ಚಿಕ್ಕಬಳ್ಳಾಪುರ: ಶ್ರಾವಣ ಮಾಸದ (Shravana Masa) ಕೊನೆಯ ಶನಿವಾರದ ಅಂಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಿದ್ದ ವೇಳೆ ಗೋಪುರದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ (Gudibande) ಪಟ್ಟಣದಲ್ಲಿ ನಡೆದಿದೆ.
ಗುಡಿಬಂಡೆ ಪಟ್ಟಣದ 3ನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹ್ಮತ್ ಮೃತ ದುರ್ದೈವಿ. ಶ್ರಾವಣ ಶನಿವಾರದ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಕಾರ್ಯ ಕೈಗೊಳ್ಳಲಾಗಿತ್ತು. ದೇವಸ್ಥಾನದ ಟ್ರಸ್ಟ್ ವತಿಯಿಂದ ಅಲಂಕಾರ ಕೆಲಸವನ್ನು ರಹ್ಮತ್ ಅವರಿಗೆ ವಹಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತ ದೀಪಗಳ ಅಲಂಕಾರ ಮಾಡುತ್ತಿದ್ದ ರಹ್ಮತ್, ಬಳಿಕ ದೇವಸ್ಥಾನದ ಗೋಪುರದ ಮೇಲೂ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದರು. ಅಲಂಕಾರ ಕಾರ್ಯ ಬಹುತೇಕ ಪೂರ್ಣಗೊಂಡು, ಕೊನೆಯ ಹಂತದ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಗೋಪುರದಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ರಹ್ಮತ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಸ್‌ಗಳಿಗಿಲ್ಲ ರಿಪೇರಿ ಭಾಗ್ಯ – ಮೊಬೈಲ್ ಟಾರ್ಚ್ ಬೆಳಕಲ್ಲೇ ಸಂಚರಿಸಿದ ಸರ್ಕಾರಿ ಬಸ್
ಸುಮಾರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ರಹ್ಮತ್ ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ದಿನಗೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಅವರು ಕುಟುಂಬಕ್ಕೆ ಪ್ರಮುಖ ಆಧಾರವಾಗಿದ್ದರು. ರಹ್ಮತ್ ಅವರ ಅಕಾಲಿಕ ಸಾವಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 25 ಪಾಕಿಸ್ತಾನಿ ಸೈನಿಕರ ಹತ್ಯೆ – ಬಲೂಚ್ ಆರ್ಮಿಯಿಂದ ಸಿನಿಮೀಯ ಶೈಲಿಯ ವಿಡಿಯೋ ರಿಲೀಸ್
