ಬೆಂಗಳೂರು: ಪಾರ್ಕ್ ಉಳಿಸೋದು ಕ್ರೈಂ ಅಂದ್ರೆ, ಪ್ರತಿದಿನ ಈ ಕ್ರೈಮ್ ಮಾಡಲು ಸಿದ್ಧ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. (Lalbagh Protest) ಲಾಲ್‌ಬಾಗ್‌ನಲ್ಲಿ ನಡೆದ ವಾಕಿಂಗ್ ಅಭಿಯಾನದಲ್ಲಿ ಭಾಗವಹಿಸಿದ್ದವರಿಗೆ ಪೊಲೀಸರು ನೋಟಿಸ್ ನೀಡಿರುವುದನ್ನು ಖಂಡಿಸಿ, ತೇಜಸ್ವಿ ಸೂರ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಾರ್ಕ್‌ಗಳನ್ನು ಉಳಿಸುವುದು ಅಪರಾಧವಲ್ಲ. ಪರಿಸರ ಸಂರಕ್ಷಣೆಗೆ ಕಾನೂನು ಇದೆ. ಆ ಕಾನೂನನ್ನು ಉಲ್ಲಂಘಿಸುವವರೇ ಕ್ರಿಮಿನಲ್‌ಗಳು ಎಂದು ಕಿಡಿಕಾರಿದರು.
ಟನಲ್ ಯೋಜನೆ ಕೈಬಿಡಬೇಕು. ಯೋಜನೆ ಮುಂದುವರಿಸಿದರೆ ಪ್ರತಿವಾರ ಬೆಂಗಳೂರಿನ ಬೇರೆ ಬೇರೆ ಉದ್ಯಾನವನಗಳಲ್ಲಿ ಪ್ರತಿಭಟನೆ ನಡೆಸುವುತ್ತೇವೆ. ಮುಂದಿನ ಭಾನುವಾರವೂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. ವಿಧಾನಸೌಧ ಚಲೋ ಸೇರಿದಂತೆ ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನೇಪಾಳದಲ್ಲಿ ವಿನಾಶಕಾರಿ ಪ್ರವಾಹ – 700ರ ಗಡಿ ದಾಟಿದ ಸಾವಿನ ಸಂಖ್ಯೆ; 2,500 ಮಂದಿ ಇನ್ನೂ ಕಣ್ಮರೆ
ʼಮುಖ್ಯಮಂತ್ರಿಗಳೇ, ಇಲ್ಲಿರುವ ಜನರೇ ಹಣ ಕೊಡಲು ಸಿದ್ಧರಿದ್ದಾರೆ. ಭೂಮಿ ತಾಯಿಯನ್ನು ಕೊಲೆ ಮಾಡಿ ಹಣ ಮಾಡಬೇಡಿʼ ಎಂದು ತೇಜಸ್ವಿ ಸೂರ್ಯ ಸರ್ಕಾರಕ್ಕೆ ಮನವಿ ಮಾಡಿದರು. ಟನಲ್ ಯೋಜನೆ ಹಾಗೂ ಪಾರ್ಕ್‌ಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೂಡಲೇ ಕೈಬಿಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಬೇಕು ಎಂದು ಆಗ್ರಹಿಸಿದರು.
ಲಾಲ್‌ಬಾಗ್ ಉಳಿಸಿ ಅಭಿಯಾನದಲ್ಲಿ ನೂರಾರು ಬೆಂಗಳೂರಿಗರು ಹಾಗೂ ವಾಯುವಿಹಾರಿಗಳು ಭಾಗವಹಿಸಿದ್ದರು. ಬಂಡೆ ಕಲ್ಲುಗಳನ್ನು ತಬ್ಬಿಕೊಂಡು ಪ್ರತಿಭಟನೆ ನಡೆಸಿದ ಜನರು ಮಾನವ ಸರಪಳಿ ರಚಿಸಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಯಲ್ಲಪ್ಪ ರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಮುಂದಾಳತ್ವದಲ್ಲಿ ನಡೆದ ‘Walk in Lalbagh, Walk for Lalbagh’ ಅಭಿಯಾನದಲ್ಲಿ ನಟಿ ಸುಧಾ ಬೆಳವಾಡಿ, ನಟಿ ಸಂಯುಕ್ತಾ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಡಾ. ಮಂಜುನಾಥ್, ಪಿ.ಸಿ. ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಇದನ್ನೂ ಓದಿ: ರಿಯಲ್ ಎಸ್ಟೇಟ್ ಕನಕಪುರದಲ್ಲಿ ಇಟ್ಟುಕೊಳ್ಳಿ – ಸಿಎಂಗೆ ಶೋಭಾ ಕರಂದ್ಲಾಜೆ ಟಾಂಗ್
