ಕಾರವಾರ: ಮಧ್ಯಪ್ರಾಚ್ಯ ಯುದ್ಧ ಸಂಘರ್ಷದಿಂದ ಸ್ತಬ್ಧವಾಗಿದ್ದ ಕರ್ನಾಟಕ ಬಂದರಿನ ವಾಣಿಜ್ಯ ಚಟುವಟಿಕೆ ಮತ್ತೆ ಗರಿಗೆದರಿದೆ. ಇದೀಗ ಯುಎಇ ನ ಶಾರ್ಜಾ ಬಂದರಿನಿಂದ 6,000 ಮೆಟ್ರಿಕ್ ಟನ್ ಕಚ್ಚಾ ಡಾಂಬರ್ (Raw Asphalt) ಹೊತ್ತ ಎಂಎಸ್‌ಜಿ ಹಡಗು ಕಾರವಾರ ಬಂದರಿಗೆ (Karwar Port) ಆಗಮಿಸಿದೆ.
ಯುದ್ಧ (War) ಶುರುವಾದ ಬಳಿಕ ಇದು ಕಾರವಾರ ಬಂದರಿಗೆ ಬಂದ 2ನೇ ಹಡಗು ಆಗಿದೆ. 35 ದಿನಗಳ ಬಳಿಕ ಕಾರವಾರಕ್ಕೆ ಬಂದಿರುವ ಬಿಟುಮಿನ್ ಹೊತ್ತ ಈ ಹಡಗು ಇನ್ನೆರೆಡು ದಿನ ಕಾರವಾರದ ಬಂದರಿನಲ್ಲಿಯೇ ಲಂಗರು ಹಾಕಲಿದ್ದು ಮರಳಿ ಯುಎಇ ನ ಶಾರ್ಜಾ ಬಂದರಿಗೆ ತೆರಳಲಿದೆ.
ನಷ್ಟದ ಹಾದಿಯಲ್ಲಿ ಬಂದರು ವಾಣಿಜ್ಯ ಚಟುವಟಿಕೆ
ಮೊಲಾಸಿಸ್, ಇಂಧನ ಎಣ್ಣೆ ರಫ್ತಿಗೆ ಹೆಸರಾಗಿದ್ದ ಕಾರವಾರ ವಾಣಿಜ್ಯ ಬಂದರಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಮದು ಜೊತೆ ರಫ್ತು ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ ಆಮದು ವಹಿವಾಟು ಇಳಿಕೆಯಾಗಿದೆ. ಇದೆಲ್ಲದರ ಪರಿಣಾಮ ಬಂದರಿನ ಆದಾಯ ಗಣನೀಯ ಕುಸಿತ ಕಂಡಿದೆ.

2025- 26ನೇ ಸಾಲಿನಲ್ಲಿ ಕಾರವಾರದ ವಾಣಿಜ್ಯ ಬಂದರು ಬಳಸಿ ಕೊಂಡು ಖಾಸಗಿ ಸರಕು ಸಾಗಣೆ ಕಂಪನಿಗಳು ನಡೆಸಿದ ವಹಿವಾಟಿನಿಂದ ಕರ್ನಾಟಕ ಜಲಸಾರಿಗೆ ಮಂಡಳಿಗೆ 11,04,40,491 ಆದಾಯ ಹರಿದುಬಂದಿದೆ. ಕಳೆದ ವರ್ಷದ ಏಪ್ರಿಲ್‌ನಿಂದ ಪ್ರಸಕ್ತ ಮಾರ್ಚ್ ಅಂತ್ಯದ ವರೆಗೆ 91 ಸರಕು ಸಾಗಣೆ ಹಡಗುಗಳು (ಕಾರ್ಗೊ ಶಿಪ್) ಬಂದರಿಗೆ ಬಂದಿದ್ದವು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆದಾಯ, ಬಂದರಿಗೆ ಬಂದ ಹಡಗುಗಳ ಪ್ರಮಾಣ ಇಳಿಕೆಯಾಗಿದೆ. ಆದಾಯ ಪ್ರಮಾಣವಂತೂ ಕಳೆದ 3 ವರ್ಷಗಳಿಂದ ಗಣನೀಯ ಇಳಿಕೆ ಕಂಡಿದ್ದು ನಷ್ಟ ತಂದೊಡ್ಡಿದೆ.
