– ಪ್ರಶ್ನೆಪತ್ರಿಕೆಗೆ 4 ಸಾವಿರ ರೂ. ಫಿಕ್ಸ್ ಮಾಡಿದ್ದ ಆರೋಪಿ
– ಪೇಪರ್ ಮಾಫಿಯಾ ಹೆಸರಿನಲ್ಲಿ ಟೆಲಿಗ್ರಾಂ ಚಾನೆಲ್
ಜೈಪುರ: ವಿಪಿಎನ್ (VPN) ಬಳಸಿ ಟೆಲಿಗ್ರಾಂನಲ್ಲಿ ನೀಟ್ ಮರುಪರೀಕ್ಷೆಯ (Neet Re-exam) ನಕಲಿ ಪ್ರಶ್ನೆಪತ್ರಿಕೆ ಹಂಚುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನು ರಾಜಸ್ಥಾನದಲ್ಲಿ (Rajasthan) ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು 19 ವರ್ಷದ ಆಕಾಶ್ ಎಂದು ಗುರುತಿಸಲಾಗಿದೆ. ಅಮೆರಿಕ ಮೂಲದ ವಿಪಿಎನ್ ಹಾಗೂ ಪ್ರಾಕ್ಸಿ ನೆಟ್‌ವರ್ಕ್ ಬಳಸಿ ಟೆಲಿಗ್ರಾಂನಲ್ಲಿ ಒಂದು ಪ್ರಶ್ನೆಪತ್ರಿಕೆಗೆ 4 ಸಾವಿರ ರೂ.ಯಂತೆ ಹಂಚುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನೀಟ್‌ಗಾಗಿ ಟೆಲಿಗ್ರಾಂ ನಿಷೇಧ – ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
ಆರೋಪಿ ಟೆಲಿಗ್ರಾಂನಲ್ಲಿ `ಪೇಪರ್ ಮಾಫಿಯಾ’ ಹೆಸರಿನಲ್ಲಿ ಚಾನೆಲ್ ತೆರೆದು, ಇದರ ಮೂಲಕ ನೀಟ್ ಮರುಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ. ಈ ಕುರಿತು ತಿಳಿಯುತ್ತಿದ್ದಂತೆ ದೆಹಲಿಯಿಂದ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಕೂಡಲೇ ಭಿಲ್ವಾರಾ ಪೊಲೀಸರು ಶುಕ್ರವಾರ ಮುಂಜಾನೆ (ಜೂ.19) ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಈ ಚಾನೆಲ್‌ನಲ್ಲಿ ಒಟ್ಟು 52 ಸದಸ್ಯರಿದ್ದು, QR ಕೋಡ್ ಮೂಲಕ ಪ್ರತಿ ಪ್ರಶ್ನೆಪತ್ರಿಕೆಗೆ 4 ಸಾವಿರ ರೂ. ಪಡೆದಿದ್ದಾನೆ. ಆರೋಪಿ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ನೀಟ್‌ಗೆ ಪರೀಕ್ಷೆಗೆ ತಯಾರಿ ನಡೆಸುವ ಪುಸ್ತಕಗಳಿಂದ ಫೋಟೋ ಹೊಡೆದು ಅವುಗಳನ್ನೇ ನಿಜವಾದ ಪ್ರಶ್ನೆಪತ್ರಿಕೆ ಎಂದು ಹಂಚಿದ್ದಾನೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ನೀಟ್ ಪರೀಕ್ಷೆಗಾಗಿ ಪೋಕ್ಸೋ ಆರೋಪಿಗೆ ನಾಲ್ಕು ದಿನ ಬೇಲ್
ಆರೋಪಿಯನ್ನು ಬಂಧಿಸುವಾಗ ಪೊಲೀಸರು ಆತನ ಮೊಬೈಲ್ ಫೋನ್, ನೀಟ್ ಅಧ್ಯಯನ ಸಾಮಗ್ರಿ ಹಾಗೂ ಇನ್ನಿತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ವಂಚನೆ, ನಕಲಿ ಪ್ರಶ್ನೆಪತ್ರಿಕೆಗಳ ಮಾರಾಟ, ಐಟಿ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ತನಿಖಾಧಿಕಾರಿಗಳು, ಆರೋಪಿ ಇದೇ ರೀತಿ ಎಷ್ಟು ಜನರಿಗೆ ವಂಚಿಸಿದ್ದಾನೆ, ಇದರ ಹಿಂದೆ ಎಷ್ಟು ಜನರ ಕೈವಾಡವಿದೆ ಹಾಗೂ ಬ್ಯಾಂಕ್ ವಹಿವಾಟನ್ನು ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ನೀಟ್ ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ಆಪ್‌ನ್ನು ತಾತಾಲ್ಕಿಕವಾಗಿ ನಿಷೇಧಿಸಿದ್ದು, ಜೂ.22ರವರೆಗೆ ಜಾರಿಯಲ್ಲಿರಲಿದೆ. ಇದಕ್ಕೂ ಮುನ್ನ ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದಾಗಿದ್ದರಿಂದ ಟೆಲಿಗ್ರಾಂನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.ಇದನ್ನೂ ಓದಿ: ನೀಟ್ ಮರುಪರೀಕ್ಷೆಗೂ ಮುನ್ನ ಡೆತ್‌ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ
