ಮುಂಬೈ: ಪ್ರತಿಷ್ಠಿತ ಐಐಟಿ ಬಾಂಬೆಯ (IIT Bombay) ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ(Sahil Wakode) ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ.
ಸೆಪ್ಟೆಂಬರ್ 18ರಂದು ಪರೀಕ್ಷಾ ಕೊಠಡಿಯಲ್ಲಿ ಸಾಹಿಲ್ ಮೊಬೈಲ್ ಫೋನ್(Mobile Phone) ಬಳಸುತ್ತಿರುವ ಹಾಗೂ ಇನ್ವಿಜಿಲೇಟರ್ ಆಗಿದ್ದ ಪ್ರಾಧ್ಯಾಪಕರು ಆತನನ್ನು ವಿಚಾರಿಸಿ ಕೊಠಡಿಯಿಂದ ಹೊರಗೆ ಕಳುಹಿಸುತ್ತಿರುವ ದೃಶ್ಯಗಳು ಸಿಸಿಟಿವಿ(CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತನಿಖಾ ತಂಡವು, ಸಾಹಿಲ್ ಪರೀಕ್ಷಾ ಸಭಾಂಗಣದಿಂದ ಹೊರಬಂದು ಹಾಸ್ಟೆಲ್ ತಲುಪುವವರೆಗಿನ ಕ್ಷಣ-ಕ್ಷಣದ ಘಟನಾವಳಿಗಳನ್ನು ಮರುಪರಿಶೀಲಿಸುತ್ತಿದೆ.
PHONE IN HAND IN EXAM HALL.
First CCTV Visuals of Sahil Wakode in the examination hall. Wakode hands the phone to invigilator. pic.twitter.com/X95AtiBXjy
— Rahul Shivshankar (@RShivshankar) September 23, 2026
ದೃಶ್ಯದಲ್ಲೇನಿದೆ?
ಸೆಪ್ಟೆಂಬರ್ 18ರಂದು ಮಧ್ಯಾಹ್ನ 11 ರಿಂದ 1 ಗಂಟೆಯವರೆಗೆ ಮಧ್ಯಂತರ ಪರೀಕ್ಷೆ (Mid Semester Exam) ನಡೆಯುತ್ತಿತ್ತು. ಮಧ್ಯಾಹ್ನ ಸುಮಾರು 12:30 ರಿಂದ 12:45 ರ ಸಮಯದಲ್ಲಿ (ಪರೀಕ್ಷೆ ಮುಗಿಯಲು ಕೇವಲ 15 ನಿಮಿಷ ಬಾಕಿ ಇದ್ದಾಗ), ಸಾಹಿಲ್ ಸ್ವಲ್ಪ ಬಾಗಿ ತನ್ನ ಜೇಬಿನಲ್ಲಿದ್ದ ಮೊಬೈಲ್ ನೋಡುತ್ತಿರುವುದು ದೃಶ್ಯದಲ್ಲಿದೆ.
ಇದನ್ನು ಗಮನಿಸಿದ ಇನ್ವಿಜಿಲೇಟರ್ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ(Professor Suryanarayana Doolla) ಅವರು ಸಾಹಿಲ್ ಬಳಿ ಬಂದು ಪ್ರಶ್ನಿಸಿದ್ದು, ಬಳಿಕ ಇತರ ವಿದ್ಯಾರ್ಥಿಗಳಿಂದ ದೂರಕ್ಕೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಬಳಿಕ ಸಾಹಿಲ್ ಪರೀಕ್ಷಾ ಕೊಠಡಿಯಿಂದ ಹೊರನಡೆದಿದ್ದು, ಮಧ್ಯಾಹ್ನ 1:25 ರ ಸುಮಾರಿಗೆ ಆತ ಕ್ಯಾಂಪಸ್ ದಾಟಿ ತನ್ನ ಹಾಸ್ಟೆಲ್ ಕೊಠಡಿ ಪ್ರವೇಶಿಸಿರುವುದು ಲಾಂಜ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಆತ ಕೊಠಡಿಯಿಂದ ಹೊರಬಂದಿಲ್ಲ. ಕೆಲವೇ ಗಂಟೆಗಳ ಬಳಿಕ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಘಟನೆಯ ನಂತರ ಸಾಹಿಲ್ ತಂದೆ ರವೀಂದ್ರ ವಾಕೋಡೆ ಅವರು ದೂರು ದಾಖಲಿಸಿದ್ದು, ಮಗನ ಮೇಲೆ ಕಾಲೇಜಿನಲ್ಲಿ ಜಾತಿ ಆಧಾರಿತ ಕಿರುಕುಳ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊವೈ ಠಾಣಾ ಪೊಲೀಸರು ಪ್ರೊಫೆಸರ್ ದೂಲ್ಲಾ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು. ತರುವಾಯ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ.
ಆರಂಭದಲ್ಲಿ ಸಾಹಿಲ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಚಾಟ್‌ಜಿಪಿಟಿಗೆ (ChatGPT) ಅಪ್‌ಲೋಡ್ ಮಾಡಿ ಉತ್ತರ ಹುಡುಕುತ್ತಿದ್ದ ಎಂದು ಸಂಸ್ಥೆ ಹೇಳಿಕೆ ನೀಡಿತ್ತು. ಆದರೆ ತನಿಖೆ ಪೂರ್ಣಗೊಳ್ಳುವ ಮೊದಲೇ ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಸಂಸ್ಥೆಯು ನಂತರ ಕ್ಷಮೆಯಾಚಿಸಿತ್ತು.ಕ್ರೈಂ ಬ್ರಾಂಚ್ ಅಧಿಕಾರಿಗಳು ಸಾಹಿಲ್ ಹಾಸ್ಟೆಲ್ ಕೊಠಡಿಯನ್ನು ತೀವ್ರ ಶೋಧ ನಡೆಸಿದ್ದು, ಸ್ಥಳ ಮಹಜರು ಮಾಡಿದ್ದಾರೆ. ಸದ್ಯದವರೆಗೆ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿ 18 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಇನ್ನೊಂದೆಡೆ, ಐಐಟಿ ಬಾಂಬೆಯ ಅಧ್ಯಾಪಕರ ಸಂಘವು (Faculty Forum) ಪ್ರೊಫೆಸರ್ ದೂಲ್ಲಾ ಪರವಾಗಿ ನಿಂತಿದ್ದು, “ಅವರು ಪರೀಕ್ಷಾ ಅಕ್ರಮ ತಡೆಯಲು ತಮ್ಮ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದಾರೆ” ಎಂದು ಬೆಂಬಲ ಸೂಚಿಸಿದೆ.
ಪ್ರಸ್ತುತ ಪರೀಕ್ಷಾ ಕೊಠಡಿಯಿಂದ ಹಾಸ್ಟೆಲ್ ಕೋಣೆಯವರೆಗಿನ ಸಂಪೂರ್ಣ ಸಿಸಿಟಿವಿ ಮಾರ್ಗವನ್ನು ಪರಿಶೀಲಿಸುತ್ತಿರುವ ಕ್ರೈಂ ಬ್ರಾಂಚ್, ವಿದ್ಯಾರ್ಥಿ ಯಾವ ಒತ್ತಡದಿಂದ ಈ ಕಠಿಣ ನಿರ್ಧಾರ ಕೈಗೊಂಡ ಎಂಬುದರ ಬಗ್ಗೆ ಸಮಗ್ರ ತನಿಖೆ ಮುಂದುವರಿಸಿದೆ.

