ನವದೆಹಲಿ: ಅಸ್ಸಾಂ ಸಿಎಂ ಪತ್ನಿ ರಿಂಕಿ ಭುಯಾನ್ ಶರ್ಮಾ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ (Congress) ನಾಯಕ ಪವನ್ ಖೇರಾಗೆ (Pawan Khera) ಸುಪ್ರೀಂಕೋರ್ಟ್ (Supreme Court) ಶಾಕ್ ಕೊಟ್ಟಿದೆ. ತೆಲಂಗಾಣ ಹೈಕೋರ್ಟ್ ಏ.10 ರಂದು ನೀಡಿದ್ದ ವಾರದ ಮಟ್ಟಿಗಿನ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.
ಅಸ್ಸಾಂ ಪೊಲೀಸರು ದಾಖಲಿಸಿರುವ ಮಾನನಷ್ಟ, ನಕಲಿ ದಾಖಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರ ಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಅಸ್ಸಾಂ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪವನ್ ಖೇರಾ ಅವರು ನಕಲಿ ದಾಖಲೆಗಳನ್ನು ನೀಡಿ ತೆಲಂಗಾಣ ಹೈಕೋರ್ಟ್‍ನ ನ್ಯಾಯವ್ಯಾಪ್ತಿಯನ್ನು ದುರುಪಯೋಗ ಮಾಡಿಕೊಂಡು ಜಾಮೀನು ಪಡೆದಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ | ತೀರ್ಪು ನಮ್ಮ ಪರ ಬರದಿದ್ರೆ ಹೋರಾಟ ಮುಂದುವರಿಯಲಿದೆ: ಬಸವರಾಜ್ ಕೊರವರ್
ಪವನ್ ಖೇರಾ ಅವರು ತಮ್ಮ ಪತ್ನಿಯ ಆಧಾರ್ ಕಾರ್ಡ್ ಬಳಸಿಕೊಂಡು ತೆಲಂಗಾಣದಲ್ಲಿ ವಾಸಿಸುತ್ತಿರುವಂತೆ ತೋರಿಸಿದ್ದಾರೆ. ಆದರೆ ಅದೇ ದಾಖಲೆಗಳಲ್ಲಿ ಅವರ ಪತ್ನಿ ದೆಹಲಿಯಲ್ಲಿ ವಾಸಿಸುತ್ತಿರುವುದು ಕಂಡು ಬರುತ್ತದೆ ಎಂದು ತಿಳಿಸಿದರು. ಒಬ್ಬ ವ್ಯಕ್ತಿ ಬೇರೆ ಬೇರೆ ರಾಜ್ಯಗಳಲ್ಲಿ ಆಸ್ತಿ ಹೊಂದಿರುವುದರಿಂದ, ತಾನು ಇಚ್ಛಿಸಿದ ನ್ಯಾಯವ್ಯಾಪ್ತಿಯಲ್ಲಿ ಜಾಮೀನು ಪಡೆಯಲು ಅವಕಾಶ ಸಿಗುವುದಿಲ್ಲ. ಇದು ಕಾನೂನಿನ ದುರುಪಯೋಗ ಎಂದು ತುಷಾರ್ ಮೆಹ್ತಾ ಹೇಳಿದರು.
ಆಧಾರ್ ಕಾರ್ಡ್‍ನ ಮುಂಭಾಗದಲ್ಲಿ ಖೇರಾ ಹೆಸರು ಇದ್ದರೂ, ಹಿಂಭಾಗದಲ್ಲಿ ಅವರ ಪತ್ನಿಯ ವಿಳಾಸ ಉಲ್ಲೇಖವಾಗಿದೆ. ಹೀಗಾಗಿ ನಕಲಿ ದಾಖಲೆ ಬಳಸಿ ತೆಲಂಗಾಣ ಹೈಕೋರ್ಟ್ ನ್ಯಾಯವ್ಯಾಪ್ತಿಯ ಲಾಭ ಪಡೆದಿರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ, ತೆಲಂಗಾಣ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ. ಜೊತೆಗೆ, ಪವನ್ ಖೇರಾ ಅವರು ಅಸ್ಸಾಂ ನ್ಯಾಯವ್ಯಾಪ್ತಿಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಮೂರು ವಾರಗಳಲ್ಲಿ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿದೆ.
ಏನಿದು ಪ್ರಕರಣ?
ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಪವನ್ ಖೇರಾ, ಅಸ್ಸಾಂ ಸಿಎಂ ಪತ್ನಿ ರಿಂಕಿ ಭುಯಾನ್ ಶರ್ಮಾ ವಿರುದ್ಧ ‘ಮುಸ್ಲಿಂ ರಾಷ್ಟ್ರಗಳ ಪಾಸ್‌ಪೋರ್ಟ್’ ಯಾಕೆ ಬೇಕು ಎನ್ನುವ ರೀತಿ ವಿವಾದಾತ್ಮಕ ಆರೋಪಗಳನ್ನು ಮಾಡಿದ್ದರು. ‘ರಿಂಕಿ ಅವರು ಮೂರು ದೇಶಗಳ ಪಾಸ್‌ಪೋರ್ಟ್ ಹೊಂದಿದ್ದಾರೆ, ದುಬೈನಲ್ಲಿ ಅಘೋಷಿತ ಆಸ್ತಿ ಹಾಗೂ ಅಮೆರಿಕದಲ್ಲಿ ಶೆಲ್ ಕಂಪನಿಗಳನ್ನು ಹೊಂದಿದ್ದಾರೆ’ ಎಂದು ಖೇರಾ ದೂರಿದ್ದರು. ಈ ಆರೋಪಗಳು ದುರುದ್ದೇಶಪೂರಿತ ಎಂದು ರಿಂಕಿ ಭುಯಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ | ಮಧ್ಯಾಹ್ನ 3 ಗಂಟೆಗೆ ತೀರ್ಪು – ಆರೋಪಿಗಳ ಎದೆಯಲ್ಲಿ ಢವಢವ

