ಜಾಗತಿಕ ತೈಲ ಮಾರುಕಟ್ಟೆಯಲ್ಲಿ(Crude Oil Market) ಭಾರೀ ಪೈಪೋಟಿ ಆರಂಭವಾಗಿದ್ದು, ಸೌದಿ ಅರೇಬಿಯಾ(Saudi Arabia) ಏಷ್ಯಾ ಖಂಡದ ಗ್ರಾಹಕರಿಗೆ ಮಾರಾಟ ಮಾಡುವ ತನ್ನ ಪ್ರಮುಖ ಅರಬ್ ಲೈಟ್ (Arab Light) ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ದರ ಕಡಿತವನ್ನು ಘೋಷಿಸಿದೆ. ಅಗಸ್ಟ್ ತಿಂಗಳ ವಿತರಣೆಗಾಗಿ ಸೌದಿ ಅರೇಬಿಯಾವು ಬ್ಯಾರೆಲ್‌ಗೆ ಬರೋಬ್ಬರಿ 11 ಡಾಲರ್ ತೈಲ ಬೆಲೆಯನ್ನು ಇಳಿಕೆ ಮಾಡುವುದಾಗಿ ಪ್ರಕಟಿಸಿದೆ. ಹೀಗಾಗಿ ಸೌದಿ ಈ ಆಫರ್ ಪ್ರಕಟಿಸಿದ್ದು ಯಾಕೆ? ಭಾರತಕ್ಕೆ ಏನು ಲಾಭ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಏನಿದು ದರ ಕಡಿತ?
ಕಳೆದ 26 ವರ್ಷಗಳಲ್ಲೇ ಸೌದಿ ಅರೇಬಿಯಾ ಘೋಷಿಸಿರುವ ಅತ್ಯಂತ ದೊಡ್ಡ ಮಾಸಿಕ ದರ ಕಡಿತ ಇದಾಗಿದೆ. ಈ ಭಾರೀ ರಿಯಾಯಿತಿಯಿಂದಾಗಿ ಓಮನ್/ದುಬೈ ಜಾಗತಿಕ ಮಾನದಂಡದ (Benchmark) ಬೆಲೆಗಿಂತಲೂ 11 ಡಾಲರ್ ಕಡಿಮೆ ದರದಲ್ಲಿ ಸೌದಿಯು ತೈಲವನ್ನು ಆಫರ್ ಮಾಡುತ್ತಿದೆ. ಜೂನ್ ತಿಂಗಳ ಒಪ್ಪಂದದ ವೇಳೆ ಈ ಬೆಲೆಯು 9.50 ಡಾಲರ್‌ನಷ್ಟು ಹೆಚ್ಚುವರಿ ದರ ಹೊಂದಿತ್ತು.
ಕಚ್ಚಾ ತೈಲ ದರ ನಿಗದಿ ಹೇಗೆ?
ಕಚ್ಚಾ ತೈಲವು ಹೆಚ್ಚಾಗಿ ಕಮೋಡಿಟಿ ಎಕ್ಸ್ಚೇಂಜ್‌ಗಳಲ್ಲಿ ವ್ಯವಹಾರ ನಡೆಸುತ್ತವೆ. ಬ್ರೆಂಟ್ ಕಚ್ಚಾ ತೈಲ ಇಂಟರ್‌ಕಾಂಟಿನೆಂಟಲ್ ಎಕ್ಸ್‌ಚೇಂಜ್‌ನಲ್ಲಿ, ಅಮೆರಿಕದ ಡಬ್ಲ್ಯೂಟಿಐ ತೈಲ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್ ವ್ಯವಹಾರ ಮಾಡುತ್ತದೆ. ಇಲ್ಲಿ ಹೂಡಿಕೆದಾರರು ಭವಿಷ್ಯದಲ್ಲಿ ತೈಲದ ಬೆಲೆ ಎಷ್ಟಿರಬಹುದು ಎಂಬ ಅಂದಾಜಿನ ಮೇಲೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಈ ʼಫ್ಯೂಚರ್ಸ್ ಕಾಂಟ್ರಾಕ್ಟ್ʼಗಳು ಇಂದಿನ ತೈಲ ಬೆಲೆಯನ್ನು ನಿರ್ಧಾರ ಮಾಡುತ್ತದೆ.

ನಾಲ್ಕು ಕಚ್ಚಾ ತೈಲಗಳು ಯಾವುದು?
ಬ್ರೆಂಟ್, ಅಮೆರಿಕದ ಡಬ್ಲ್ಯೂಟಿಐ(ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯಟ್) ಒಪೆಕ್ ಬಾಸ್ಕೆಟ್, ರಷ್ಯಾದ ಯೂರಾಲ್ಸ್ ವಿಶ್ವಕ್ಕೆ ರಫ್ತಾಗುತ್ತದೆ. ಬ್ರೆಂಟ್ ಮತ್ತು ಡಬ್ಲ್ಯೂಟಿಐ ಇವೆರಡೂ ಜಾಗತಿಕವಾಗಿ ಅತ್ಯಂತ ಹೆಚ್ಚಿನ ವ್ಯಾಪಾರವಾಗುವ ಪ್ರಮುಖ ತೈಲಗಳಾಗಿವೆ. ಯುರೋಪ್‌ನ ಉತ್ತರ ಸಮುದ್ರ ತೈಲಕ್ಷೇತ್ರಗಳಿಂದ ಬ್ರೆಂಟ್ ಉತ್ಪಾದನೆಯಾಗುತ್ತದೆ. ಯುಕೆ, ನಾರ್ವೆ, ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್ ಭಾಗಗಳಲ್ಲಿ ಈ ತೈಲವನ್ನು ಹೊರತೆಗೆಯಲಾಗುತ್ತದೆ.
ಬ್ರೆಂಟ್ ತೈಲವು ಕೇವಲ ಈ ದೇಶಗಳಿಗೆ ಸೀಮಿತವಾಗಿಲ್ಲ. ಇದು ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳ ತೈಲ ದರಕ್ಕೆ ಒಂದು ಜಾಗತಿಕ ಮಾನದಂಡ ಅಂದರೆ ಬೆಂಚ್‌ಮಾರ್ಕ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಶ್ವದ ಸುಮಾರು ಮೂರನೇ ಎರಡರಷ್ಟು ಅಂತರಾಷ್ಟ್ರೀಯ ತೈಲ ವ್ಯಾಪಾರವು ಬ್ರೆಂಟ್ ದರದ ಆಧಾರದ ಮೇಲೆ ನಡೆಯುತ್ತದೆ.
ಡಬ್ಲ್ಯೂಟಿಐ ಅಮೆರಿಕದ ಭೂಭಾಗದ ಮುಖ್ಯವಾಗಿ ಟೆಕ್ಸಾಸ್ ತೈಲಕ್ಷೇತ್ರಗಳಿಂದ ಪಡೆಯಲಾಗುತ್ತದೆ. ಗುಣಮಟ್ಟಕ್ಕೆ ಹೋಲಿಸಿದರೆ ಅಮೆರಿಕದ ಡಬ್ಲ್ಯೂಟಿಐ ತೈಲವು ಬ್ರೆಂಟ್‌ಗಿಂತ ಹೆಚ್ಚು ಹಗುರ ಮತ್ತು ಸಿಹಿ ಅಂದರೆ ಅತಿ ಕಡಿಮೆ ಗಂಧಕ ಅಥವಾ ಸಲ್ಫರ್ ಪ್ರಮಾಣವನ್ನು ಹೊಂದಿದೆ. ಬ್ರೆಂಟ್ ಸ್ವಲ್ಪ ಹೆಚ್ಚು ಗಂಧಕವನ್ನು ಹೊಂದಿದ್ದರೂ, ಇದನ್ನು ಕೂಡ ‘ಲೈಟ್ ಸ್ವೀಟ್ ಕ್ರೂಡ್’ ಅಂತ ಪರಿಗಣಿಸಲಾಗುತ್ತದೆ.
ಒಪೆಕ್ ಬಾಸ್ಕೆಟ್ ಇದು 12 ಒಪೆಕ್ ರಾಷ್ಟ್ರಗಳು ಉತ್ಪಾದಿಸುವ ವಿವಿಧ ತೈಲಗಳ ಸರಾಸರಿ ಮಿಶ್ರಣ. ಇದು ಬ್ರೆಂಟ್‌ಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಭಾರ ಮತ್ತು ಹುಳಿ ಅಂದರೆ ಹೆಚ್ಚು ಗಂಧಕ ಹೊಂದಿರುತ್ತದೆ. ರಷ್ಯಾ ಯೂರಾಲ್ಸ್ ರಫ್ತು ಮಾಡುತ್ತದೆ. ಇದು ಮಧ್ಯಮ ಭಾರ ಮತ್ತು ಹೆಚ್ಚಿನ ಗಂಧಕವನ್ನು ಒಳಗೊಂಡಿದೆ.
ಭಾರತ ಎಷ್ಟು ಆಮದು ಮಾಡುತ್ತೆ?
ಭಾರತವು(India) ತನ್ನ ಒಟ್ಟು ಕಚ್ಚಾ ತೈಲದ ಅಗತ್ಯತೆಯ 85% ಕ್ಕಿಂತಲೂ ಹೆಚ್ಚು ಭಾಗವನ್ನು ಆಮದುಗಳ ಮೂಲಕವೇ ಪೂರೈಸಿಕೊಳ್ಳುತ್ತದೆ. ಸೌದಿ ಅರೇಬಿಯಾದಿಂದ ದಿನಕ್ಕೆ ಸರಾಸರಿ 8 ರಿಂದ 9 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಜಾಗತಿಕವಾಗಿ ಭಾರತಕ್ಕೆ ತೈಲ ಪೂರೈಸುವ ದೇಶಗಳಲ್ಲಿ ರಷ್ಯಾ ಮತ್ತು ಇರಾಕ್ ನಂತರ ಸೌದಿ ಅರೇಬಿಯಾ ಮೂರನೇ ಅತಿ ದೊಡ್ಡ ದೇಶವಾಗಿದೆ. ಸೌದಿ ಅರೇಬಿಯಾ ಈಗ ಘೋಷಿಸಿರುವ ಬ್ಯಾರೆಲ್‌ಗೆ 11 ಡಾಲರ್ ಇಳಿಕೆಯಿಂದಾಗಿ, ದಿನಕ್ಕೆ 8 ರಿಂದ 9 ಲಕ್ಷ ಬ್ಯಾರೆಲ್ ಖರೀದಿಸುವ ಭಾರತಕ್ಕೆ ಮಾಸಿಕ ಇಂಧನ ಬಿಲ್‌ನಲ್ಲಿ ಕೋಟ್ಯಂತರ ರೂಪಾಯಿಗಳಷ್ಟು ಭಾರಿ ಉಳಿತಾಯವಾಗಲಿದೆ.

ಬೆಲೆ ಸಮರಕ್ಕೆ ನಿಜವಾದ ಕಾರಣಗಳೇನು?
