– ಆಗಸ್ಟ್ 18ರ ಎಜಿಎಂ ಸಭೆಗೂ ಮುನ್ನವೇ ನಿರ್ಧಾರ
ಮುಂಬೈ: ಟಾಟಾ ಸನ್ಸ್ (Tata Sons) ಕಾರ್ಯಾಧ್ಯಕ್ಷ ಎನ್. ಚಂದ್ರಶೇಖರನ್(N Chandrasekaran) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ಅವಧಿ ಪೂರ್ಣಗೊಂಡ ನಂತರ ಮರುನೇಮಕಗೊಳ್ಳಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 18 ರಂದು ನಡೆಯಲಿರುವ ಟಾಟಾ ಸನ್ಸ್ ವರ್ಷಿಕ ಮಹಾಸಭೆಗೂ (AGM) ಮುನ್ನವೇ ಈ ಮಹತ್ವದ ಬೆಳವಣಿಗೆ ನಡೆದಿದೆ.
2027ರ ಫೆಬ್ರವರಿವರೆಗೆ ಚಂದ್ರಶೇಖರನ್ ಅವರ ಅಧಿಕಾರವಧಿ ಇದೆ. ಆಗಸ್ಟ್ 18ರ ಎಜಿಎಂ ಸಭೆಯಲ್ಲಿ ಅವರ ಮರುನೇಮಕದ ಕುರಿತು ಪಾಲುದಾರರು ಮತದಾನ ಮಾಡಬೇಕಿತ್ತು. ಈ ಪ್ರಕ್ರಿಯೆ ನಡೆಯುವ ಮೊದಲೇ ಚಂದ್ರಶೇಖರನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈಗ ರಾಜೀನಾಮೆ ಸಲ್ಲಿಸಿದ್ದರೂ ಮುಂದಿನ ಫೆಬ್ರವರಿವರೆಗೆ ಚಂದ್ರಶೇಖರ್ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಟಾಟಾ ಸಮೂಹದ ದತ್ತಿ ಸಂಸ್ಥೆಯಾದ ‘ಟಾಟಾ ಟ್ರಸ್ಟ್ಸ್’ ಅಧ್ಯಕ್ಷ ನೋಯೆಲ್ ಟಾಟಾ(Noel Tata) ಅವರು ಚಂದ್ರಶೇಖರನ್ ಮರುನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಬೋರ್ಡ್ ಪ್ರಾತಿನಿಧ್ಯ, ಸಂಸ್ಥೆಯ ಸಾಲ ಕಡಿತಗೊಳಿಸುವುದು, ಟಾಟಾ ಸನ್ಸ್ ಸಂಸ್ಥೆಯನ್ನು ಸಾರ್ವಜನಿಕ ಶೇರು ಮಾರುಕಟ್ಟೆಗೆ (Listing) ತರದೇ ಇರುವುದು ಹಾಗೂ ಶಾಪೂರ್ಜಿ ಪಲ್ಲೊಂಜಿ ಸಂಸ್ಥೆಯೊಂದಿಗಿನ ವಿವಾದಗಳನ್ನು ಬಗೆಹರಿಸುವ ವಿಚಾರಗಳಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.
ಚಂದ್ರಶೇಖರನ್ ಅವರ ರಾಜೀನಾಮೆ ಬೆನ್ನಲ್ಲೇ, ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿ ವಿಜಯ್ ಸಿಂಗ್ ಕೂಡ ತಮ್ಮ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ್ದು, ಮರುನೇಮಕಗೊಳ್ಳಲು ನಿರಾಕರಿಸಿದ್ದಾರೆ.
1987 ರಲ್ಲಿ ಟಾಟಾ ಸಮೂಹವನ್ನು ಸೇರಿದ ಎನ್. ಚಂದ್ರಶೇಖರನ್ ಅವರು 2009 ರಲ್ಲಿ ಟಿಸಿಎಸ್ (TCS) ಸಿಇಒ ಆಗಿ ಆಯ್ಕೆಯಾದರು. ನಂತರ 2017 ರಲ್ಲಿ ದಿವಂಗತ ರತನ್ ಟಾಟಾ ಅವರ ಮಾರ್ಗದರ್ಶನದಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಟಾಟಾ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೇರಿದ್ದು ಇದೇ ಮೊದಲ ಬಾರಿಯಾಗಿತ್ತು.
ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಸೇರಿದಂತೆ ಹಲವು ಪ್ರಮುಖ ಮತ್ತು ಬಹುಕೋಟಿ ಉದ್ಯಮ ಯೋಜನೆಗಳಲ್ಲಿ ಟಾಟಾ ಸಂಸ್ಥೆ ತೊಡಗಿಸಿಕೊಂಡಿರುವ ಈ ನಿರ್ಣಾಯಕ ಸಮಯದಲ್ಲಿ, ಚಂದ್ರಶೇಖರನ್ ಅವರ ನಿರ್ಗಮನವು ಟಾಟಾ ಸನ್ಸ್‌ನ ಭವಿಷ್ಯದ ಆಡಳಿತ ಶೈಲಿಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.

