್ಧಾರವಾಗಿತ್ತು. ಆ ಸಮಯದಲ್ಲಿ ತಂಡಕ್ಕೆ ಇದೇ ಉತ್ತಮ ಎಂದು ಅವರು ಭಾವಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ನಾಯಕತ್ವದಲ್ಲಿ ತಂಡ ಉತ್ತಮವಾಗಿ ಆಡಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಭಾವುಕರಾಗಿದ್ದಾರೆ.

ಇದು ಹೇಗೆ ಸಾಧ್ಯ? ಎಂದು ಯೋಚಿಸುತ್ತಿದ್ದೆ
ಕೆಲ ಸಮಯದ ಬಳಿಕ ಆಯ್ಕೆ ಸಮಿತಿಯ ನಿರ್ಧಾರವನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಅವರು ಆಯ್ಕೆ ಮಾಡಿರುವ ತಂಡವನ್ನು ನಾನು ನೋಡಿದ್ದೇನೆ. ಶ್ರೇಯಸ್ ಜೊತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಆತ ಉತ್ತಮ ಆಟಗಾರ, ಒಳ್ಳೆಯ ವ್ಯಕ್ತಿ ಮತ್ತು ಉತ್ತಮ ನಾಯಕ ಕೂಡ ಹೌದು. ಹಾಗಾಗಿ, ‘ಅವನನ್ನೇ ನಾಯಕನನ್ನಾಗಿ ಏಕೆ ಮಾಡಿದರು?’ ಎಂದು ನಾನು ಪ್ರಶ್ನಿಸಲಿಲ್ಲ. ಆದರೆ ನನಗೆ ಸ್ವಲ್ಪ ಬೇಸರವಾಗಿತ್ತು. ಏಕೆಂದರೆ 2 ವರ್ಷಗಳಲ್ಲಿ ನೀವು ಒಂದೇ ಒಂದು ಸರಣಿಯನ್ನೂ ಸೋತಿಲ್ಲ. ವಿಶ್ವಕಪ್ ಗೆದ್ದಿದ್ದೀರಿ, ಏಷ್ಯಾ ಕಪ್ ಗೆದ್ದಿದ್ದೀರಿ. ಹೀಗಿರುವಾಗ ಇದೇ ರೀತಿಯ ಯಶಸ್ಸು ಮುಂದುವರಿಯಬೇಕು ಎಂದು ಬಯಸುತ್ತೀರಿ. ಎಲ್ಲವೂ ಉತ್ತಮವಾಗಿ ನಡೆಯುತ್ತಿರುವಾಗ ಬದಲಾವಣೆ ಏಕೆ? ಬದಲಾವಣೆಗೆ ಕಾರಣವೇನು? ಇದೇ ಪ್ರಶ್ನೆ ನನ್ನ ಮನಸ್ಸಿನಲ್ಲಿ ಓಡಾಡುತ್ತಿತ್ತು. ನಾನು ಸುಮಾರು ಒಂದೂವರೆ ತಿಂಗಳು ಮನೆಯಲ್ಲೇ ಕುಳಿತು ಯೋಚಿಸುತ್ತಿದ್ದೆ. ‘ಇದು ಹೇಗೆ ಆಗಬಹುದು? ಇದು ಹೇಗೆ ಸಾಧ್ಯ?’ ಎಂದು ಯೋಚಿಸುತ್ತಿದ್ದೆ ಎಂದು ಹಳೆಯ ದುಃಖದ ಕ್ಷಣಗಳನ್ನ ನೆನಪಿಸಿಕೊಂಡಿದ್ದಾರೆ.
ಆಯ್ಕೆಗಾರರು ಮೂರು ದಿನ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು
ತಮ್ಮನ್ನು ತಂಡದಿಂದ ಕೈಬಿಡುವ ನಿರ್ಧಾರದ ಬಗ್ಗೆ ಆಯ್ಕೆ ಸಮಿತಿ ತಂಡದ ಘೋಷಣೆಗೆ ಎರಡು-ಮೂರು ದಿನಗಳ ಮುನ್ನವೇ ಕರೆ ಮಾಡಿ ಮಾಹಿತಿ ನೀಡಿತ್ತು ಎಂದು ಕೂಡ ಹೇಳಿದ್ದಾರೆ.

ದೇಶಕ್ಕಾಗಿ ಆಡಲು ಯಾವಾಗ್ಲೂ ರೆಡಿ
ಮತ್ತೆ ಭಾರತ ತಂಡಕ್ಕೆ ಮರಳಲು ತಾನು ಸಂಪೂರ್ಣ ಸಿದ್ಧನಿದ್ದೇನೆ ಎಂಬ ಸಂದೇಶವನ್ನೂ ಸೂರ್ಯಕುಮಾರ್ ನೀಡಿದ್ದಾರೆ.
ನಾನು ಸಿದ್ಧನಿದ್ದೇನೆ. ನೀವು ಯಾವಾಗ ಬೇಕಾದರೂ ನನಗೆ ಕರೆ ಮಾಡಬಹುದು. ನಾನು ಯಾವಾಗ ಬೇಕಾದರೂ ಕ್ರಿಕೆಟ್ ಆಡಲು ಸಿದ್ಧನಿದ್ದೇನೆ. ನಾನು ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇನೆ. ಸಮಯ ಸರಿಯಾಗಿದೆ ಎಂದು ನಿಮಗೆ ಅನಿಸಿದಾಗ, ಪರಿಸ್ಥಿತಿಗಳು ಸರಿಯಾಗಿವೆ ಎಂದು ಭಾವಿಸಿದಾಗ ನನ್ನನ್ನು ಕರೆ ಮಾಡಿ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
