– ಆನ್ಲೈನ್ನಲ್ಲಿ ಪಟಾಕಿ ಖರೀದಿಗೂ ನಿರ್ಬಂಧ
ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಗೆ (Deepavali) ಕೌಂಟ್ಡೌನ್ ಶುರುವಾಗಿದೆ. ದಿಪಾವಳಿ ಅಂದಾಕ್ಷಣ ನೆನಪಾಗೋದು ಪಟಾಕಿಗಳು. ಅಂದು ದೇಶಾದ್ಯಂತ ಜನ ಪಟಾಕಿ ಸಿಡಿಸಿ, ದೀಪ ಬೆಳಗಿಸಿ ಸಂಭ್ರಮಿಸುತ್ತಾರೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಉಂಟಾಗುವ ಆತಂಕದಿಂದ ನಿಗದಿತ ಸಮಯದಲ್ಲಷ್ಟೇ ಪಟಾಕಿ ಬಳಸಲು ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿದೆ.
ದೀಪಾವಳಿ ಆಚರಣೆಗಾಗಿ ನವೆಂಬರ್ 7 ಮತ್ತು 8 ರಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಪಟಾಕಿ (ಪರಿಸರ ಸ್ನೇಹಿ ಪಟಾಕಿ – Green Firecrackers) ಮಾತ್ರ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪ್ರಸನ್ನ ಬಿ. ವರಾಲೆ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದೆ. ಆದಾಗ್ಯೂ ಈ ವಿನಾಯ್ತಿಯು ನಿರ್ದಿಷ್ಟ ಅವಧಿಗೆ ಮಾತ್ರ ಅನ್ವಯಿಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಹೌದು. ನವೆಂಬರ್ 7 ಮತ್ತು 8 ರಂದು 2 ದಿನಗಳಲ್ಲಿ ಬೆಳಗ್ಗೆ 6 ರಿಂದ 7 ಗಂಟೆವರೆಗೆ ಮತ್ತು ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ನವೆಂಬರ್ 9 ರಿಂದ, ಹಸಿರು ಪಟಾಕಿ ಮೇಲಿನ ಸಂಪೂರ್ಣ ನಿಷೇಧವು ಮತ್ತೆ ಜಾರಿಗೆ ಬರಲಿದೆ ಎಂದು ಕೋರ್ಟ್ ತಿಳಿಸಿದೆ.
ದೆಹಲಿ-ಎನ್ಸಿಆರ್ನಲ್ಲಿ ಮಾಲಿನ್ಯವನ್ನು ತಡೆಯಲು ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದು ಮಾತ್ರ ಪರಿಣಾಮಕಾರಿ ಪರಿಹಾರವಲ್ಲ. ಸಂಪೂರ್ಣ ನಿಷೇಧವಿದ್ದರೂ, ರಾಜಧಾನಿಯಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಎಲ್ಲಿ ಪಟಾಕಿ ಸಿಡಿಸಲು ಅನುಮತಿ ಇಲ್ಲ?
ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ನಿಗದಿತ ‘ಶಾಂತ ವಲಯ’ಗಳ (silence zones) 300 ಮೀಟರ್ ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಸಿಡಿಸುವುದನ್ನೂ ನಿಷೇಧಿಸಲಾಗಿದೆ. ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳ ಸಮೀಪದಲ್ಲೂ ಈ ನಿರ್ಬಂಧಗಳು ಮುಂದುವರಿಯುತ್ತವೆ. ಈ ಪ್ರದೇಶಗಳನ್ನ ‘ಪಟಾಕಿ ರಹಿತ ವಲಯಗಳು’ ಎಂದು ಗುರುತಿಸಿರುವುದಾಗಿ ಕೋರ್ಟ್ ಹೇಳಿದೆ.
ಆನ್ಲೈನ್ ಮಾರಾಟಕ್ಕೆ ಅವಕಾಶ ಇಲ್ಲ
ಇನ್ನು ದಿಲ್ಲಿಯಲ್ಲಿ ಹಸಿರು ಪಟಾಕಿಯನ್ನು ಕೇವಲ ನಿಗದಿಪಡಿಸಿದ ಅಂಗಡಿಗಳಲ್ಲಿ ಮಾತ್ರವೇ ಮಾರಾಟ ಮಾಡಲು ಅವಕಾಶ ಇರಲಿದೆ. ಆನ್ಲೈನ್ ಮಾರಾಟಕ್ಕೆ ಅವಕಾಶ ಇಲ್ಲ. ಈ ಸಂಬಂಧ ಕೂಡ ಕ್ರಮ ವಹಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.