ಸೌದಿ ಅರೇಬಿಯಾ ರಿಯಾಯಿತಿ ಘೋಷಣೆಯ ಹಿಂದೆ ಭೌಗೋಳಿಕ ರಾಜಕೀಯ ಮತ್ತು ವ್ಯಾಪಾರವನ್ನು ಉಳಿಸಿಕೊಳ್ಳುವ ತಂತ್ರವಿದೆ. ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲಕ್ಕೆ ಬೆಲೆ ಮಿತಿ (Price Cap) ಹೇರಿದವು. ಇದರಿಂದಾಗಿ ರಷ್ಯಾ ಅನಿವಾರ್ಯವಾಗಿ ತನ್ನ ತೈಲವನ್ನು ಚೀನಾ ಮತ್ತು ಭಾರತಕ್ಕೆ ಅತ್ಯಂತ ಅಗ್ಗದ ದರದಲ್ಲಿ ಮಾರಾಟ ಮಾಡಲು ಆರಂಭಿಸಿತು. ಭಾರತದ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ರಷ್ಯಾ ಕಸಿದುಕೊಳ್ಳುತ್ತಿರುವುದನ್ನು ತಡೆಯಲು ಸೌದಿ ಈ ನಿರ್ಧಾರ ಮಾಡಿದೆ.
ಬಹಳ ಮುಖ್ಯವಾಗಿ ಚೀನಾದಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಾಗಿದೆ. ಭಾರತ ಈಗ ಎಲೆಕ್ಟ್ರಿಕ್ ವಾಹನಗಳತ್ತ ಬದಲಾಗುತ್ತಿದೆ. ಇದರ ಜೊತೆ ಎಥೆನಾಲ್ ಬಳಕೆ ಪ್ರೋತ್ಸಾಹ ನೀಡುತ್ತಿದ್ದು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಒಂದು ವೇಳೆ ತೈಲ ಬೆಲೆ ಏರಿಕೆಯಾದರೆ ಈಗ ಸೌದಿಗೆ ಲಾಭವಾಗಬಹುದು. ಆದರೆ ಮತ್ತೊಂದು ಕಡೆ ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ತೈಲ ಬೆಲೆ ಹೆಚ್ಚಾಗಿ ಇಟ್ಟುಕೊಂಡು ಗ್ರಾಹಕರನ್ನು ಕಳೆದುಕೊಳ್ಳುವುದಕ್ಕಿಂತ, ಬೆಲೆ ಕಡಿಮೆ ಮಾಡಿ ತನ್ನ 14%-15% ರಷ್ಟಿರುವ ಮಾರುಕಟ್ಟೆ ಪಾಲನ್ನು ಭದ್ರಪಡಿಸಿಕೊಳ್ಳುವುದು ಸೌದಿಯ ಇಂದಿನ ಆದ್ಯತೆಯಾಗಿದೆ. ಒಂದೆಡೆ OPEC+ ಒಕ್ಕೂಟ ಉತ್ಪಾದನೆ ಹೆಚ್ಚಿಸುತ್ತಿದ್ದರೆ, ಇನ್ನೊಂದೆಡೆ ಅಮೆರಿಕ-ಇರಾನ್ ನಡುವಿನ ಮಾತುಕತೆ ಯಶಸ್ವಿಯಾದರೆ ಇರಾನ್ ತೈಲವೂ ಮಾರುಕಟ್ಟೆಗೆ ಹರಿದುಬರುತ್ತಿದೆ. ಪೂರೈಕೆ ಹೆಚ್ಚಾಗಿ, ಬೇಡಿಕೆ ಸ್ಥಿರವಾಗಿದ್ದಾಗ ಬೆಲೆ ಇಳಿಯುವುದು ಸಹಜ.

