ತುಮಕೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ (S R Srinivas), ನನಗೆ ಸಚಿವ ಸ್ಥಾನ ಸಿಗುವುದೇ ಇಲ್ಲ ಎಂದು ಮನೆಯಲ್ಲೇ ಕುಳಿತಿದ್ದೆ. ಆಗ ಸ್ವತಃ ಕುಮಾರಸ್ವಾಮಿ ಅವರು ಕರೆ ಮಾಡಿ ಸಚಿವ ಸ್ಥಾನ ಕೊಟ್ಟಿದ್ದರು ಎಂದು ಹೇಳುವ ಮೂಲಕ ಹೆಚ್‌ಡಿಕೆ (H D Kumaraswamy) ಪರ ಬ್ಯಾಟ್ ಬೀಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವೇಗೌಡರು ಕುಂಚಿಟಿಗರ ಕೋಟಾದಲ್ಲಿ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡಲು ಯೋಚಿಸಿದ್ದರು. ಆದರೆ, ಕುಮಾರಸ್ವಾಮಿ ತಮ್ಮನ್ನು ಕರೆದು ಸಚಿವರನ್ನಾಗಿ ಮಾಡಿದ್ದರು ಎಂದು ಶ್ರೀನಿವಾಸ್ ನೆನಪಿಸಿಕೊಂಡರು.
ಇದೇ ವೇಳೆ ತಮ್ಮ ಮತ್ತು ಕುಮಾರಸ್ವಾಮಿ ನಡುವೆ ಒಂದೇ ಒಂದು ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯ ಆಗಿತ್ತು. ಅದನ್ನು ಬಿಟ್ಟರೆ ಬೇರೆ ಯಾವುದೇ ವೈಮನಸ್ಸಿಲ್ಲ ಎಂದು ಹೇಳಿದರು.ಇದನ್ನೂ ಓದಿ: ಹಲವು ದಿನಗಳ ವಿರಾಮದ ಬಳಿಕ ಕಮ್‌ಬ್ಯಾಕ್ ಆದ ವಿಕ್ರಂ ರವಿಚಂದ್ರನ್
ಇನ್ನು ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆ. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಕರೆ ಮಾಡಿ ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಸಿಎಂ ನಾಲ್ಕೈದು ಬಾರಿ ಕರೆ ಮಾಡಿದರು. ನಂತರ ಮಾತನಾಡಿದಾಗ, ಸಾಮೂಹಿಕವಾಗಿ ಎಲ್ಲಾ ನಿಗಮ ಮಂಡಳಿಗಳ ಅಧ್ಯಕ್ಷರ ರಾಜೀನಾಮೆ ಪಡೆಯುತ್ತೇವೆ ಎಂದು ಹೇಳಿದರು. ಆದ್ದರಿಂದ ನಾನು ರಾಜೀನಾಮೆ ನೀಡಿಲ್ಲ”ಎಂದರು. ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಮಾಗಡಿ ಬಾಲಕೃಷ್ಣ ಕೂಡ ಕರೆ ಮಾಡಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು ಎಂದು ಹೇಳಿದರು.
ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, 33 ಶೇಕಡಾ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ನಾವು, ಮಹಿಳೆಯರಿಗೆ ಸಚಿವ ಸ್ಥಾನ ಕೊಡದೇ ಇದ್ದರೆ ಹೇಗೆ? ಇನ್ನೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಅವರ ಬಳಿ ಇರುವ ಒಂದು ಖಾತೆಯನ್ನು ಮಹಿಳೆಯರಿಗೆ ನೀಡಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ರಾಘವೇಂದ್ರ ಹಿಟ್ನಾಳ್‌ಗೆ ಕೈತಪ್ಪಿದ ಮಂತ್ರಿಗಿರಿ – ಕೊಪ್ಪಳ ಕಾಂಗ್ರೆಸ್ ಅಧ್ಯಕ್ಷೆ ರಾಜೀನಾಮೆ
ಎಸ್.ಆರ್. ಶ್ರೀನಿವಾಸ್ ಅವರ ಈ ಹೇಳಿಕೆಗಳ ಬಳಿಕ, ಮತ್ತೆ ಜೆಡಿಎಸ್ ಕಡೆ ಮುಖ ಮಾಡುತ್ತಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಆದರೆ ಇದಕ್ಕೆ ಅವರು ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
