ಮಲೆನಾಡಿಗರಿಗೆ (Malendu) ಹಾಗೂ ಪ್ರಕೃತಿಗೆ ಅವಿನಾಭಾವ ಸಂಬಂಧ. ಪ್ರಕೃತಿಯನ್ನು ಜೀವನದ ಭಾಗವಾಗಿ, ದೇವರ ರೂಪದಲ್ಲಿ ಮಲೆನಾಡಿಗರು ಕಾಣುತ್ತಾರೆ. ಅದಕ್ಕೆ ಅವರ ದೇವರು ಬನಗಳಲ್ಲಿ ಮರಗಳ ಕೆಳಗೆ ನೆಲೆಸಿರುವುದೇ ಸಾಕ್ಷಿ. ಅದರಂತೆ ಮಳೆಗೂ ಸಹ ಅವರು ವಿಶೇಷ ಸ್ಥಾನ ನೀಡಿ, ಆರಾಧಿಸುತ್ತಾರೆ. ಮಳೆಯ ಆರಾಧನೆ ಹಾಗೂ ಮಳೆಗಾಗಿ ಪ್ರಾರ್ಥಿಸುವ ವಿಶೇಷ ಹಬ್ಬವೇ ಆದ್ರೆ ಮಳೆ (ಅರಿದ್ರಾ ಮಳೆ) ( Aridra Male Habba) ಹಬ್ಬ.
ಆರಿದ್ರಾ ಮಳೆ ಬೀಳದಿದ್ದರೆ ದಾರಿದ್ರ್ಯಾ
ಮಲೆನಾಡಿನ ರೈತ ಕುಟುಂಬಗಳೇ ಜಾಸ್ತಿ ಇರುವ ಗ್ರಾಮಗಳಲ್ಲಿ ನೂರಾರು ಜನರು ಸೇರಿಕೊಂಡು ಜಾತ್ಯತೀತವಾಗಿ ಪ್ರತಿವರ್ಷ ಆರಿದ್ರಾ ನಕ್ಷತ್ರದ ದಿನ ಪ್ರಕೃತಿ ಹಾಗೂ ವರುಣ ದೇವನಿಗೆ ಪೂಜೆ ಸಲ್ಲಿಸುತ್ತಾರೆ. ಅನಾದಿ ಕಾಲದಿಂದಲೂ ಈ ಆಚರಣೆ ನಡೆದು ಬಂದಿದೆ. ವಿಶೇಷವಾಗಿ ಸಾಗರ, ಸೊರಬ, ಸಿರಸಿ ಭಾಗಗಳಲ್ಲಿ ಈ ಆಚರಣೆ ಇದೆ. ʻಆರಿದ್ರಾ ಮಳೆ ಹುಯ್ಯದಿದ್ದರೆ ದಾರಿದ್ರ್ಯಾ ಖಚಿತ’ ಎಂಬ ಗಾದೆ ಮಾತು ಈ ಮಳೆಯ ಮಹತ್ವವನ್ನು ತಿಳಿಸುತ್ತದೆ. ಅಂದರೆ ಆರಿದ್ರಾ ಮಳೆ ಕೃಷಿ ಚಟುವಟಿಕೆಗೆ ಅಷ್ಟು ಮುಖ್ಯ. ಅದೇ ಕಾರಣಕ್ಕೆ ರೈತರು ಈ ಮಳೆಗಾಗಿ ದೇವರನ್ನು ವಿಶೇಷವಾಗಿ ಪ್ರಾರ್ಥಿಸುತ್ತಾರೆ.
ಗ್ರಾಮದೇವರಿಗೆ ವಿಶೇಷ ಪೂಜೆಈ ಹಬ್ಬದಂದು ಉತ್ತಮ ಮಳೆಯಿಂದ ಒಳ್ಳೆಯ ಬೆಳೆ ಬಂದು ನಾಡಿನ ಸಕಲ ಸಂಕಷ್ಟ ನಿವಾರಣೆಯಾಗಲಿ ಎಂದು ಗ್ರಾಮದ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ದೀವರ (ಜನಾಂಗ) ಆರಾಧ್ಯ ದೈವವಾದ ಕುಮಾರರಾಮನನ್ನು ನೆನೆಯುವ ಆರಿದ್ರಾ ಮಳೆ ಹಬ್ಬದ ಪೂರ್ವದಲ್ಲಿ ಬೀರನ ಹಬ್ಬವನ್ನು ಆಚರಿಸಲಾಗುತ್ತದೆ. ಆ ಸಂದರ್ಭದಲ್ಲಿ ಸುರಿಯುವ ಮಳೆ ನೀರನ್ನು ಹಿಡಿದಿಟ್ಟು ಹಬ್ಬದ ವೇಳೆ ದೇವರ ವಿಗ್ರಹಕ್ಕೆ ಅಭಿಷೇಕ ಮಾಡುವ ಸಂಪ್ರದಾಯ ಸಹ ಇದೆ.
ಈ ಹಬ್ಬಕ್ಕೆ ದುಡಿಮೆಗಾಗಿ ಬೇರೆ ಊರಿಗೆ ತೆರಳಿದ್ದವರು, ಮದುವೆಯಾಗಿ ಗಂಡನ ಮನೆಗೆ ಹೋದ ಮಹಿಳೆಯರು ಮರಳಿ ಸ್ವ ಗ್ರಾಮಕ್ಕೆ ಬಂದು ಸಂಭ್ರಮದಲ್ಲಿ ಭಾಗಿಯಾಗಿತ್ತಾರೆ.
ಆಚರಣೆಯ ಪ್ರಮುಖ ವಿಶೇಷತೆಗಳು
ಪ್ರಕೃತಿ ಆರಾಧನೆ: ನೂರಾರು ವರ್ಷ ಹಳೆಯದಾದ ಮರಗಳಿಗೆ, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ.
ದೇವರ ಪೂಜೆ: ಸ್ಥಳೀಯ ದೇವತೆಗಳಾದ ಬೀರೇಶ್ವರ ಅಥವಾ ಕುಮಾರರಾಮನನ್ನು ನೆನೆದು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ಸಮುದಾಯದ ಒಗ್ಗಟ್ಟು: ಇದು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಊರವರೆಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಹಬ್ಬವಾಗಿದೆ.
ಹಬ್ಬಕ್ಕೆ ಭಾರೀ ಖರ್ಚು – ಕೆಲವೆಡೆ ಕಡಿವಾಣ
ಹಬ್ಬದಲ್ಲಿ ಅಕ್ಕಿ ಕಡುಬು, ಕೋಳಿ, ಕುರಿ, ಮೀನು, ಮೊಟ್ಟೆಯ ವಿಶೇಷ ಖಾದ್ಯ ತಯಾರಿಸಿ ನೆಂಟರಿಷ್ಟರಿಗೆ ಬಡಿಸಲಾಗುತ್ತದೆ. ಕೆಲವೆಡೆ ಮದ್ಯವನ್ನು ಸಹ ಬಂದ ಜನಕ್ಕೆ ಹಂಚಲಾಗುತ್ತದೆ. ಇಂದಿನ ದಿನಮಾನಕ್ಕೆ ಸಾವಿರಾರು ರೂಪಾಯಿ ಈ ಹಬ್ಬಕ್ಕೆ ಖರ್ಚಾಗುತ್ತದೆ. ಇನ್ನೂ ಕೆಲವು ಗ್ರಾಮಗಳಲ್ಲಿ ದುಂದು ವೆಚ್ಚಗಳನ್ನು ಕೈಬಿಟ್ಟು ಸರಳವಾಗಿ ಸಹ ಹಬ್ಬವನ್ನು ಆಚರಿಸುವ ರೂಢಿಯನ್ನು ಇತ್ತೀಚೆಗೆ ಮಾಡಿಕೊಂಡಿದ್ದಾರೆ. ಈ ಮೂಲಕ ಅನಾವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ. ಇದರಿಂದ ಬರುವ ನೆಂಟರ ಸಂಖ್ಯೆಯೂ ಇಳಿಕೆಯಾಗುತ್ತಿದೆ!
ಕೆರೆ ಮಾರಿ ಹಬ್ಬ ಹೆಸರಲ್ಲೂ ಆಚರಣೆ
ಮಲೆನಾಡು ಭಾಗದಲ್ಲಿ ಮೃಗಶಿರಾ ಹಾಗೂ ಆರಿದ್ರಾ ಮಳೆಗಳ ವೇಳೆಯಲ್ಲಿ ಕೆರೆಕಟ್ಟೆಗಳು ತುಂಬುವುದು ಪರಿಪಾಠ. ತಮ್ಮ ಊರಿನ ಕೆರೆಗೆ ಸಾಕಷ್ಟು ಪ್ರಮಾಣದ ನೀರು ಹರಿದುಬಂದಿದೆ ಎಂದು ಅರಿಯಲು ನಮ್ಮ ಪೂರ್ವಿಕರು ತಮ್ಮದೇ ಆದ ಅಳತೆ, ಪ್ರಮಾಣ ಗುರುತಿಸಿದ್ದಾರೆ. ಅದಕ್ಕಾಗಿ ಕೆರೆ ಅಂಗಳದಲ್ಲಿ ಗಡಿ ಒಂದನ್ನು ನಿಗದಿಪಡಿಸಿ, ಅದರ ಮಟ್ಟಕ್ಕೆ ನೀರು ತಲುಪಿದಾಗ ಆಯಾ ವರ್ಷದ ಜಲ ಸಮೃದ್ಧಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಗಡಿಯನ್ನು ದೇವರೆಂದು ಭಾವಿಸುತ್ತಾರೆ. ಕೆರೆಯನ್ನು `ಕೆರೆಮಾರಿʼ ಎಂಬ ಹೆಣ್ಣು ದೇವತೆ ಹೆಸರಿನಲ್ಲಿ, ಗಡಿಯನ್ನು `ಗಡಿಯಪ್ಪʼ ಎಂಬ ಗಂಡು ದೇವತೆಯಾಗಿ ಪೂಜೆ ಸಲ್ಲಿಸುತ್ತಾರೆ.