ಯುಎಇ ನಡುವಿನ ಶೀತಲ ಸಮರ:
ಮಧ್ಯಪ್ರಾಚ್ಯದ ಇವೆರಡೂ ಪ್ರಬಲ ದೇಶಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಇಂಧನ ಮತ್ತು ಆರ್ಥಿಕ ನಾಯಕತ್ವಕ್ಕಾಗಿ ದೊಡ್ಡ ಪೈಪೋಟಿ ನಡೆಯುತ್ತಿದೆ. ಯುಎಇ (UAE) ಕಳೆದ ಕೆಲವು ವರ್ಷಗಳಲ್ಲಿ ತನ್ನ ತೈಲ ಉತ್ಪಾದನಾ ಮೂಲಸೌಕರ್ಯವನ್ನು ಭಾರಿ ಪ್ರಮಾಣದಲ್ಲಿ ಆಧುನೀಕರಿಸಿದೆ. ತಾನು ದಿನಕ್ಕೆ 50 ಲಕ್ಷ ಬ್ಯಾರೆಲ್‌ಗಿಂತಲೂ ಹೆಚ್ಚು ತೈಲ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ತನಗೆ ಹೆಚ್ಚಿನ ಕೋಟಾ (Quota) ನೀಡಬೇಕು ಎಂದು ಒಪೆಕ್ ಒಕ್ಕೂಟದಲ್ಲಿ ಯುಎಇ ನಿರಂತರವಾಗಿ ಪಟ್ಟು ಹಿಡಿಯುತ್ತಾ ಬಂದಿತ್ತು.
ಒಪೆಕ್ ಒಕ್ಕೂಟವು ಜಾಗತಿಕವಾಗಿ ತೈಲ ಬೆಲೆಯನ್ನು ನಿಯಂತ್ರಿಸಲು ತನ್ನ ಸದಸ್ಯ ದೇಶಗಳ ಮೇಲೆ ಉತ್ಪಾದನಾ ಮಿತಿ ಹೇರುತ್ತದೆ. ಒಪೆಕ್ ನಿಯಮದಂತೆ ಯುಎಇ ದಿನಕ್ಕೆ ಕೇವಲ 35 ಲಕ್ಷ ಬ್ಯಾರೆಲ್ ಆಸುಪಾಸಿನಲ್ಲಿ ಮಾತ್ರ ಉತ್ಪಾದಿಸಬೇಕಿತ್ತು. ಒಪೆಕ್ ಒಕ್ಕೂಟದಲ್ಲಿ ಸೌದಿ ಅರೇಬಿಯಾ ಹೇಳಿದ್ದೇ ಫೈನಲ್ ಎಂಬ ಪರಿಸ್ಥಿತಿ ಇತ್ತು. ಆದರೆ ಯುಎಇ ತನ್ನ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ತೈಲದ ಯುಗ ಮುಗಿಯುವ ಮುನ್ನವೇ ಗರಿಷ್ಠ ಲಾಭ ಗಳಿಸಲು ತೈಲವನ್ನು ಮಾರುಕಟ್ಟೆಗೆ ಮುಕ್ತವಾಗಿ ಹರಿಸಲು ಬಯಸಿತು. ತನ್ನ ಮಾತಿಗೆ ಬೆಲೆ ಸಿಗದೇ ಇದ್ದಾಗ 1967 ರಿಂದ ಸುಮಾರು 59 ವರ್ಷಗಳ ಕಾಲ ಒಕ್ಕೂಟದ ಪ್ರಮುಖ ಸದಸ್ಯನಾಗಿದ್ದ ಯುಎಇ ಮೇ 1, 2026 ರಿಂದ ಜಾರಿಗೆ ಬರುವಂತೆ ಒಪೆಕ್‌ನಿಂದ ಅಧಿಕೃತವಾಗಿ ಹೊರನಡೆದಿದೆ.