ಕೇಂದ್ರ ಸರ್ಕಾರವು ಉತ್ತೇಜನ ನಿಟ್ಟಿನಲ್ಲಿ ನೀಡುವ ಮೊಲಾಸಿಸ್ (ಕಾಕಂಬಿ) ಮೇಲಿನ ಸುಂಕ ಹೆಚ್ಚಳ ಮಾಡಿದ್ದರಿಂದ ಕಾರವಾರ ಬಂದರಿನ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಮೊಲಾಸಿಸ್ ರಫ್ತು ಆಗುವುದು ಸ್ಥಗಿತಗೊಂಡಿದೆ. ಸುಂಕ ಹೆಚ್ಚಳದ ನಡುವೆಯೂ ಎರಡು ವರ್ಷಗಳ ಹಿಂದೆ 1.97 ಲಕ್ಷ ಟನ್ ಮೊಲಾಸಿಸ್ ರಫ್ತಾಗಿತ್ತು. ಕಳೆದ ವರ್ಷದಿಂದ ಈ ಚಟುವಟಿಕೆ ನಿಂತಿದೆ.
ಕಾರವಾರ ವಾಣಿಜ್ಯ ಬಂದರಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 5,66,543 ಟನ್‌ನಷ್ಟು ಐದು ವಿಧದ ಸರಕುಗಳ ಆಮದು ಚಟುವಟಿಕೆ ನಡೆದಿದೆ. ನೌಕಾದಳಕ್ಕೆ ಹಾಗೂ ದಕ್ಷಿಣ ಭಾರತದ ವಿವಿಧೆಡೆ ಪೂರೈಕೆಗೆ ಅನುಕೂಲವಾಗುವ 1,05,747 ಟನ್ ಡೀಸೆಲ್ (ಎಚ್‌ಎಸ್‌ಡಿ), 43,500 ಟನ್ ತಾಳೆ ಎಣ್ಣೆ, 41,917 ಟನ್ ರಾಕ್ ಫಾಸ್ಪೆಟ್, 1,23,135 ಟನ್ ಕೈಗಾರಿಕೆ ಉಪ್ಪು, 2,50,830 ಟನ್ ಬಿಟುಮಿನ್ ಆಮದು ನಡೆದಿದೆ. ಇದಲ್ಲದೇ 1,414 ಟನ್ ತೂಕದ ಎರಡು ಬೃಹತ್ ಕ್ರೇನ್ ಕೂಡ ಆಮದಾಗಿದೆ.

ಜನವರಿ ಬಳಿಕ ಅರಬ್ ರಾಷ್ಟ್ರಗಳಿಂದ ಬಿಟುಮಿನ್ ಹೊತ್ತು ಬರುವ ಹಡಗುಗಳ ಸಂಖ್ಯೆ ಹೆಚ್ಚಿರುತ್ತಿತ್ತು. ಆದರೆ, ಹಡಗುಗಳು ಹೆಚ್ಚು ಬರುವ ಅವಧಿಯಲ್ಲೇ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಸನ್ನಿವೇಶ ಎದುರಾಗಿದ್ದರಿಂದ ಹಡಗುಗಳ ಬಾರದೇ ಇದೀಗ ವಾಣಿಜ್ಯ ಬಂದರಿನಲ್ಲಿ ಆರ್ಥಿಕ ಚಟುವಟಿಕೆ ಮತ್ತಷ್ಟು ನಷ್ಟಕ್ಕೆ ದೂಡಿದೆ.
ಮಧ್ಯಪ್ರಾಚ್ಯದ ಯುದ್ಧ ಸಂಘರ್ಷದಿಂದ ತಾಳೆ ಎಣ್ಣೆ, ಕಚ್ಚಾ ಡಾಂಬರ್ ನಿಗದಿ ಸಮಯದಲ್ಲಿ ಕಾರವಾರ ಬಂದರಿಗೆ ತಲುಪುತಿಲ್ಲ. ಆಮದು ಜೊತೆ ರಫ್ತಿನ ವಹಿವಾಟು ಸಹ ಸ್ತಬ್ದವಾಗಿದೆ. ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ಪ್ರಾರಂಭವಾದ ದಿನದದ ಹಡಗುಗಳು ಬರುತ್ತಿಲ್ಲ. ಮಾರ್ಚ ನಲ್ಲಿ ಒಟ್ಟು 12 ಹಡಗುಗಳು ಬರಬೇಕಿದ್ದು ,ಯುಎಇ ನಿಂದ ಕಚ್ಚಾ ಡಾಂಬರ್ ತುಂಬಿದ ಒಂದು ಹಡಗು ಸೇರಿ ಒಟ್ಟು 5 ಹಡಗು ಮಾತ್ರ ಬಂದಿದೆ. ಇದೀಗ ಕಳೆದ 35 ದಿನದ ನಂತರ ವಿದೇಶಿಹಡಗು ಬಂದಿರುವುದು ಬಂದರು ಚಟುವಟಿಕೆ ಗರಿಗೆದರುವಂತೆ ಮಾಡಿದೆ.

