ತಿರುವನಂತಪುರಂ: ಕೇರಳದ (Kerala) ಕಣ್ಣೂರು (Kannur) ಜಿಲ್ಲೆಯ ಶಾಲೆಯೊಂದರಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ದಿಢೀರ್ ಬೀಸಿದ ಬಿರುಗಾಳಿಯ ರಭಸಕ್ಕೆ ಶಾಲೆಯ ಬೃಹತ್ ಲೋಹದ ಮೇಲ್ಛಾವಣಿ (School Roof) ಹಾರಿ, ಸಮೀಪದ ಕಟ್ಟಡದ ಮೇಲೆ ಬಿದ್ದಿದೆ. ಈ ವೇಳೆ ಕಟ್ಟಡದ ಕೆಳಗೆ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ.
ಶುಕ್ರವಾರ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಉಲಿಕ್ಕಲ್ನ ವಯತುರ್ ಯುಪಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ದಿಢೀರ್ ಬೀಸಿದ ಸುಂಟರಗಾಳಿ ಸಹಿತ ಭಾರೀ ಮಳೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಶಾಲೆಯ ಆವರಣದಲ್ಲಿ ಅಪಾರ ಹಾನಿ ಸಂಭವಿಸಿದೆ. ಇದನ್ನೂ ಓದಿ: ದೆಹಲಿ ಸ್ಥಗಿತಕ್ಕೆ ಕೇಂದ್ರವೇ ಕಾರಣ, ಮೋದಿಗೆ ಪ್ರತಿಭಟನೆಯ ಭಯ: ಪ್ರಿಯಾಂಕ್ ಕಿಡಿ
ಸುಮಾರು 15 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಶಾಲೆಯ ಬೃಹತ್ ಕಮಾನು ಆಕಾರದ ಮೇಲ್ಛಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿದೆ. ಬಳಿಕ ಶಾಲೆಯ ಹಿಂಭಾಗದಲ್ಲಿದ್ದ ಕಟ್ಟಡದ ಮೇಲೆ ಬಿದ್ದಿದೆ. ಈ ವೇಳೆ ಕಟ್ಟಡದ ಕೆಳಗೆ ನಿಲ್ಲಿಸಲಾಗಿದ್ದ ಮೂರು ಕಾರುಗಳು ತೀವ್ರವಾಗಿ ಜಖಂಗೊಂಡಿವೆ. ಶಾಲೆಯಲ್ಲಿ ಮಕ್ಕಳು ಆಟವಾಡುವ ಸ್ಥಳದ ಸಮೀಪವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವೇ ನಿಮಿಷಗಳ ವ್ಯತ್ಯಾಸವಾಗಿದ್ದರೂ ಮಕ್ಕಳು ಅದೇ ಪ್ರದೇಶದಲ್ಲಿ ಆಟವಾಡುತ್ತಿದ್ದರು. ಆಗ ಮೇಲ್ಛಾವಣಿ ಮಕ್ಕಳ ಮೇಲೆ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಮೈಸೂರು ದಸರಾ 2026: ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ನಿಷೇಧಾಜ್ಞೆ ಜಾರಿ
ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೇಲ್ಛಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಹಾನಿಗೊಳಗಾದ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಸುಮಾರು 15 ನಿಮಿಷಗಳ ಕಾಲ ಬೀಸಿದ ಈ ಬಿರುಗಾಳಿಯಿಂದ ಉಲಿಕ್ಕಲ್, ಇರಿಟ್ಟಿ ಸೇರಿದಂತೆ ಕಣ್ಣೂರಿನ ಗುಡ್ಡಗಾಡು ಪ್ರದೇಶಗಳಲ್ಲಿಯೂ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಸಾಕು ನಾಯಿ ದಾಳಿ – ಗಂಭೀರ ಗಾಯ