ಯುಎಇ ತನ್ನ ಪ್ರಮುಖ ತೈಲವಾದ ಮರ್ಬನ್ ಕ್ರೂಡ್‌ಗಾಗಿ (Murban Crude) ಸ್ವಂತ ಫ್ಯೂಚರ್ಸ್ ಎಕ್ಸ್ಚೇಂಜ್ (IFAD) ಅನ್ನು ಸ್ಥಾಪಿಸಿದೆ. ಒಪೆಕ್‌ನಿಂದ ಹೊರಬರುವುದರಿಂದ ಯುಎಇ ಯಾವುದೇ ನಿರ್ಬಂಧಗಳಿಲ್ಲದೆ, ಏಷ್ಯಾದ ತನ್ನ ಪ್ರಮುಖ ಗ್ರಾಹಕರಾದ ಭಾರತ, ಚೀನಾ ಮತ್ತು ಜಪಾನ್‌ಗೆ ನೇರವಾಗಿ, ಮುಕ್ತವಾಗಿ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ತೈಲವನ್ನು ಮಾರಾಟ ಮಾಡಬಹುದು. ಮುಂದಿನ ದಿನಗಳಲ್ಲಿ ತೈಲ ಪೊರೈಕೆ ಹೆಚ್ಚಾಗಲಿರುವ ಕಾರಣ ಸೌದಿ ಅರೇಬಿಯಾ ಈಗ ಬೆಲೆ ಇಳಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತಕ್ಕೆ ಏನು?
ಭಾರತವು ತನ್ನ ಅಗತ್ಯದ 85% ಕ್ಕೂ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಈ 11 ಡಾಲರ್ ಕಡಿತವು ಭಾರತದ ಪಾಲಿಗೆ ವರದಾನವಾಗಿದೆ. ಭಾರತದ ಆಮದು ಬಿಲ್ ಗಣನೀಯವಾಗಿ ಕಡಿಮೆಯಾಗುವುದರಿಂದ, ದೇಶದಿಂದ ಹೊರಹೋಗುವ ವಿದೇಶಿ ವಿನಿಮಯ ಆಸ್ತಿ (Foreign Exchange Reserves) ಉಳಿಯುತ್ತದೆ. ಇದು ಭಾರತೀಯ ರೂಪಾಯಿ ಅಪಮೌಲ್ಯಗೊಳ್ಳದಂತೆ ತಡೆಯಲು ಮತ್ತು ದೇಶದ ವಿತ್ತೀಯ ಕೊರತೆಯನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ.
ಕಚ್ಚಾ ತೈಲದ ಬೆಲೆ ಇಳಿಕೆಯಾದರೆ ಸಾರಿಗೆ ವೆಚ್ಚ ಕಡಿಮೆಯಾಗುತ್ತದೆ.ತರಕಾರಿ, ಹಾಲು ಮತ್ತು ದಿನಸಿ ಸಾಮಗ್ರಿಗಳ ಸಾಗಣೆ ವೆಚ್ಚ ಇಳಿಕೆಯಾಗುವುದರಿಂದ ಚಿಲ್ಲರೆ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಸರಕಾರಕ್ಕೆ ತೈಲ ಕಂಪನಿಗಳಿಗೆ ನೀಡಬೇಕಾದ ಸಬ್ಸಿಡಿ ಹೊರೆ ತಪ್ಪುವುದರಿಂದ, ಆ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ (Infrastructure) ಅಭಿವೃದ್ಧಿಗೆ ಬಳಸಬಹುದು.
ಯಾವ ವಲಯಕ್ಕೆ ಏನು ಲಾಭ?