ಕೆರೆಗಳು ಹೆಚ್ಚಾಗಿ ಇರದ ಪ್ರದೇಶಗಳಲ್ಲಿ ಆರಿದ್ರಾ ಮಳೆ ಹಬ್ಬ ಎಂಬ ಹೆಸರು ಪ್ರಚಲಿತದಲ್ಲಿ ಇದ್ದರೆ, ಕೆರೆಗಳ ಸಂಖ್ಯೆ ಗಣನೀಯವಾಗಿ ಇರುವ ತಾಲ್ಲೂಕಿನಲ್ಲಿ ಅದೇ ಹೆಸರಿನೊಂದಿಗೆ ಕೆರೆಕೋಡಿ ಹಬ್ಬ, ಕೆರೆಮಾರಿ ಹಬ್ಬ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ ಎಂಬ ವಾದ ಸಹ ಇದೆ.
ಹಬ್ಬದ ದಿನದಂದು ಗಡಿಯಪ್ಪ ಹಾಗೂ ಕೆರೆಕೋಡಿಗೆ ಬಾಗಿನ ಸಮರ್ಪಿಸಿ, ಮನೆಗಳಲ್ಲಿ ಕೂರಿಗೆ ಮೊದಲಾದ ಕೃಷಿ ಪರಿಕರಗಳನ್ನು ಜೋಡಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇನ್ನೂ ಕೆರೆಕೋಡಿ ಬೀಳದಿದ್ದರೆ ಆ ವರ್ಷ ಹಬ್ಬದ ಆಚರಣೆ ಇರುವುದಿಲ್ಲ.
ಕುಮಾರ ರಾಮನ ಆರಾಧನೆ
ವಿಜಯನಗರ ಸಾಮ್ರಾಜ್ಯದ ಮೂಲ ಪುರುಷ ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ. ಈ ಕುಮಾರರಾಮ ಯೋಧನಾಗಿದ್ದ. ಈತನ ಶೌರ್ಯ, ಮಹಿಳೆಯರ ಮೇಲಿನ ಈತನ ಗೌರವದಿಂದ ಹೆಸರುವಾಸಿಯಾಗಿದ್ದ. ತನ್ನ ಶೂರತನ, ತ್ಯಾಗ, ಪೌರುಷದಿಂದ ಅಜರಾಮರನಾದ. ಇಂದಿಗೂ ಈತನನ್ನು ದೇವರಾಗಿ ಪೂಜಿಸಲಾಗುತ್ತದೆ. ಆರಿದ್ರಾ ಮಳೆ ಹಬ್ಬದ ವೇಳೆ ಕುಮಾರ ರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಬನವಾಸಿ, ಸಿದ್ಧಾಪುರ, ಶಿರಸಿ, ಸಾಗರ, ಸೊರಬ ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನೂ ಸಿದ್ಧಾಪುರದ ಕೋಲಶಿರ್ಸಿ, ಮನ್ಮನೆ, ಬೇಡ್ಕಣಿ, ಹುಸೂರು, ಅವರಗುಪ್ಪ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ವಿಜೃಂಬಣೆಯಿಂದ ನಡೆಯುತ್ತದೆ.
ಕುಮಾರರಾಮನ ಗುಡಿಯೊಂದು ಹೊನ್ನಾವರ ತಾಲೂಕಿನ ನವಿಲಗೋಣಿನಲ್ಲಿ ಇದೆ. ಈ ದೇವಸ್ಥಾನದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಸುಗ್ಗಿ ಹಬ್ಬವೆಂದು ಆಚರಿಸುವ ರೂಢಿಯೂ ಇದೆ.
