ಹಾವೇರಿ: ನೇಪಾಳ ಪ್ರವಾಸಕ್ಕೆ ಹೋಗಿದ್ದ ಹಾವೇರಿಯ (Haveri) ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳು ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.
ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ 12 ಜನರು ಮತ್ತು ಬೆಂಗಳೂರಿನ ಇಬ್ಬರು ಸೇರಿದಂತೆ ಒಟ್ಟು 14 ಕನ್ನಡಿಗರು ಸುರಕ್ಷಿತರಾಗಿದ್ದಾರೆ. ಆರ್.ಎನ್ ಗಂಗೋಳ, ಅನುಸುಯಾ, ಪುಟ್ಟಣ್ಣ, ಸುಮಾ, ಜಗದೀಶ್, ಬಸವರಾಜ, ಪೂರ್ಣಿಮಾ, ರೇಣುಕಾರಾದ್ಯ, ಲಕ್ಷ್ಮಣ್ ಸುಣಗಾರ, ರೇಖಾ, ಶಿವನಗೌಡ, ಪುಷ್ಪಾ, ಸುಭಲಿಂಗಪ್ಪ, ರೇಣುಕಾ ಗೂಳಪ್ಪ ಒಟ್ಟು 14 ಜನರು ನೇಪಾಳಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಇದನ್ನೂ ಓದಿ: ನೇಪಾಳ ಜಲಪ್ರಳಯ – ಮುಂದಿನ 24 ಗಂಟೆ ಬಿಹಾರ, ಯುಪಿ, ಉತ್ತರಾಖಂಡದಲ್ಲಿ ಪ್ರವಾಹದ ಹೈಅಲರ್ಟ್
ರಟ್ಟಿಹಳ್ಳಿಯ 6 ಕುಟುಂಬಗಳ ಸದಸ್ಯರು, ವ್ಯಾಪಾರಸ್ಥರು ಹಾಗೂ ಗುತ್ತಿಗೆದಾರರು ಸೇರಿ ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗದ ಟ್ರಾವೆಲ್ಸ್ ಕಂಪನಿಯೊಂದರ ಮೂಲಕ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಶಿವನಗೌಡ ಹಾಗೂ ವಿನಾಯಕ ಅವರ ನೇತೃತ್ವದಲ್ಲಿ ಈ ತಂಡ ನೇಪಾಳ ಪ್ರವಾಸ ಕೈಗೊಂಡಿತ್ತು. ಪ್ರಸ್ತುತ ಈ ಕುಟುಂಬಗಳು ನೇಪಾಳದ ಪೋಖರಾದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದ್ದು, ಕೆಲವೇ ಹೊತ್ತಿನಲ್ಲಿ ಸೋನಾಲಿ ಪ್ರದೇಶ ತಲುಪುವ ನಿರೀಕ್ಷೆಯಲ್ಲಿವೆ.
ಪ್ರಕೃತಿ ವಿಕೋಪದ ಆತಂಕದ ನಡುವೆಯೂ ಎಲ್ಲರೂ ಸುರಕ್ಷಿತರಾಗಿದ್ದಾರೆ. ಸದ್ಯ ಪರಿಸ್ಥಿತಿ ನೋಡುಕೊಂಡು ಪ್ರವಾಸಿಗರು, ಶೀಘ್ರದಲ್ಲೇ ಕರ್ನಾಟಕಕ್ಕೆ (Karnataka) ವಾಪಸ್ಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಅವರು ಸುರಕ್ಷಿತವಾಗಿ ವಾಪಸು ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.ಇದನ್ನೂ ಓದಿ: ನೇಪಾಳ ಜಲಪ್ರಳಯಕ್ಕೆ ನಗರಗಳೇ ಸರ್ವನಾಶ: 300 ಭಾರತೀಯರು ಸೇರಿ ನೂರಾರು ಜನ ನಾಪತ್ತೆ