ವಿಮಾನಯಾನ ಸಂಸ್ಥೆಗಳ 40% ರಷ್ಟು ವೆಚ್ಚ ಇಂಧನದ್ದೇ ಆಗಿರುತ್ತದೆ. ಕಡಿಮೆ ಬೆಲೆಯಲ್ಲಿ ಇಂಧನ ಸಿಕ್ಕಿದಾಗ ವಿಮಾನ ಟಿಕೆಟ್ ದರಗಳು ಕಡಿಮೆಯಾಗಬಹುದು. ಪೇಂಟ್ ತಯಾರಿಕೆಯಲ್ಲಿ ಕಚ್ಚಾ ತೈಲದ ಉಪ-ಉತ್ಪನ್ನಗಳನ್ನು ಬಳಸಲಾಗುತ್ತದೆ. ಇವುಗಳ ಉತ್ಪಾದನಾ ವೆಚ್ಚ ಇಳಿಕೆಯಾಗಲಿದೆ. ಇಂಧನ ಬೆಲೆ ಇಳಿಕೆಯಾದರೆ ವಾಹನಗಳ ಮಾರಾಟ ಮತ್ತು ಬಳಕೆ ಹೆಚ್ಚಾಗುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಿಂ, ಹಿಂದೂಸ್ತಾನ್ ಪೆಟ್ರೋಲಿಯನಂತಹ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಜಾಗತಿಕವಾಗಿ ಹೆಚ್ಚಿನ ಬೆಲೆಗೆ ತೈಲ ಖರೀದಿಸಿ, ದೇಶದಲ್ಲಿ ಸ್ಥಿರ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ನಷ್ಟ ಅನುಭವಿಸುತ್ತಿದ್ದವು. ಈಗ ಸೌದಿಯ ಭಾರಿ ರಿಯಾಯಿತಿಯಿಂದಾಗಿ ಈ ಕಂಪನಿಗಳ ಗ್ರಾಸ್ ರಿಫೈನ್ ಮಾರ್ಜಿನ್(GRM) ಅಂದರೆ ಒಂದು ಬ್ಯಾರೆಲ್ ತೈಲವನ್ನು ಸಂಸ್ಕರಿಸಿದಾಗ ಸಿಗುವ ಲಾಭಾಂಶ ಹೆಚ್ಚಾಗಲಿದೆ. ಇದು ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಗಳ ಮೌಲ್ಯ ಹೆಚ್ಚಾಗಲು ಕಾರಣವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸೌದಿ ಅರೇಬಿಯಾದ ಈ ದರ ಕಡಿತವು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ರಾಜನಾಗಿ ಮುಂದುವರಿಯಲು ಆಡಿದ ದಾಳವಾಗಿದೆ. ಭಾರತದ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಸೌದಿ ಮತ್ತು ಯುಎಇ ನಡುವೆ ತೀವ್ರ ಪೈಪೋಟಿ ಇದೆ. ಆದರೆ ಯುಎಇ ಇಲ್ಲಿ ಒಂದು ಹೆಜ್ಜೆ ಮುಂಚೂಣಿಯಲ್ಲಿದೆ. ಭಾರತ ಮತ್ತು ಯುಎಇ ನಡುವೆ ಸಮಗ್ರ ಆರ್ಥಿಕ ಪಾಲುದಾರಿ ಒಪ್ಪಂದ (CEPA) ಇರುವುದರಿಂದ ಇವೆರಡೂ ದೇಶಗಳ ನಡುವಿನ ವ್ಯಾಪಾರ ಸುಲಭವಾಗಿದೆ.
ಭಾರತವು ಯುಎಇ ಜೊತೆ ಹೆಚ್ಚು ವ್ಯಾಪಾರ ವೃದ್ಧಿಸಿಕೊಳ್ಳುತ್ತಿರುವುದನ್ನು ಕಂಡು, ಭಾರತವನ್ನು ತನ್ನ ಪ್ರಮುಖ ಗ್ರಾಹಕನನ್ನಾಗಿ ಉಳಿಸಿಕೊಳ್ಳಲು ಸೌದಿ ಅರೇಬಿಯಾ ಈ ಭಾರಿ ರಿಯಾಯಿತಿಯ ಆಫರ್ ಘೋಷಿಸಿದೆ. ರಷ್ಯಾದಿಂದ ಈಗಾಗಲೇ ಅಗ್ಗದ ತೈಲ ಪಡೆಯುತ್ತಿದ್ದ ಭಾರತಕ್ಕೆ, ಈಗ ಸೌದಿಯೂ ರಿಯಾಯಿತಿ ನೀಡಿರುವುದು ಬೆಲ್ಲದ ಮೇಲೆ ಜೇನು ಸುರಿದಂತೆ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡಲಿದೆ.
