ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆಗೆ ತೀವ್ರ ಕುತೂಹಲ ಮೂಡಿದ್ದು, ಕಡೆಗಳಿಗೆಯಲ್ಲಿ ಪ್ರಮುಖ ಖಾತೆಗಳಿಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಸಚಿವ ಯು.ಟಿ. ಖಾದರ್(UT Khader) ಅವರ ಬಳಿ ಇರುವ ಆರೋಗ್ಯ ಇಲಾಖೆಯನ್ನು ಡಾ. ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರಿಗೆ ವಹಿಸುವ ಸಾಧ್ಯತೆಗಳಿವೆ. ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ತಮಗೆ ನೀಡಿದರೆ, ಆರೋಗ್ಯ ಇಲಾಖೆಯನ್ನು ಬಿಟ್ಟುಕೊಡಲು ಯು.ಟಿ. ಖಾದರ್ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಈಗ ಜಮೀರ್ ಅಹಮದ್ ಖಾನ್(Zameer Ahmed Khan) ಅವರಿಗೆ ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ಹಂಚಿಕೆಯಾಗಿದೆ. ಯು.ಟಿ. ಖಾದರ್ ಅವರ ಬೇಡಿಕೆಗೆ ಸ್ಪಂದಿಸಿದರೆ ಜಮೀರ್ ಅಹಮದ್ ವಸತಿ ಖಾತೆಯನ್ನು ಮಾತ್ರ ನೋಡಿಕೊಳ್ಳಬೇಕಾಗುತ್ತದೆ. ಇದನ್ನೂ ಓದಿ: ಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?
ಈ ಕಾರಣಕ್ಕೆ ಡಿಕೆಶಿ ಸಂಪುಟದಲ್ಲಿ ಕಡೆಗಳಿಗೆಯಲ್ಲಿ ಯು.ಟಿ. ಖಾದರ್, ಯತೀಂದ್ರ, ಜಮೀರ್ ಮಧ್ಯೆ ಆರೋಗ್ಯ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.
ಸಚಿವರ ಖಾತೆ ಹಂಚಿಕೆ ಈಗಾಗಲೇ ಅಂತಿಮಗೊಂಡಿದ್ದರೂ, ಎಲ್ಲಾ ಇಲಾಖೆಗಳ ಅಧಿಕೃತ ಮಾಹಿತಿ ಲಭ್ಯವಾದ ನಂತರವೇ ಅಂತಿಮ ಪಟ್ಟಿಯನ್ನು ಲೋಕಭವನಕ್ಕೆ ರವಾನಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.
ಆರೋಗ್ಯ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಅಂತಿಮವಾಗಿ ಯಾರ ಪಾಲಾಗಲಿವೆ ಎಂಬುದು ಶೀಘ್ರದಲ್ಲೇ ಹೊರಬೀಳುವ ಅಧಿಕೃತ ಪಟ್ಟಿಯಿಂದ ತಿಳಿದುಬರಲಿದೆ.

